Advertisement

“ಅನ್ನ ಭಾಗ್ಯ’ಶ್ರೇಯಸ್ಸು ನನಗೇ ಸಲ್ಲಬೇಕು

11:35 PM Nov 03, 2019 | Team Udayavani |

ಬೀದರ: “ಕರ್ನಾಟಕದಲ್ಲಿ ಜಾರಿಯಲ್ಲಿರುವ “ಅನ್ನ ಭಾಗ್ಯ’ ಯೋಜನೆಗೆ ಮೋದಿ ಸರ್ಕಾರದ ಕೊಡುಗೆ ಇದೆ ಎಂದು ಹೇಳಿಕೆ ನೀಡಿರುವ ಸಿಎಂ ಯಡಿಯೂರಪ್ಪ ಅವರು ದೇಶದಲ್ಲಿ ಮೊದಲು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದದ್ದು ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Advertisement

ನಗರದ ಗಣೇಶ ಮೈದಾನದಲ್ಲಿ ಭಾನುವಾರ ಶೋಷಿತ ವರ್ಗಗಳ (ಅಹಿಂದ) ಒಕ್ಕೂಟ ಆಯೋಜಿಸಿದ್ದ ಶೋಷಿತರ ಬೃಹತ್‌ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಉಚಿತ ಅಕ್ಕಿ ಭಾಗ್ಯ ಮೋದಿ ಅವರದ್ದೇ ಕಾರ್ಯಕ್ರಮ ಆಗಿದ್ದರೆ ದೇಶದ ಬೇರೆ ರಾಜ್ಯಗಳಲ್ಲಿಯೂ ಜಾರಿಗೆ ತರಬೇಕಾಗಿತ್ತು. ಕೇವಲ ಕರ್ನಾಟಕದಲ್ಲಿ ಮಾತ್ರ ಬಡವರ ಹಸಿವನ್ನು ನೀಗಿಸುವಂತ ಯೋಜನೆ ಜಾರಿಗೆ ತಂದಿದ್ದು, ಅದರ ಶ್ರೇಯಸ್ಸು ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.

ಗುತ್ತಿಗೆ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗುತ್ತಿಗೆದಾರರಿಗೆ ಮೀಸಲಾತಿ ವ್ಯವಸ್ಥೆ ಕರ್ನಾಟಕ ಬಿಟ್ಟರೆ ದೇಶದ ಯಾವುದೇ ರಾಜ್ಯಗಳಲ್ಲಿಲ್ಲ. ಇದಕ್ಕಾಗಿ ಕಾನೂನು ರೂಪಿಸಿರುವುದು ಕಾಂಗ್ರೆಸ್‌ ಸರ್ಕಾರ. ನನ್ನ ಕೊನೆಯ ಬಜೆಟ್‌ನಲ್ಲಿ ಕಾಮಗಾರಿ ಮೊತ್ತವನ್ನು 50 ಲಕ್ಷದಿಂದ ಒಂದು ಕೋಟಿಗೆ ಹೆಚ್ಚಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ, ಅದನ್ನು ಜಾರಿಗೆ ತರಲಿಲ್ಲ. ಈ ಕಾಯ್ದೆಯಡಿ 2 ಕೋಟಿವರೆಗೆ ಕಾಮಗಾರಿ ಗುತ್ತಿಗೆ ಹೆಚ್ಚಿಸಿ ಸಂಪತ್ತು ಹಂಚಿಕೆ ಆಗಬೇಕಿದೆ ಎಂದರು.

ಹೈದ್ರಾಬಾದ್‌ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಬಿಜೆಪಿ ಸರ್ಕಾರ ನಾಮಕರಣ ಮಾಡಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಈ ಪ್ರದೇಶದ ಅಭಿವೃದ್ಧಿಗಾಗಿ ಕಲಂ 371(ಜೆ) ಜಾರಿ ವಿಷಯ ಬಂದಾಗ ಉಪ ಪ್ರಧಾನಿಯಾಗಿದ್ದ ಎಲ್‌.ಕೆ. ಅಡ್ವಾಣಿ ವಿರೋಧ ಮಾಡಿದ್ದರು. ಈಗ ಕೇವಲ ಕಲ್ಯಾಣ ಕರ್ನಾಟಕ ಹೆಸರಿಟ್ಟರೆ ಆಯ್ತಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next