ವಾಡಿ: ನ್ಯಾಯಬೆಲೆ ಅಂಗಡಿಯವರು ಕಳೆದ ಎರಡು ತಿಂಗಳಿಂದ ಆಹಾರ ಧಾನ್ಯ ವಿತರಣೆ ಮಾಡಿಲ್ಲ ಎಂದು ಆರೋಪಿಸಿ, ಬಡ ಕುಟುಂಬಗಳು ಪೊಲೀಸ್ ಠಾಣೆಗೆ ಆಗಮಿಸಿ ಮೌಖೀಕವಾಗಿ ದೂರು ನೀಡಿದರು. ಪಟ್ಟಣದ ವಿವಿಧ ಬಡಾವಣೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಕರು, ಸರಕಾರದ ಅನ್ನಭಾಗ್ಯ ಯೋಜನೆಗೆ ಕನ್ನ ಹಾಕುತ್ತಿದ್ದು, ಅನ್ನವಿಲ್ಲದೆ ನಾವು ಗೋಳಾಡುವಂತಾಗಿದೆ.
ಜನವರಿ ತಿಂಗಳಲ್ಲಿ ಪಡಿತರ ವಿತರಿಸುವುದಾಗಿ ಸುಳ್ಳು ಹೇಳಿ ಕೂಪನ್ ಪಡೆದುಕೊಂಡಿದ್ದಾರೆ. ಪಡಿತರ ವಿತರಕರ ಸಂಘ ಕಟ್ಟಿಕೊಂಡು ಸಾಮೂಹಿಕವಾಗಿ ಅನ್ಯಾಯ ಎಸಗುತ್ತಿದ್ದಾರೆ ಎಂದು ದೂರಿದರು. ಕಳೆದ ತಿಂಗಳು ಯಾರಿಗೂ ಪಡಿತರ ಧಾನ್ಯ ವಿತರಿಸಿಲ್ಲ. ಈ ಕುರಿತು ಪ್ರಶ್ನಿಸಿದರೆ ಮೇಲಿನಿಂದಲೇ ಆಹಾರ ಪೂರೈಕೆಯಾಗಿಲ್ಲ ಎನ್ನುತ್ತಾರೆ.
ಅಧಿಕಾರಿಗಳನ್ನು ವಿಚಾರಿಸಿದರೆ, ಜನವರಿ ತಿಂಗಳ ಆಹಾರ ಧಾನ್ಯ ವಿತರಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಒಬ್ಬರು ಇನ್ನೊಬ್ಬರತ್ತ ಬೊಟ್ಟು ಮಾಡಿ ತೋರಿಸುವ ಮೂಲಕ ನಮ್ಮ ಅನ್ನವನ್ನು ಕಸಿದುಕೊಂಡಿದ್ದಾರೆ ಎಂದು ಪಡಿತರ ವಂಚಿತರು ಆರೋಪಿಸಿದರು. ಫೆಬ್ರವರಿ ತಿಂಗಳು ಆರಂಭಗೊಂಡು 20 ದಿನಗಳಾದರೂ ಪಡಿತರ ವಿತರಣೆಗೆ ಮುಂದಾಗಿಲ್ಲ.
ಜನವರಿ ಧಾನ್ಯ ಕೇಳಬೇಡಿ. ಫೆಬ್ರವರಿ ತಿಂಗಳ ದಾನ್ಯ ಮಾತ್ರ ವಿತರಿಸುತ್ತೇವೆ ಎನ್ನುತ್ತಿದ್ದಾರೆ. ಸೀಮೆ ಎಣ್ಣೆಯನ್ನು ಸ್ಥಗಿತಗೊಳಿಸಿದ್ದಾರೆ. ನಾವು ಬದುಕುವುದಾದರೂ ಹೇಗೆ ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಎರಡು ತಿಂಗಳ ಪಡಿತರ ಸಿಗುವಂತೆ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದರು.
ಪಡಿತರ ಸಿಕ್ಕಿಲ್ಲ ಎಂದಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿರಿ. ಠಾಣೆಗೆ ಯಾಕೆ ಬಂದ್ರಿ ಹೋಗ್ರಿ ಎಂದು ಪೊಲೀಸರು ತಳ್ಳಿಹಾಕಿದ್ದಕ್ಕೆ ಮಹಿಳೆಯರು ಅತೃಪ್ತಿ ವ್ಯಕ್ತಪಡಿಸುತ್ತ ನಿರಾಸೆಯಿಂದ ಮನೆಗೆ ಮರಳಿದರು. ಆಮ್ ಆದಮಿ ಪಕ್ಷದ ಮಹಮದ್ ರμàಕ್, ರಾಜು ಕಧಂ, ಅಬ್ದುಲ ಸಲೀಮ, ಖದೀರ್ ಸೇರಿದಂತೆ ಅನೇಕ ಮಹಿಳೆಯರು ಈ ಸಂದರ್ಭದಲ್ಲಿದ್ದರು.