Advertisement

2.38 ಲಕ್ಷ  ಕುಟುಂಬಕ್ಕೆ ಅನ್ನಭಾಗ್ಯ ಹಣ ಪಾವತಿ

03:34 PM Jul 27, 2023 | Team Udayavani |

ಚಿಕ್ಕಬಳ್ಳಾಪುರ: 5 ಕೆ.ಜಿ. ಅಕ್ಕಿ ಬದಲಾಗಿ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಹಣ ಜಿಲ್ಲೆಯಲ್ಲಿರುವ ಅಂತ್ಯೋದಯ ಅನ್ನ ಯೋಜನೆ (ಎಎವೈ) ಹಾಗೂ ಆದ್ಯತಾ ಪಡಿತರ ಚೀಟಿ ಹೊಂದಿರುವ ಬರೋಬರಿ 2,38 ಲಕ್ಷ ಕುಟುಂಬಗಳಿಗೆ ಒಟ್ಟು 13,19 ಕೋಟಿ ಹಣ ವರ್ಗಾವಣೆಗೊಂಡಿದೆ.

Advertisement

ನೇರ ನಗದು ಯೋಜನೆಅಡಿಯಲ್ಲಿ ಜಿಲ್ಲೆಯಲ್ಲಿ ಮಂಗಳವಾರವಾರದಿಂದ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆಗೆ ಚಾಲನೆ ನೀಡಿರುವ ಜಿಲ್ಲಾಡಳಿತ, ಬ್ಯಾಂಕ್‌ ಖಾತೆ ಹೊಂದಿ ರುವ ಅರ್ಹ ಎಲ್ಲಾ ಫ‌ಲಾನುಭವಿಗಳಿಗೆ ತಿಂಗಳಾಂತ್ಯಕ್ಕೆ ಹಣ ಜಮೆ ಮಾಡಲಿದ್ದು, ಈಗಾಗಲೇ ಜಿಲ್ಲೆಗೆ ಒಟ್ಟು 17.85 ಕೋಟಿ ಅನುದಾನ ಬಿಡುಗಡೆ ಆಗಿದೆ. ಸರ್ಕಾರದ ಆದೇಶದನ್ವಯ ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫ‌ಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸ ಲಾಗುವ 5 ಕೆ.ಜಿ ಆಹಾರ ಧಾನ್ಯದೊಂದಿಗೆ, ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5.ಕೆ.ಜಿ ಆಹಾರ ಧಾನ್ಯವನ್ನು ಸೇರಿಸಿ ಪ್ರತಿ ತಿಂಗಳು ಪ್ರತಿ ಫ‌ಲಾನುಭವಿಗೆ ತಲಾ 10 ಕೆ.ಜಿ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲು ಉದ್ದೇಶಿಸಿದ್ದು, ಆದರೆ ಅಕ್ಕಿ ಕೊರತೆಯಿಂದಾಗಿ ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫ‌ಲಾನುಭವಿಗೆ ಪ್ರತಿ ತಿಂಗಳು 5 ಕೆ.ಜಿ ಆಹಾರ ಧಾನ್ಯ ಬದಲಾಗಿ ಪ್ರತಿ ಕೆ.ಜಿಗೆ ರೂ.34.00 ರಂತೆ ಪಡಿತರ ಚೀಟಿಯಲ್ಲಿನ ಮುಖ್ಯಸ್ಥರ ಖಾತೆಗೆ ಡಿಬಿಟಿ ಮೂಲಕ ಅನ್ನ ಯೋಜನೆಯ ಹಣವನ್ನು ವರ್ಗಾಯಿಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನ್ನಭಾಗ್ಯ ಹಣ ವರ್ಗಾವಣೆಗೆ ಜಿಲ್ಲಾದ್ಯಂತ ಚಾಲನೆ ನೀಡಿದೆ.

3,577 ಕುಟುಂಬಗಳ ಫ‌ಲಾನುಭವಿಗಳಿಗೆ ಇಲ್ಲ ಹಣ: ಜಿಲ್ಲೆಯಲ್ಲಿ ಸರಿ ಸುಮಾರು 36,577 ಫ‌ಲಾನುಭವಿ ಕುಟುಂಬಗಳು ಇನ್ನೂ ಬ್ಯಾಂಕ್‌ ಖಾತೆ ಹೊಂದಿಲ್ಲದೆ, ಬ್ಯಾಂಕ್‌ ಖಾತೆಗೆ ಆಧಾರ್‌ಲಿಂಕ್‌ ಮಾಡಿಸದೇ, ಬ್ಯಾಂಕಿನಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ ಇರುವುದರಿಂದ ಡಿಬಿಟಿ ಮೂಲಕ ಅನ್ನಭಾಗ್ಯ ಯೋಜನೆಯ ಹಣವನ್ನು ವರ್ಗಾಯಿಸಲು ಸಾಧ್ಯವಾಗಿಲ್ಲ. ಇಂತಹ ಫ‌ಲಾನುಭವಿಗಳ ಪಟ್ಟಿಯನ್ನು ಈಗಾಗಲೇ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರದರ್ಶಿಸಿರುವ ಆಹಾರ ಇಲಾಖೆ, ಕೂಡಲೇ ಇ-ಕೆವೈಸಿ ಮಾಡಿಸುವಂತೆ ಸೂಚಿಸಿದೆ.

ಜಿಲ್ಲೆಯಲ್ಲಿರುವ ಒಟ್ಟು 2,38,224 ಕುಟುಂಬಗಳಿಗೆ ಒಟ್ಟು 13,19,20,970 ರು,ಗಳನ್ನು ನೇರ ನಗದು ಪಾವತಿ (ಡಿಬಿಟಿ) ಮೂಲಕ ಗ್ರಾಹಕರ ಬ್ಯಾಂಕ್‌ ಖಾತೆಗೆ ಮಂಗಳವಾರದಿಂದ ವರ್ಗಾವಣೆ ಮಾಡಲಾಗಿದ್ದು, ಹಂತ ಹಂತವಾಗಿ ತಿಂಗಳಾಂತ್ಯಕ್ಕೆ ಎಲ್ಲಾ ಫ‌ಲಾನುಭವಿಗಳ ಖಾತೆಗೆ ಅನ್ನಭಾಗ್ಯದ ಹಣ ಜಮೆ ಆಗಲಿದೆ. ಬ್ಯಾಂಕ್‌ ಖಾತೆ ಇದ್ದು ಆಧಾರ್‌ಲಿಂಕ್‌ ಮಾಡದೇ ಇರುವರು ಕೂಡಲೇ ಬ್ಯಾಂಕ್‌ಗೆ ತೆರಳಿ ಆಧಾರ್‌ಲಿಂಕ್‌ ಮಾಡಿಸಬೇಕು. – ಪಿ.ಸವಿತಾ, ಉಪ ನಿರ್ದೇಶಕರು, ಆಹಾರ ಇಲಾಖೆ

– ಕಾಗತಿ ನಾಗರಾಜಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next