ಅಂಕೋಲಾ: ತಾಲೂಕಿನಲ್ಲಿ ಸುರಿಯುತ್ತಿರುವ ರಣ ಭೀಕರ ಮಳೆಯಿಂದ ಗಂಗಾವಳಿ ನದಿ ಪ್ರವಾಹಕ್ಕೆ ಸಿಲುಕಿ ಸತತ 48 ಗಂಟೆಯಿಂದ ಹಲವಾರು ಗ್ರಾಮಗಳು ಜಲಾವೃತಗೊಂಡು ನೂರಾರು ಕುಟುಂಬ ಮನೆಗಳನ್ನು ತೊರೆದು ಬೀದಿಗೆ ಬಂದಿವೆ. ಮಳೆಯ ಆರ್ಭಟ, ಗಂಗಾವಳಿ ಪವಾಹ ಮೂರನೇ ದಿನವು ಮುಂದುವರೆದಿದ್ದು ಜನರ ನಿದ್ದೆಗೆಡಿಸುತ್ತಿದೆ.
ಸೋಮವಾರದಿಂದ ಸುರಿಯುತ್ತಿದ್ದ ಮಳೆ ಬುಧವಾರ ಅಲ್ಪಮಟ್ಟಿಗೆ ಕಡಿಮೆ ಆಗಿರುವುದನ್ನು ಕಂಡು ಜನ ಕೊಂಚ ನಿಟ್ಟುಸಿರು ಬಿಡುವ ಸಂದರ್ಭದಲ್ಲಿಯೆ ಸಂಜೆ ನಾಲ್ಕರ ನಂತರ ಮತ್ತೆ ಮಳೆಯ ಅಬ್ಬರ ಜೋರಾಗಿದೆ. ಇದರಿಂದ ಗಂಗಾವಳಿ ನದಿ ಪಾತ್ರದ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಮನೆ ಕಳೆದು ಕೊಳ್ಳುವ ಭೀತಿ: ಹಿಚ್ಕಡ ದಂಡೆಬಾಗ, ಕೂರ್ವೆ, ಅಗ್ರಗೋಣ ಮೋಟನ ಕೂರ್ವೇ, ವಾಸರಕುದ್ರಿಗೆ ಗ್ರಾ.ಪಂದ ಕೊಡ್ಸಣಿ, ಅಂಭೇರಹಿತ್ಲ, ಮಾವಿನ ಗದ್ದೆ, ಆಂದ್ಲೆ, ಮಾರುಗದ್ದೆ, ಮಕ್ಕಿಗದ್ದೆ, ಹೊನ್ನಳ್ಳಿ, ಅಗಸೂರು, ಡೊಂಗ್ರಿ, ಸುಂಕಸಾಳ, ಹೆಗ್ಗಾರ, ಕಲ್ಲೇಶ್ವರಗಳಂತಹ 18 ಹೆಚ್ಚು ಗ್ರಾಮಗಳು ಸಂಪೂರ್ಣ ಜಲಾವೃತವಾಗಿದೆ.
ಈ ಗ್ರಾಮದಲ್ಲಿ 48 ಗಂಟೆಗು ಅಧಿಕ ಕಾಲ ಅಲ್ಲಿಯ ಮನೆಗಳಲ್ಲಿ ನೀರು ನಿಂತು ಮನೆಗಳು ಬೀಳುವ ಹಂತ ತಲುಪಿವೆ. ಇದರಿಂದಾಗಿ ನೂರಾರು ಬಡ ಕುಟುಂಬಗಳುಸೂರು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ರಕ್ಷಣೆಗೆ ಧಾವಿಸಿದ ಪೊಲೀಸ್ ತಂಡ: ಇಲ್ಲಿಯ ಸುಂಕಸಾಳ ಬಳಿ ರಾ.ಹೆ 63ರಲ್ಲಿ ಸುಮಾರು 135 ಪ್ರಯಾಣಿಕರು ಸೋಮವಾರ ಸಂಜೆ ಸಿಲುಕಿದ್ದರು. ಅವರು ಸಿಲುಕಿಕೊಂಡ ಬಳಿ ನೀರಿನ ಮಟ್ಟ ಏರುತ್ತಿದ್ದು ರಸ್ತೆಯ ಎರಡು ಬದಿ ನೀರು ತುಂಬಿಕೊಂಡಿತ್ತು. ಮಧ್ಯದಲ್ಲಿರುವ ಪ್ರಯಾಣಿಕರು ದಿಕ್ಕು ತೋಚದೆ ರಕ್ಷಣೆಗೆ ಅಂಗಲಾಚುತ್ತಿದ್ದರು. ಮಂಗಳವಾರ ರಾತ್ರಿ 9 ರಿಂದ ಸಿಪಿಐ ಪ್ರಮೋದಕುಮಾರ ಮತ್ತು ಪಿಎಸ್‌ಐ ಶ್ರೀಧರ ತಂಡ ದೋಣಿಗಳ ಮೂಲಕ ಸತತ 10 ಗಂಟೆ ಸತತ ಕಾರ್ಯಾಚರಣೆ ನಡೆಸಿ ನೀರಿನ ಮಧ್ಯ ಸಿಲುಕಿದವರನ್ನು ರಕ್ಷಿಸಿದ್ದಾರೆ. ಬುಧವಾರ ಕೋಸ್ಟ್ ಗಾರ್ಡ್ ತಂಡದಿಂದ 40 ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ.
ಸಂತ್ರಸ್ತರ ಹಸಿವು ನೀಗಿಸಿದ ಅಧಿಕಾರಿಗಳು: ಸುಂಕಸಾಳ ಹೆದ್ದಾರಿಯಲ್ಲಿ ಸಿಲುಕಿಕೊಂಡ ಪ್ರಯಾಣಿಕರನ್ನು ರಕ್ಷಣೆ ಮಾಡಿಕೊಂಡು ನಸುಕಿನ 6 ಗಂಟೆ ವೇಳೆಗೆ ನಂ.1 ಶಾಲೆ ಗಂಜಿ ಕೇಂದ್ರಕ್ಕೆ ಕರೆತಂದಾಗ ಅಧಿಕಾರಿಗಳ ತಂಡ ಅವರಿಗೆ ಊಟದ ವ್ಯವಸ್ಥೆ ಮಾಡಿ ಅವರ ಹಸಿವನ್ನು ನೀಗಿಸಿದರು.
ಸಹಾಯಕ ಆಯುಕ್ತೆ ಪ್ರೀತಿ ಗೆಹ್ಲೋಟ್, ತಹಶೀಲ್ದಾರ್ ಅಶೋಕ ಗುರಾಣಿ, ಬಿಇಒ ಶ್ಯಾಮಲಾ ನಾಯಕ, ಅಕ್ಷರ ದಾಸೋಹದ ಚಂದ್ರಹಾಸ ರಾಯ್ಕರ, ಸಾಕ್ಷರತಾ ಸಂಯೋಜಕ ರಪೀಕ್ ಶೇಖ, ಎನ್.ವಿ. ನಾಯ್ಕ, ಗಣಪತಿ ನಾಯ್ಕ, ಸಿಆರ್‌ಪಿ ವಿಜಯಲಕ್ಷ್ಮಿ ನಾಯಕ, ಬಿಸಿಯೂಟ ಸಿಬ್ಬಂದಿ ರಾತ್ರಿ ಸಮಯದಲ್ಲೂ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.
ಸಾವಿರಾರು ಎಕರೆ ಬೆಳೆ ನಾಶ: ರೈತ ಸಾಲ ಮಾಡಿ ಬೆಳೆದ ಭತ್ತ ಗಂಗಾವಳಿ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಬಾಳೆ, ಅಡಕೆ, ತೆಂಗು, ಕಾಳುಮೆಣಸು ಬೆಳೆದ ತೋಟಗಳಲ್ಲಿಯು ನೆರೆ ಬಂದ ಕಾರಣ ಅವು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ತಾಲೂಕಿನಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದ್ದು ಸಾಲ ಮಾಡಿ ಬೆಳೆ ಬೆಳೆದ ರೈತ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾನೆ.