ಅಸ್ತಾನಾ: ಯುವ ಶಟ್ಲರ್ ಅನ್ಮೋಲ್ ಖಾರ್ಬ್ ಸಹಿತ ಭಾರತದ ಐವರು ಕಜಾಕ್‌ಸ್ಥಾನ ಇಂಟರ್‌ನ್ಯಾಶನಲ್ ಚಾಲೆಂಜ್ ಬ್ಯಾಡ್ಮಿಂಟನ್ ಕೂಟದ ವನಿತೆಯರ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದ್ದಾರೆ.
ಅನ್ಮೋಲ್ ಅವರಲ್ಲದೇ ಉತ್ತಮ ಫಾರ್ಮ್ನಲ್ಲಿರುವ ದೇವಿಕಾ ಸಿಹಾಗ್, ಮಾಜಿ ರಾಷ್ಟ್ರೀಯ ಚಾಂಪಿಯನ್ ಅನುಪಮಾ ಉಪಧ್ಯಾಯ, ಏಳನೇ ಶ್ರೇಯಾಂಕದ ತನ್ಯಾ ಹೇಮಂತ್ ಮತ್ತು ಇಶಾರಾಣಿ ಬರೂಹ ಅವರು ಅಂತಿಮ ಎಂಟರ ಸುತ್ತಿಗೇರಿದ್ದಾರೆ.
ಹಾಲಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಅನ್ಮೋಲ್ ಯುಎಇಯ ನುರಾನಿ ರತು ಅಝಾಹ್ರಾ ಅವರನ್ನು 21-11, 21-7 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು. 17ರ ಹರೆಯದ ಅನ್ಮೋಲ್ ಮುಂದಿನ ಸುತ್ತಿನಲ್ಲಿ ಜಪಾನಿನ ಸೋರಾನೊ ಯೋಶಿಕಾವಾ ಅವರನ್ನು ಎದುರಿಸಲಿದ್ದಾರೆ. ಅನ್ಮೋಲ್ ಅವರು ಕಳೆದ ಫೆಬ್ರವರಿಯಲ್ಲಿ ಭರಾತ ಬ್ಯಾಡ್ಮಿಂಟನ್ ಏಷ್ಯಾ ತಂಡ ಚಾಂಪಿಯ್‌ಶಿಪ್‌ನಲ್ಲಿ ಚಿನ್ನ ಗೆಲ್ಲಲು ದೊಡ್ಡ ಕೊಡುಗೆ ಸಲ್ಲಿಸಿದ್ದರು.
ಇಶಾರಾಣಿ ಎದುರಾಳಿ:
ಏಳನೇ ಶ್ರೇಯಾಂಕದ ತನ್ಯಾ ಇಸ್ರೇಲಿನ ಕ್ಸೆನಿಯಾ ಪೊಲಿಕರ್ಪೋವಾ ಅವರನ್ನು 21-11, 21-18 ಗೇಮ್‌ಗಳಿಂದ ಉರುಳಿ ಸಿದರು. ಅವರು ಮುಂದಿನ ಸುತ್ತಿನಲ್ಲಿ ಭಾರತದವರೇ ಆದ ಇಶಾರಾಣಿ ಬರೂಹ ಅವರನ್ನು ಎದುರಿಸಲಿದ್ದಾರೆ. ಇಶಾರಾಣಿ ಇನ್ನೊಂದು ಪಂದ್ಯದಲ್ಲಿ ನ್ಯೂಜಿಲ್ಯಾಂಡಿನ ಟಿಫಾನಿ ಹೊ ಅವರನ್ನು 21-10, 21-14 ಗೇಮ್‌ಗಳಿಂದ ಸೋಲಿಸಿದ್ದರು.
ಪುರುಷರ ವಿಭಾಗದಲ್ಲಿ ಭಾರತದ ರವಿ, ಭಾರತ್ ರಾಘವ್ ಮತ್ತು ತರುಣ್ ಮನ್ನೆಪಲ್ಲಿ ಅವರು ಕ್ವಾರ್ಟರ್‌ಫೈನಲಿಗೇರಿದರೆ ಡಬಲ್ಸ್‌ನಲ್ಲಿ ಮೋಹಿತ್ ಸಿಂಗ್ ಮತ್ತು ಕೆವಿನ್ ಚಾಂಗ್ ಹಾಗೂ ವನಿತೆಯರಲ್ಲಿ ಹರ್ಷಿತಾ ರಾವುತ್ ಮತ್ತು ಶ್ರುತಿ ಸ್ವಾಯಿನ್ ಅವರು ಕ್ವಾರ್ಟರ್‌ಫೈನಲ್ ಹಂತಕ್ಕೇರಿದ್ದಾರೆ.