Advertisement

ಅಂಕೋಲಾ: ವಿಗ್ರಹ ಕದ್ದೊಯ್ದು ಮನೆ ಹಿತ್ತಲಲ್ಲಿ ಪ್ರತಿಷ್ಠಾಪಿಸಿದ ಭೂಪ!

05:46 PM Feb 02, 2024 | Team Udayavani |

ಉದಯವಾಣಿ ಸಮಾಚಾರ
ಅಂಕೋಲಾ: ದೇವರ ವಿಗ್ರಹವನ್ನೇ ಕದ್ದೊಯ್ದ ವ್ಯಕ್ತಿ ಅದನ್ನು ತನ್ನ ಮನೆಯ ತೋಟದಲ್ಲಿ ಪ್ರತಿಷ್ಠಾಪಿಸಿ ಬಳಿಕ ಪೊಲೀಸರು ಗ್ರಾಮಸ್ಥರ ಎದುರು ತಪ್ಪೊಪ್ಪಿಕೊಂಡ ಘಟನೆ ತಾಲೂಕಿನ ಹಿಚ್ಕಡದಲ್ಲಿ ನಡೆದಿದೆ.

Advertisement

ತಾಲೂಕಿನ ಹಿಚ್ಕಡದ ಮೈದಾನವೊಂದರ ಎದುರಿನ ಗೊಂಬಳಿ ಮರದ ಕೆಳಗೆ ಅನಾಕಾಲದಿಂದಲೂ ಶ್ರೀ ಮಹಾಸತಿ  ವಿಗ್ರಹವಿತ್ತು. ಇದನ್ನು ಈ ಭಾಗದ ಜನ ಭಕ್ತಿಯಿಂದ ಮಾಸ್ತಿಮನೆ ದೇವರು ಎಂದು ಪೂಜಿಸುತ್ತಿದ್ದರು. ಶ್ರೀ ದೇವರಿಗೆ ಪ್ರತಿ ವಾರ ವೈದಿಕರಿಂದ ಪೂಜೆ ನಡೆಯುತ್ತಿತ್ತು. ಆದರೆ ಗುರುವಾರ ಬೆಳಿಗ್ಗೆ ಅಲ್ಲಿರುವ 3.5 ಅಡಿ ಎತ್ತರ ವಿಗ್ರಹ ಮಾತ್ರ ಕಣ್ಮರೆಯಾಗಿತ್ತು. ಈ
ಘಟನೆ ಜನರ ಆತಂಕಕ್ಕೆ ಕಾರಣವಾಗಿತ್ತು. 4 ಅಡಿ ಆಳಕ್ಕೆ ಅಗೆದು ಮೂರ್ತಿಯನ್ನು ತೆಗೆದುಕೊಂಡು ಹೋಗಲಾಗಿತ್ತು. ನಿಧಿಗಳ್ಳರ ಕೃತ್ಯ ಎಂಬ ಶಂಕೆಯಿಂದ ಗ್ರಾಮಸ್ಥರು ಈ ವಿಷಯವನ್ನು ಅಂಕೋಲಾ ಪೊಲೀಸರಿಗೆ ತಿಳಿಸಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್‌ಐ ಸುಹಾಸ ಅವರು ಈ ವಿಗ್ರಹ ತಳಗದ್ದೆಯ ಮುಕುಂದ ಗೋವಿಂದ ಗೌಡ ಅವರ ಮನೆ ಹಿಂಬದಿಯ ಹಿತ್ತಲಲ್ಲಿ ಹೂವಿನಿಂದ ಅಲಂಕರಿಸಿ ಇಟ್ಟಿರುವುದನ್ನು ಪತ್ತೆ ಹಚ್ಚಿದ್ದರು.

ಹಿಚ್ಕಡ ಗ್ರಾಮಸ್ಥರು ತಳಗದ್ದೆಗೆ ಹೋದಾಗ, ತಮ್ಮೂರಲ್ಲಿ ಇರಬೇಕಾದ ಮಾಸ್ತಿಮನೆ ಮೂರ್ತಿ ತಳಗದ್ದೆಯಲ್ಲಿ ಇರುವುದನ್ನು ಕಂಡು ಅಚ್ಚರಿಗೊಂಡರು. ಪೊಲೀಸರು ಮುಕುಂದ ಗೋವಿಂದ ಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಇದನ್ನು ತಾನೇ ತನ್ನ ಬುಲೇರೊ ವಾಹನದಲ್ಲಿ ತಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನನಗೆ ಸುಂದರವಾದ ಮೂರ್ತಿ ಕೆತ್ತನೆ ಮಾಡುವ ಕಲೆ ಇದೆ. ಹಾಗಾಗಿ ರಾತ್ರಿ ಒಬ್ಬನೇ ಹಿಚ್ಕಡಕ್ಕೆ ತೆರಳಿ ಮೂರ್ತಿಯನ್ನು ಅಗೆದು ತಂದಿರುವದಾಗಿ ಮುಕುಂದ ಗೌಡ ಪೊಲೀಸರು ಹಾಗೂ ಗ್ರಾಮಸ್ಥರ ಎದುರು ತಪ್ಪೊಪ್ಪಿಕೊಂಡಿದ್ದಾನೆ. ಇದು ಸತ್ಯವೇ ಅಥವಾ ವಿಗ್ರಹ ನಾಪತ್ತೆ ಹಿಂದಿರುವ ಇರುವ ಅಸಲಿಯತ್ತು ಏನು ಎಂಬುದನ್ನು ಪತ್ತೆ ಹಚ್ಚಲು ಪಿಎಸ್‌ಐ ಸುಹಾಸ ಕಾರ್ಯಪ್ರವೃತ್ತರಾಗಿದ್ದಾರೆ.

Advertisement

ಸಂಧಾನದ ಮೂಲಕ ಪ್ರಕರಣ ಇತ್ಯರ್ಥ: ಈ ಪ್ರಕರಣ ಅಂಕೋಲಾ ಪೊಲೀಸ್‌ ಠಾಣೆ ಮೆಟ್ಟಿಲೆರಿತ್ತು. ಆದರೆ ಮುಕುಂದ ಗೌಡ ತಪ್ಪೊಪ್ಪಿಕೊಂಡು, ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ನೂತನ ಮೂರ್ತಿ ಮಾಡಿಕೊಡುತ್ತೇನೆ. ನನ್ನನ್ನು ಕ್ಷಮಿಸಿ ಬಿಡಿ ಎಂದು ಹೇಳಿಕೊಂಡಿದ್ದ. ಗ್ರಾಮಸ್ಥರು ಮಾನವೀಯತೆಯಿಂದ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೊಕ್ತೇಸರರಾದ ವಿಠೊಬ ಬೊಮ್ಮಯ್ಯ ನಾಯಕ, ರಂಜನ ನಾಯಕ ಪ್ರಮುಖರಾದ ಚೇತನ ನಾಯಕ. ಹಿಚ್ಕಡ, ಗುರು ನಾಯಕ ಹಿಚ್ಕಡ, ಅಮೋಘ ನಾಯಕ, ಆದಿತ್ಯ ನಾಯಕ, ವಿಠೊಬ ಹಮ್ಮಣ್ಣ ನಾಯಕ, ರಾಮು ಹಿಚ್ಕಡ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಗೋಪು ನಾಯಕ ಹುಂಡಿಮನೆ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next