ದಾವಣಗೆರೆ: ಆದಷ್ಟು ಬೇಗ ಬಿಪಿಎಲ್, ಎಪಿಎಲ್ ಕಾರ್ಡ್‌ಗಳ ಪರಿಷ್ಕರಿಸಿ ಎಲ್ಲ ಕಾರ್ಡ್‌ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿಯ ಹಣ ಜಮೆ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಒಟ್ಟು 1.28 ಕೋಟಿಯಷ್ಟು ಕಾರ್ಡ್‌ಗಳ ಪೈಕಿ 1.7 ರಿಂದ 1.10 ಕೋಟಿ ಕಾರ್ಡ್‌ಗಳಿಗೆ ಐದು ಕೆಜಿಯ ಅಕ್ಕಿ ಹಣ ಪಾವತಿಸಲಾಗಿದೆ. ಇನ್ನು ಕೆಲ ದಿನಗಳಲ್ಲಿ ಆಗಸ್ಟ್ ತಿಂಗಳ ಎಲ್ಲ ಹಣ ನೀಡಲಾಗುವುದು. ಆದಷ್ಟು ಬೇಗ ಅಕ್ಕಿ ವಿತರಣೆ ಆದಷ್ಟು ಬೇಗ ಮಾಡಲಾಗುವುದು ಎಂದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿತ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನೇ ಯೋಜನೆ ಗೃಹಲಕ್ಷ್ಮೀ ಯೋಜನೆಗೆ ಆ. 30 ರಂದು ಮೈಸೂರಿನಲ್ಲಿ ಚಾಲನೆ ನೀಡಲಾಗುವುದು. ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತರ ಅನೇಕ ಮುಖಂಡರು ಭಾಗವಹಿಸುವರು. ಡಿಸೆಂಬರ್‌ನಲ್ಲಿ ಯುವನಿಧಿ ಯೋಜನೆಯನ್ನೂ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ 21 ಲಕ್ಷದಷ್ಟು ಕಾರ್ಡ್‌ಗಳಿಗೆ ಬ್ಯಾಂಕ್ ಖಾತೆ ಇರಲಿಲ್ಲ. 7 ರಿಂದ 8 ಲಕ್ಷ ಕಾರ್ಡ್‌ಗಳಿಗೆ ಖಾತೆ ಮಾಡಿಸಲಾಗಿದೆ. ಹಾಗಾಗಿ ಹಣ ಜಮೆ ವಿಳಂಬವಾಗಿತ್ತು. ಎಲ್ಲ ಕಾರ್ಡ್‌ಗಳ ಪರಿಷ್ಕರಣೆ ನಂತರ ಹಣ ಜಮೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡುತ್ತಿರುವುದನ್ನ ಎಲ್ಲರೂ ಸ್ವಾಗತಿಸಿದ್ದಾರೆ. ಅನ್ನಭಾಗ್ಯ ನಿಜಕ್ಕೂ ಒಳ್ಳೆಯ ಯೋಜನೆ. ಯಾವುದೇ ಗೊಂದಲಗಳಿಲ್ಲ ಎಂದು ತಿಳಿಸಿದರು.