ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಗುರುವಾರ ರಾತ್ರಿ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಫ್ಲೆಯಿಂಗ್ ಸ್ಕ್ವಾಡ್ ತಂಡದವರು ಜಪ್ತಿ ಮಾಡಿಕೊಂಡಿರುವ ಘಟನೆ ನಡೆದಿದೆ. ಕೆಸ್ತೂರು ಗ್ರಾಮದ ಬಳಿ ಟಾಟಾ ಸುಮೋ ದಲ್ಲಿ ಅಕ್ರಮವಾಗಿ ಪಡಿತರದ ಅನ್ನಭಾಗ್ಯ ಅಕ್ಕಿಯನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ಬಗ್ಗೆ ಕರ್ತವ್ಯದಲ್ಲಿದ್ದ ಚುನಾವಣಾ ಅಧಿಕಾರಿಗಳ ತಂಡ ಅನುಮಾನಗೊಂಡು ವಾಹನವನ್ನು ತಡೆದಿದ್ದಾರೆ. ಆಗ ಚಾಲಕ ವಾಹನವನ್ನು ಅಲ್ಲೇ ನಿಲ್ಲಿಸಿ ಪರಾರಿಯಾಗಿದ್ದಾನೆ. ನಂತರ ವಾಹನವನ್ನು ಪಟ್ಟಣದ ಪೊಲೀಸ್ ಠಾಣೆಗೆ ತರಲಾಗಿದ್ದು. ವಾಹನ ಹಾಗೂ 43 ಅಕ್ಕಿ ಮೂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಒಟ್ಟು 20ಕ್ವಿಂಟಾಲ್ 62 ಕಿಲೋ ಅಕ್ಕಿ ಇತ್ತು. ಅನ್ನಭಾಗ್ಯ ಯೋಜನೆಯ ಅಕ್ಕಿ ಇದಾಗಿದೆ. ಚಾಲಕ ಪರಾರಿಯಾಗಿರುವುದರಿಂದ ವಾಹವನ್ನು ಜಪ್ತಿ ಮಾಡಿಕೊಂಡು ದೂರು ದಾಖಲಿಸಿಕೊಳ್ಳ ಲಾಗಿದ್ದು ಮುಂದಿನ ಕ್ರಮ ವಹಿಸಲಾಗಿದೆ. ಠಾಣೆಗೆ ಆಹಾರ ಇಲಾಖೆಯ ನಿರೀಕ್ಷಕ ನಾಗರಾಜಯ್ಯ ಭೇಟಿ ನೀಡಿದ್ದರು.