Advertisement
ನಾಲ್ಕು ವರ್ಷದ ಹಿಂದಿನ ಬಜೆಟ್ಟಿನಲ್ಲಿ ಘೋಷಣೆ ಮಾಡಿದ ಸಾವರಿನ್ ಗೋಲ್ಡ್ ಬಾಂಡ್ ರಿಸರ್ವ್ ಬ್ಯಾಂಕ್ ವತಿಯಿಂದ ನಿರಂತರವಾಗಿ ಮಾರಾಟವಾಗುತ್ತಲೇ ಬರುತ್ತಿದೆ. ಸಾವರಿನ್ ಗೋಲ್ಡ್ ಬಾಂಡ್ ಎಂದರೆ ಭಾರತ ಸರಕಾರವು ನೀಡುವ ಚಿನ್ನದ ಪ್ರತಿರೂಪವಾಗಿರುವ ಒಂದು ಸಾಲಪತ್ರ. ಅಂದರೆ, ಚಿನ್ನದ ಬದಲಿಗೆ ನಾವುಗಳು ಇಟ್ಟುಕೊಳ್ಳಬಹುದಾದ ಸರಕಾರಿ ಸಾಲಪತ್ರ. ದುಡ್ಡು ಕೊಟ್ಟು ಚಿನ್ನದ ಬದಲಾಗಿ ಅದೇ ಮೌಲ್ಯವುಳ್ಳ ಈ ಬಾಂಡುಗಳನ್ನು ಕೊಂಡು ಇಟ್ಟುಕೊಳ್ಳಬಹುದು. ಅವಧಿಯ ಬಳಿಕ ಅದನ್ನು ವಾಪಾಸು ಮಾಡಿ ಪ್ರಚಲಿತ ಚಿನ್ನದ ಮೌಲ್ಯವನ್ನು ರುಪಾಯಿಗಳಲ್ಲಿ ಹಿಂಪಡೆದುಕೊಳ್ಳಬಹುದು. (ಕೈಯಲ್ಲಿ ಇರುವ ಚಿನ್ನವನ್ನು ಕರಗಿಸಿ ಬ್ಯಾಂಕಿನಲ್ಲಿ ಇಡುವ ಗೋಲ್ಡ್ ಮಾನೆಟೈಸೇಶನ್ ಸ್ಕೀಮು ಇದಲ್ಲ) ಇಲ್ಲಿ ಹೂಡಿಕೆಯ ಅವಧಿಯುದ್ದಕ್ಕೂ ಚಿನ್ನದ ಏರಿಳಿತದ ಲಾಭ/ನಷ್ಟಗಳ ಹೊರತಾಗಿ ಶೇ.2.50ರಷ್ಟು ವಾರ್ಷಿಕ ಬಡ್ಡಿಯೂ ದೊರೆಯುತ್ತದೆ.
ವರ್ಷಕ್ಕೆ ಸಾವಿರ ಟನ್ ಚಿನ್ನ ಖರೀದಿವ ಭಾರತ,ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಮಟ್ಟದ ಚಿನ್ನದ ಗ್ರಾಹಕ. ಇತ್ತೀಚೆಗೆ ಚೀನಾ ಈ ಮೊತ್ತವನ್ನು ಮೀರಿಸಿದ್ದು ಇಬ್ಬರೂ ಸೇರಿ ಜಗತ್ತಿನಲ್ಲಿ ಒಟ್ಟು ಉತ್ಪಾದನೆಯ ಪ್ರಮಾಣದಲ್ಲಿ ಶೇ.50ರಷ್ಟು ವಾರ್ಷಿಕ ಚಿನ್ನದ ಮಾರಾಟಕ್ಕೆ ಗ್ರಾಹಕರಾಗಿದ್ದಾರೆ. ಆದರೆ ಭಾರತೀಯರ ಈ ಚಿನ್ನದ ಮೋಹ ಭಾರತ ಸರಕಾರಕ್ಕೆ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇದು ಹೇಗೆಂದರೆ, ಚಿನ್ನ ಆಮದು ಆಗುವಾಗ ಅದರ ಬೆಲೆಯನ್ನು ಡಾಲರ್ ರೂಪದಲ್ಲಿ ನೀಡಬೇಕಾಗುತ್ತದೆ. ಡಾಲರ್‌ಗೆ ಕೊರತೆಯಿರುವ ನಮ್ಮ ದೇಶಕ್ಕೆ ಇದೊಂದು ದೊಡ್ಡ ತಲೆನೋವು. ಜಾಸ್ತಿ ಡಾಲರ್ ಬಳಕೆಯಿಂದ ನಮ್ಮ ರುಪಾಯಿ ವಿನಿಮಯ ದರದಲ್ಲಿ ಏರಿಕೆ ಉಂಟಾಗಿ ಎಲ್ಲಾ ಆಮದುಗಳು ದುಬಾರಿಯಾಗಿ ದೇಶದುದ್ದಗಲಕ್ಕೂ ಬೆಲೆಯೇರಿಕೆಯ ಬಿಸಿ ತಟ್ಟುತ್ತದೆ. ಹಾಗಾಗಿ, ಚಿನ್ನದ ಆಮದಿನ ಮೇಲೆ ಸರಕಾರವು ಯಾವತ್ತೂ ತುಸು ನಿಯಂತ್ರಣವನ್ನು ಹೇರುತ್ತಿರುವುದು ಸಹಜ. ಅದಲ್ಲದೆ ಚಿನ್ನದ ಆಮದಿನ ಪ್ರಮಾಣವನ್ನೂ ಕಡಿತಗೊಳಿಸುವುದು ಸರಕಾರದ ಮುಖ್ಯ ಗುರಿಗಳಲ್ಲಿ ಒಂದು. ಗೋಲ್ಡ್ ಬಾಂಡ್ ಈ ನಿಟ್ಟಿನಲ್ಲಿ ಒಂದು ಪ್ರಯತ್ನ. ಚಿನ್ನದ ಬದಲಾಗಿ ಅದನ್ನೇ ಪ್ರತಿನಿಧಿಸುವ ಮತ್ತು ಅದರ ಬೆಲೆಯನ್ನೇ ಪ್ರತಿಫಲಿಸುವ ಒಂದು ಬಾಂಡ್ ಅಥವಾ ಸಾಲಪತ್ರ ಇದ್ದಲ್ಲಿ ಚಿನ್ನದ ಭೌತಿಕವಾದ ಆಮದನ್ನು ಕಡಿಮೆಗೊಳಿಸಬಹುದಲ್ಲವೇ? ಚಿನ್ನದ ಆಮದು ಕಡಿಮೆಯಾದರೆ ರುಪಾಯಿ ಮೌಲ್ಯವೂ ಸ್ವಸ್ಥವಾಗಿದ್ದು ದೇಶದ ಆರ್ಥಿಕತೆಗೆ ಸಹಕಾರಿಯಾಗಿರುತ್ತದೆ.
Related Articles
ಭಾರತ ಸರಕಾರವು ರಿಸರ್ವ್ ಬ್ಯಾಂಕ್ ಮೂಲಕ ಅಗಾಗ್ಗೆ ಈ ಬಾಂಡುಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಸುಮಾರಾಗಿ ಒಂದೆರಡು ತಿಂಗಳುಗಳಿಗೊಮ್ಮೆ ಸುಮಾರು ಒಂದು ವಾರದ ಅವಧಿಯವರೆಗೆ ಈ ಸಾಲಪತ್ರ ಮಾರಾಟಕ್ಕೆ ಲಭ್ಯವಿರುತ್ತದೆ. ಈ ರೀತಿ ಹಂತ ಹಂತವಾಗಿ ಇಶ್ಯೂ ಆಗುವ ಈ ಬಾಂಡುಗಳಲ್ಲಿ ಒಂದು ಬಾರಿ ಅವಕಾಶ ತಪ್ಪಿದರೆ ಇನ್ನೊಂದು ಬಾರಿಗಾಗಿ ಕಾಯಬೇಕಾಗುತ್ತದೆ.
Advertisement
ಬಿಡುಗಡೆ ಎಲ್ಲಿ?ಈ ಬಾಂಡುಗಳು ಬಹುತೇಕ ಎಲ್ಲಾ ಬ್ಯಾಂಕುಗಳಲ್ಲಿ, ಆಯ್ದ ಪೋಸ್ಟ್ ಆಫೀಸುಗಳಲ್ಲಿ, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಇತ್ಯಾದಿ ಬ್ರೋಕರುಗಳ ಬಳಿಯಲ್ಲಿ ದೊರೆಯುತ್ತವೆ. ಭಾರತ ಸರಕಾರದ ಪರವಾಗಿ ರಿಸರ್ವ್ ಬ್ಯಾಂಕು ಬಿಡುಗಡೆ ಮಾಡುತ್ತಿರುವ ಈ ಬಾಂಡುಗಳು ಕಾಗದ ಅಥವಾ ಡಿಮ್ಯಾಟ್ ರೂಪದಲ್ಲಿ ಬರುತ್ತವೆ ಹಾಗೂ ಬೇಕೆಂದರೆ ಕಾಗದವನ್ನು ಡಿಮ್ಯಾಟ್ ಖಾತೆಗೆ ಪರಿವರ್ತಿಸಿಕೊಳ್ಳಬಹುದು. ಬಾಂಡುಗಳನ್ನು ಏಜೆಂಟರ ಮೂಲಕ ಅಥವಾ ನೇರವಾಗಿ ಬ್ಯಾಂಕುಗಳಿಂದಲೂ ಖರೀದಿಸಬಹುದು. ಓರ್ವ ನಿವಾಸಿ ಭಾರತೀಯ, ಹಿಂದೂ ಅವಿಭಕ್ತ ಕುಟುಂಬ, ಟ್ರಸ್ಟ್, ಯುನಿವರ್ಸಿಟಿ, ಚಾರಿಟೇಬಲ್ ಸಂಸ್ಥೆ, ಹೀಗೆ ಯಾರು ಬೇಕಾದರೂ ಈ ಬಾಂಡುಗಳನ್ನು ಕೊಳ್ಳಬಹುದು. ಅನಿವಾಸಿ ಭಾರತೀಯರು ಈ ಬಾಂಡುಗಳಲ್ಲಿ ಹೂಡಿಕೆ ಮಾಡುವಂತಿಲ್ಲ. ಹೂಡಿಕೆಯ ಮೊತ್ತ:ಅವಧಿ
ಈ ಬಾಂಡ್‌ಗಳು, 1 ಗ್ರಾಮ್ ಚಿನ್ನದ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಒಬ್ಟಾತ ಕನಿಷ್ಠ ಒಂದು ಗ್ರಾಮ್, ಗರಿಷ್ಠ ಮೊತ್ತ 4000 ಗ್ರಾಮ್ ಪ್ರತಿ ವರ್ಷಕ್ಕೆ (ಏಪ್ರಿಲ್-ಮಾರ್ಚ್) ಖರೀದಿಸಬಹುದು. ಈ ಮಿತಿ ಆರಂಭದಲ್ಲಿ 500 ಗ್ರಾಮ್ ಇತ್ತು. ಜಂಟಿ ಖಾತೆಯಲ್ಲಿ ಖರೀದಿಸಿದರೆ ಈ ಮಿತಿ ಮೊದಲ ಹೂಡಿಕೆದಾರರ ಹೆಸರಿನ ಮೇಲೆ ಅನ್ವಯವಾಗುತ್ತದೆ. ಈ ಬಾಂಡ್, 8 ವರ್ಷದ ನಿಶ್ಚಿತ ಅವಧಿಗೆ ಬರುತ್ತದೆ. 8 ವರ್ಷ ಆದಕೂಡಲೇ ಬಾಂಡ್ ಮೆಚೂÂರ್ ಹೊಂದಿ ಅದರ ಮೌಲ್ಯ ಬಾಂಡ್ ಖರೀದಿಸಿದ್ದವರ ಕೈ ಸೇರುತ್ತದೆ. ಆದರೆ 5 ನೇ ವರ್ಷದಿಂದ ಬಾಂಡನ್ನು ವಾಪಾಸು ನೀಡಿ ಮೌಲ್ಯ ವಾಪಾಸು ಪಡೆಯುವ ಅವಕಾಶವೂ ಇದೆ. ಬಾಂಡ್ ವಾಪಸಾತಿಯನ್ನು ಬಡ್ಡಿ ನೀಡುವ ದಿನಾಂಕಗಳಂದು, ಅಂದರೆ ಆರು ತಿಂಗಳುಗಳಿಗೊಮ್ಮೆ- ಮಾತ್ರವೇ ಮಾಡಲು ಸಾಧ್ಯ. ಅದಲ್ಲದೆ, ಮಧ್ಯಾವಧಿಯಲ್ಲಿ ಈ ಬಾಂಡುಗಳನ್ನು ಶೇರುಗಟ್ಟೆಯಲ್ಲಿ ಮಾರಾಟ ಮಾಡಿಯೂ ಕೂಡಾ ಹೂಡಿಕೆಯಿಂದ ಹೊರಬರಬಹುದು. ಬಾಂಡ್ ಮೌಲ್ಯ ಹೇಗೆ?
ಬಾಂಡ್ ಖರೀದಿ ಹಾಗೂ ವಾಪಸಾತಿ ಈ ಎರಡೂ ಸಂದರ್ಭಗಳಲ್ಲೂ, ಬಾಂಡ್ ಮೌಲ್ಯವನ್ನು ಬಿಡುಗಡೆಯ ಹಿಂದಿನ ಸರಾಸರಿ ಚಿನ್ನದ ಬೆಲೆಯ ಮೇರೆಗೆ ನಿಗಧಿಪಡಿಸಲಾಗುತ್ತದೆ. ಅದಕ್ಕಾಗಿ ಒಂದು ಬಿಡುಗಡೆಗೆ ಅದರ ಹಿಂದಿನ ವಾರದ 3 ದಿನಗಳ ಸರಾಸರಿ ಬೆಲೆಯನ್ನು (ಶೇ.99.99ರಷ್ಟು ಶುದ್ಧ ಚಿನ್ನದ್ದು) ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇಂಡಿಯನ್ ಬುಲ್ಲಿಯನ್ ಅಂಡ್ ಜುವೆಲ್ಲರ್ಸ್ ಅಸೋಸಿಯೇಶನ್ ಪ್ರಕಟಿಸುವ ಬೆಲೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಒಮ್ಮೊಮ್ಮೆ ಸರಕಾರವು ಈ ಬಾಂಡುಗಳ ಮೇಲೆ, ಸರಾಸರಿ ಬೆಲೆಗಿಂತಲೂ ತುಸು ಡಿಸ್ಕೌಂಟ್ ಬೆಲೆಗೆ ಬಿಡುಗಡೆ ಮಾಡುವುದಿದೆ. ಅಂತಹ ಸಂದರ್ಭಗಳು ಹೂಡಿಕೆಗೆ ಉತ್ತಮ ಅವಕಾಶ ಒದಗಿಸಿಕೊಡುತ್ತವೆ. ಅದಲ್ಲದೆ ಡಿಜಿಟಲ್ ಪಾವತಿಯ ಮೂಲಕ ಬ್ಯಾಂಕ್ ಜಾಲತಾಣಗಳಲ್ಲಿ ಖರೀದಿ ಮಾಡಿದರೆ ಗ್ರಾಮ್ ಒಂದಕ್ಕೆ 50ರುಪಾಯಿ ರಿಯಾಯಿತಿ ಕೂಡಾ ದೊರೆಯುತ್ತದೆ. ಡಿಜಿಟಲ್ ಕ್ರಾಂತಿಗೆ ಹಾಗೂ ಬಿಳಿಹಣದ ಉತ್ತೇಜನಕ್ಕೆ ಇದು ಒಳ್ಳೆಯ ಅವಕಾಶ ಹಾಗೂ ಗ್ರಾಹಕರಿಗೆ ಇದರಿಂದ ಹೆಚ್ಚುವರಿ ಲಾಭ. ಪ್ರತಿಫಲ: ಸಾಲ
ಈ ಬಾಂಡಿನ ಮೇಲೆ ಶೇ.2.50ರಷ್ಟು ಬಡ್ಡಿ ನಿಗಧಿಸಲಾಗಿದೆ. ಆರಂಭದಲ್ಲಿ ಇದು ಶೇ.2.75ರಷ್ಟು ಇತ್ತು. ಈವಾಗ ಬಡ್ಡಿ ದರ ಇಳಿಕೆಯ ದೆಸೆಯಿಂದ ಇದು ಶೇ.2.50ರಷ್ಟಕ್ಕೆ ಇಳಿದಿದೆ. ಆರು ತಿಂಗಳುಗಳಿಗೊಮ್ಮೆ ಬಾಂಡಿನ ಮೂಲ ಹೂಡಿಕಾ ಮೌಲ್ಯದ ಮೇಲೆ 2.50% ಬಡ್ಡಿಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಸೇರಿಸಲಾಗುತ್ತದೆ. ಕೊನೆಯ ಕಂತಿನ ಬಡ್ಡಿಯನ್ನು ಅಸಲು ಮೊತ್ತವನ್ನು ಹಿಂತಿರುಗಿಸುವಾಗ ಜೊತೆಗೇನೇ ಕೊಡಲಾಗುತ್ತದೆ. ನೈಜ ಚಿನ್ನದಲ್ಲಿ ಮಾಡಿದ ಹೂಡಿಕೆಯಂತೆಯೇ, ಇಲ್ಲೂ ಕೂಡಾ ಬಾಂಡ್ ಮಾರಿ ದುಡ್ಡನ್ನು ಹಿಂಪಡೆಯುವ ಹಂತದಲ್ಲಿ ಆ ಕಾಲಕ್ಕೆ ಪ್ರಚಲಿತವಾದ ಚಿನ್ನದ ಬೆಲೆಯ ಕಾರಣಕ್ಕೆ ಲಾಭ ಅಥವಾ ನಷ್ಟ ಉಂಟಾಗಲಿದೆ. ಆ ನಿಟ್ಟಿನಲ್ಲಿ ಈ ಬಾಂಡ್ ನೈಜ ಚಿನ್ನವನ್ನು ಹೋಲುತ್ತದಾದರೂ ಇಲ್ಲಿ ಸಿಗುವ ಶೇ.2.50ರಷ್ಟು ಬಡ್ಡಿ ನೈಜ ಚಿನ್ನದಲ್ಲಿ ಸಿಗಲಾರದು. ಬಡ್ಡಿಯ ರೂಪದಲ್ಲಿ ಸಿಗುವ ಹೆಚ್ಚವರಿ ಹಣವೇ ಈ ಸ್ಕೀಮಿನ ಹೆಚ್ಚುಗಾರಿಕೆ. ಭೌತಿಕ ಚಿನ್ನದಿಂದ ಹೊರಳಿ, ಚಿನ್ನ ಖರೀದಿಸಲು ಸರಕಾರ ನೀಡುವ ಪ್ರಲೋಭನೆ. ಭೌತಿಕ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವಂತೆ ಈ ಚಿನ್ನದ ಬಾಂಡುಗಳನ್ನೂ ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲ ಪಡೆಯಬಹುದು. ಸಾಮಾನ್ಯ ಗೋಲ್ಡ್ ಲೋನಿಗೆ ಸಿಗುವಷ್ಟೇ ಸಾಲದ ಮೊತ್ತ ಇದರಲ್ಲೂ ಸಿಗಲಿದೆ. ಈ ಬಾಂಡುಗಳ ಖರೀದಿಗೆ ಹೂಡಿಕೆದಾರರ ಕೆವೈಸಿ (ನೋ ಯುವರ್ ಕಸ್ಟಮರ್) ಖಂಡಿತಾ ಬೇಕಾಗುತ್ತದೆ. ಅಂದರೆ ಪ್ಯಾನ್ ಕಾರ್ಡ್, ಗುರುತು ಪುರಾವೆ, ವಿಳಾಸ ಪುರಾವೆ ಇತ್ಯಾದಿಗಳ ಅಗತ್ಯವಿರುತ್ತದೆ. ಚಿನ್ನದ ಮೆಲಿನ ಹೂಡಿಕೆಯಲ್ಲಿ ಆಸಕ್ತಿಯಿರುವವರಿ ಹಾಗೂ ಚಿನ್ನದ ಮೇಲಿನ ಹೂಡಿಕೆಯ ಪ್ರತಿಫಲದ ಮೇಲೆ ಭರವಸೆ ಇರುವವರು ಸಾವರಿನ್ ಗೋಲ್ಡ… ಬಾಂಡ್ ಅನ್ನು ಧಾರಾಳವಾಗಿ ಖರೀದಿಸಬಹುದು. ಮಾರಾಟ ಮಾಡೋದು ಹೇಗೆ?
ಬಾಂಡನ್ನು ಹಿಂತಿರುಗಿಸಿ ಮೌಲ್ಯ ವಾಪಾಸು ಪಡೆಯುವುದರ ಹೊರತಾಗಿ ಈ ಬಾಂಡುಗಳನ್ನು ಶೇರು ಮಾರುಕಟ್ಟೆಯಲ್ಲೂ ಮಾರಾಟ ಮಾಡುವ ಸೌಲಭ್ಯವನ್ನೂ ಸರಕಾರ ಕಲ್ಪಿಸಿದೆ. ಆ ಮೂಲಕ ತುರ್ತಾಗಿ ದುಡ್ಡು ಬೇಕಾದವರು ಬಾಂಡ್ ಮಾರಾಟ ಮಾಡಿ ಹೊರಬರಬಹುದು. ತುಸು ಕಡಿಮೆ ಬೆಲೆಗೆ ಸಿಗುವ ಕಾರಣ, ಖರೀದಿ ಮಾಡುವವರೂ ಕೂಡಾ ಮಾರುಕಟ್ಟೆಯಲ್ಲಿಯೇ ಇದನ್ನು ಖರೀದಿ ಮಾಡಬಹುದು. ಗೋಲ್ಡ್ ಬಾಂಡಿನಲ್ಲಿ ಬರುವ ಬಡ್ಡಿಯ ಆದಾಯದ ಮೇಲೆ ಯಾವುದೇ ರೀತಿಯ ಕರವಿನಾಯಿತಿ ಇಲ್ಲ. ಅಂದರೆ ಪ್ರತಿ ಆರು ತಿಂಗಳುಗಳಿಗೊಮ್ಮೆ ಬರುವ ಶೇ.2.50ರಷ್ಟು (ವಾರ್ಷಿಕ) ಬಡ್ಡಿಯ ಮೇಲೆ ನಿಮ್ಮ ನಿಮ್ಮ ಆದಾಯದ ಸ್ಲಾಬ… ಅನುಸಾರ ಆದಾಯ ಕರ ಕಟ್ಟಬೇಕು. ಆದರೆ, 8 ವರ್ಷಗಳ ಪೂರ್ಣಾವಧಿ ಈ ಬಾಂಡುಗಳಲ್ಲಿ ಹೂಡಿಕೆಯಾಗಿದ್ದು ಕಟ್ಟ ಕಡೆಯಲ್ಲಿ ಬಾಂಡ್ ವಾಪಸಾತಿ ಹಂತದಲ್ಲಿ ದುಡ್ಡು ಹಿಂಪಡಕೊಂಡವರಿಗೆ ಚಿನ್ನದ ಬೆಲೆಯಲ್ಲಿ ಉಂಟಾದ ಮೌಲ್ಯ ವೃದ್ಧಿಯ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಆದರೆ ಮಧ್ಯಾವಧಿಯಲ್ಲಿ ಮಾರುಕಟ್ಟೆಯಲ್ಲಿ ಮಾರಿದಾಗ, ಅದರಲ್ಲಿ ಉಂಟಾದ ಮೌಲ್ಯ ವೃದ್ಧಿಯ ಮೇಲೆ ಮೌಲ್ಯ ವೃದ್ಧಿ ತೆರಿಗೆ (ಕ್ಯಾಪಿಟಲ್
ಗೈನ್ಸ್) ಕಟ್ಟಬೇಕು. ಈ ಕ್ಯಾಪಿಟಲ್ ಗೈನ್ಸ್ ಕರವು ಮೂರು ವರ್ಷಗಳ ಹೂಡಿಕೆಯನ್ನು ಮೀರಿದ್ದರೆ, ದೀರ್ಘಕಾಲಿಕ ಕ್ಯಾಪಿಟಲ್
ಗೈನ್ಸ್ ಕರವಾಗಿರುತ್ತದೆ. ಅಂದರೆ ಇಂಡೆಕ್ಸೇಶನ್ ಬಳಿಕದ ಮೌಲ್ಯವೃದ್ಧಿಯ ಶೇ.20ರಷ್ಟು ಕರ ಕಟ್ಟಬೇಕು. (ಇಂಡೆಕ್ಸೇಶನ್ ಪದ್ಧತಿಯಲ್ಲಿ ಮೂಲ ಹೂಡಿಕೆಯನ್ನು ಬೆಲೆಯೇರಿಕೆಯ ಪ್ರಮಾಣದಷ್ಟು ಹಿಗ್ಗಿಸಿ ಉಳಿದ ಮೊತ್ತದ ಮೇಲೆ ಕರ ಕಟ್ಟಿದರೆ ಸಾಕು) ಮೂರು ವರ್ಷಗಳಿಗಿಂತ ಕಡಿಮೆ ಹೂಡಿಕಾವಧಿಯಾಗಿದ್ದರೆ ಅಲ್ಪಕಾಲಿಕ ಕ್ಯಾಪಿಟಲ್ ಗೈನ್ಸ್ ಲೆಕ್ಕದಲ್ಲಿ ಆಯಾ ವಾರ್ಷಿಕ ಆದಾಯಕ್ಕೆ ಅದನ್ನು ಸೇರಿಸಿ ಅನ್ವಯ ದರದಲ್ಲಿ ತೆರಿಗೆ ಕಟ್ಟಬೇಕು. ಯಾರಿಗೆ ಸೂಕ್ತ?
ಆಭರಣದ ಚಿನ್ನಕ್ಕೆ ಬಾಂಡ್ ಪರ್ಯಾಯವಾಗದು. ಬಾಂಡ್ ಧರಿಸಿ ಮದುವೆ ಸಮಾರಂಭಕ್ಕೆ ಅಟೆಂಡ್ ಆಗುವ ಸಂಪ್ರದಾಯ ನಮ್ಮಲ್ಲಿನ್ನೂ ಬಂದಿಲ್ಲ. ಅಲ್ಲಿ ಚಿನ್ನಕ್ಕೆ ಚಿನ್ನವೇ ಆಗಬೇಕು. ಆದರೆ ಹೂಡಿಕೆಗಾಗಿ ನಾಣ್ಯ/ಬಾರ್‌ಗಳಲ್ಲಿ ಮಾಡುವ ಚಿನ್ನ ಖರೀದಿಗೆ ಇಂತಹ ಗೋಲ್ಡ… ಬಾಂಡುಗಳು ಪರ್ಯಾಯವಾಗಬಲ್ಲವು. ಇಲ್ಲಿ ವಾರ್ಷಿಕ 2.50% ಹೆಚ್ಚುವರಿ ಬಡ್ಡಿ ದೊರಕುತ್ತದೆ. ಆದರೆ ಇದರಲ್ಲಿ ಮಾಡಿದ ಪ್ರತಿಯೊಂದು ಹೂಡಿಕೆಯೂ ಪಕ್ಕಾ ವೈಟ್ ಹಾಗೂ ಅದಕ್ಕೆ ಟ್ಯಾಕ್ಸ್ ಬೀಳುತ್ತದೆ! ಭೌತಿಕ ಚಿನ್ನದ ಮೆಲಿನ ಕ್ಯಾಪಿಟಲ್
ಗೈನ್ಸ್ ಕೂಡಾ ಕರಾರ್ಹವೇ ಆದರೂ, ಜನರು ನಗದು ವ್ಯವಹಾರ ನಡೆಸಿ ಆದಾಯವನ್ನು ಅಡಗಿಸಿಟ್ಟು ಟ್ಯಾಕ್ಸ್‌ಕಟ್ಟದೆ ಹೇಗೋ ಸುಧಾರಿಸಿಕೊಳ್ಳುತ್ತಾರೆ. ಇಲ್ಲಿ ಹಾಗೆ ಮಾಡಲು ಬರುವುದಿಲ್ಲ. ಸಿಗುವ ಬಡ್ಡಿಯನ್ನು ಮತ್ತು ಮಾರುಕಟ್ಟೆಯ ಲಿಸ್ಟಿಂಗ್ ಸೌಲಭ್ಯ ಗಮನಿಸಿದರೆ ಇದು ಚಿನ್ನದ ಇಟಿಎಫ್ಗಳಿಗಿಂತಲೂ ಉತ್ತಮ ಯೋಜನೆ ಹಾಗೂ ಇಟಿಎಫ್ಗಳಲ್ಲಿ ಇರುವ ವೆಚ್ಚದ ಭಾರ ಇಲ್ಲಿ ಇಲ್ಲ. ಇಟಿಎಫ್ಗಳು ನಿಮಗೆ ವಾರ್ಷಿಕ ಶುಲ್ಕ ವಿಧಿಸುತ್ತವೆ ಅಲ್ಲದೆ, ಬಾಂಡ್‌ಗಳಲ್ಲಿ ನೀಡುವಂತೆ ಬಡ್ಡಿ ನೀಡುವುದಿಲ್ಲ. ಇಲ್ಲಿ ಹೆಚ್ಚುವರಿ ಬಡ್ಡಿ ಸಿಗುವುದಾದರೂ ಚಿನ್ನದ ಮಾರುಕಟ್ಟೆಯ ಏರಿಳಿತ ಹಾಗೂ ಆಂತರಿಕ ಏರಿಳಿತಗಳಿಂದ ಈ ಸ್ಕೀಮು ವಿಮುಖವಾಗಿಲ್ಲ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. – ಜಯದೇವ ಪ್ರಸಾದ ಮೊಳೆಯಾರ