Advertisement

ಅನ್ನಭಾಗ್ಯ ಅಕ್ಕಿ ಕಡಿತ ಖಂಡಿಸಿ ಪತ್ರ ಚಳವಳಿ

05:32 PM Mar 08, 2020 | Suhan S |

ಮೈಸೂರು: ಅನ್ನಭಾಗ್ಯ ಯೋಜನೆಯ ಅಕ್ಕಿ ಕಡಿತಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು.

Advertisement

ಮಹಾ ನಗರಪಾಲಿಕೆ ಎದುರಿನ ಅಂಚೆ ಡಬ್ಬಕ್ಕೆ ಪತ್ರ ಹಾಕಿ ಚಳಿವಳಿ ನಡೆಸಿದ ಸಂಘಟನೆಗಳ ಮುಖಂಡರು ಸರ್ಕಾರದ ನಡೆಯನ್ನು ಖಂಡಿಸಿದರು.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹಸಿವಿನಿಂದ ಸಾಯುವ ಲಕ್ಷಾಂತರ ಜನರ ಅಮೂಲ್ಯ ಜೀವಗಳನ್ನು ಉಳಿಸಲು ಅನ್ನಭಾಗ್ಯ ಯೋಜನೆ ಘೋಷಿಸಿ, ತಮ್ಮ ಅಧಿಕಾರಾವಧಿಯಲ್ಲಿ ಅಲಕ್ಷಿತ ಜನರ ಹಸಿವು ನೀಗಿಸಿ ನಿಜವಾದ ಅರ್ಥದಲ್ಲಿ ಅನ್ನಭಾಗ್ಯದಾತ ಎಂಬ ಗೌರವಕ್ಕೆ ಭಾಜನರಾದರು. ಆದರೆ, ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಆರ್ಥಿಕ ಸಂಪನ್ಮೂಲಗಳ ಕೊರತೆಯ ನೆಪದಲ್ಲಿ ಪ್ರಜೆಗಳ ಆಹಾರ ಭದ್ರತೆಗೆ ವಿರುದ್ಧವಾಗಿ ಬಜೆಟ್‌ ಮಂಡಿಸಿ ಅಸಂಖ್ಯಾತ ಬಡವರ ಬದುಕುವ ಮೂಲಭೂತ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಾರಿಯ ಬಜೆಟ್‌ನಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿದ್ದ 7 ಕೆ.ಜಿ. ಅಕ್ಕಿ ಬದಲಾಗಿ 2 ಕೆ.ಜಿ. ಅಕ್ಕಿ ಕಡಿತಗೊಳಿಸಿ, 2 ಕೆ.ಜಿ. ಗೋಧಿ-ರಾಗಿ ನೀಡಲು ಹೊರಟಿರುವುದು ಖಂಡನೀಯ. ಬಡವರ ಬಗ್ಗೆ ಕಾಳಜಿಯಿದ್ದರೆ, 2 ಕೆ.ಜಿ. ಅಕ್ಕಿ ಕಡಿತ ಮಾಡದೆ ಗೋಧಿ- ರಾಗಿ ಕೊಡಬಹುದಿತ್ತು. ಯಡಿಯೂರಪ್ಪ, ಯಾವುದೋ ಹುನ್ನಾರಕ್ಕೆ ಬಲಿಯಾಗಿ ಬಡವರ ಅನ್ನ ಕೀಳುವ ಕಾರ್ಯಕ್ಕೆ ಕೈಹಾಕಿರುವುದು ತೀವ್ರ ಖಂಡನೀಯ. ಬಡವರ ಪರ ಕಾಳಜಿ, ಹಸಿವು ಮುಕ್ತ ಕರ್ನಾಟಕದ ಪರಿಕಲ್ಪನೆ ಮುಖ್ಯಮಂತ್ರಿ ಯವರಿಗಿದ್ದರೆ, ಈ ಕೂಡಲೇ ರಾಗಿ-ಗೋಧಿ ಜೊತೆಗೆ ಇನ್ನು ಮುಂದೆ 10 ಕೆ.ಜಿ. ಅಕ್ಕಿ ನೀಡಿ ಆ ವರ್ಗಗಳ ಬಗೆಗೆ ನಿಜ ಕಾಳಜಿ ವ್ಯಕ್ತಪಡಿಸ ಬೇಕು ಎಂದು ಆಗ್ರಹಿಸಿದರು.

ನಿವೃತ್ತ ಪ್ರಾಧ್ಯಾಪಕ ಮಹೇಶ್‌ಚಂದ್ರ ಗುರು, ವೇದಿಕೆ ರಾಜಾಧ್ಯಕ್ಷ ಕೆ.ಎಸ್‌.ಶಿವರಾಮು, ಮುಖಂಡ ರಾದ ಪಿ.ರಾಜು, ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಆರ್‌.ಕೆ.ರವಿ, ಹಿನಕಲ್‌ ಉದಯ್‌, ಕೆ.ಪಿ. ಚಿಕ್ಕಸ್ವಾಮಿ, ಕಾಡನಹಳ್ಳಿ ಸ್ವಾಮಿ, ಪ್ರಸನ್ನ ದೊಡ್ಡುಂಡಿ, ತ್ಯಾಗರಾಜ್‌, ನಿಹಾಲ್‌, ಲೋಕೇಶ್‌ಕುಮಾರ್‌, ಸತ್ಯನಾರಾಯಣ, ಬೀರೇಶ್‌, ರೂಪೇಶ್‌, ಪುನಿತ್‌,ಕುರುಬರಹಳ್ಳಿ ಧನಪಾಲ್‌, ಸುರೇಶ್‌ ಬಾಬು ಮುಂತಾದವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next