Advertisement
ಮಂಗಳೂರು-ಗೋವಾ ರಾಷ್ಟ್ರೀಯ ಹೆದ್ದಾರಿ ಯಲ್ಲಿರುವ ಈ ಗುಡ್ಡ ಏಕಾಏಕಿ ಜರಿದ ಪರಿಣಾಮ ಇನ್ನೊಂದು ದಿಕ್ಕಿನಲ್ಲಿ ನದಿ ದಂಡೆಯ ಅಂಚಿನಲ್ಲಿದ್ದ ಚಹಾ ಅಂಗಡಿಗಳ ಮೇಲೆ ಭಾರೀ ಪ್ರಮಾಣದ ಮಣ್ಣು ಕುಸಿದು ಬಿದ್ದು, ಅಲ್ಲಿದ್ದ ಆರು ಮಂದಿ ಹಾಗೂ ಚಹಾ ಕುಡಿಯುತ್ತಿದ್ದ ಗ್ಯಾಸ್ ಟ್ಯಾಂಕರ್ ಡ್ರೈವರ್ ಮತ್ತು ಕ್ಲೀನರ್ ನದಿಗೆ ಜಾರಿದ ಮಣ್ಣಲ್ಲಿ ಸೇರಿ ಕೊಚ್ಚಿ ಹೋದರು. ಅಲ್ಲದೆ ಅಲ್ಲೇ ನಿಲ್ಲಿಸಿದ್ದ ಅನಿಲ ಟ್ಯಾಂಕರ್ ಹಾಗೂ ಲಾರಿ ಕೂಡ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋದವು ಎಂದು ಹೇಳಲಾಗಿದೆ.
Related Articles
Advertisement
ಸಂಜೆ ವೇಳೆಗೆ ಘಟನೆ ನಡೆದ ಆರು ಕಿ.ಮೀ. ದೂರದ ನದಿಯ ಮತ್ತೊಂದು ತುದಿಯ ದುಬ್ಬನಶಶಿ ಹಾಗೂ ಗಂಗೇಕೊಳ್ಳದಲ್ಲಿ ಲಕ್ಷ್ಮಣ, ಶಾಂತಿ, ರೋಶನ್ ಹಾಗೂ ಸಿನಿವಣ್ಣನ್ ಶವಗಳು ಪತ್ತೆಯಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (ಎನ್‌ಡಿಆರ್‌ಎಫ್) ಹಾಗೂ ಕಾರವಾರ ನೌಕಾಪಡೆಯ ಮುಳುಗು ತಜ್ಞರು ಶೋಧ ಕಾರ್ಯ ಕೈಗೊಂಡರು.
ತಲಾ 5 ಲಕ್ಷ ರೂ. ಪರಿಹಾರ: ಗುಡ್ಡ ಕುಸಿತದಲ್ಲಿ ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಕೊಡಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದೂ ಕಾರ್ಯಾಚರಣೆ: ಭಾರೀ ಮಳೆಯಿಂದಾಗಿ ಬರೆಯ ಮಣ್ಣು ಜಾರುತ್ತಿದ್ದ ಕಾರಣ ಹೆದ್ದಾರಿ ತೆರವು ಹಾಗೂ ರಕ್ಷಣ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗಿದ್ದು, ಬುಧವಾರವೂ ಮುಂದುವರಿಯಲಿದೆ.ರಾಷ್ಟ್ರೀಯ ಹೆದ್ದಾರಿ ಕುಮಟಾ ಅಂಕೋಲಾ ಮಧ್ಯೆ ರಸ್ತೆ ಸಂಚಾರ ಸ್ಥಗಿತವಾಗಿದೆ. ಹೆದ್ದಾರಿಯ ಎರಡೂ ದಿಕ್ಕಿನಲ್ಲೂ ಸಾಲುಗಟ್ಟಿ ನಿಂತಿದ್ದ ವಾಹನಗಳಿಗೆ ಪರ್ಯಾಯ ಮಾರ್ಗ ಮೂಲಕ ಸಂಚರಿಸಲು ಸೂಚಿಸಲಾಯಿತು.
ಮತ್ತೊಬ್ಬ ಮಹಿಳೆ ಕಾಣೆ: ಗುಡ್ಡ ಕುಸಿದ ಪರಿಣಾಮ ಗಂಗಾವಳಿ ನದಿಯ ಮತ್ತೂಂದು ದಡದಲ್ಲಿರುವ ಮೂರು ಮನೆಗಳು ಹಾನಿಗೊಳಗಾಗಿವೆ. ಒಟ್ಟು 12 ಮಂದಿಗೆ ಗಾಯಗಳಾಗಿವೆ. ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಭಾರೀ ಗಾತ್ರದ ಕಲ್ಲುಬಂಡೆ ನದಿಯಲ್ಲಿ ಬಿದ್ದ ಪರಿಣಾಮ ನದಿ ಸುತ್ತಲಿನ ಮನೆಯ ಬಳಿ ಭಾರೀ ಗಾತ್ರದಲ್ಲಿ ಸುನಾಮಿಯಂತೆ ನೀರು ಹರಿದು ಬಂದಿದೆ.
ಸುಮಾರು 25 ಅಡಿ ಆಳದ ನದಿ ಮಧ್ಯೆ ಬಂಡೆ ಬಿದ್ದಿದ್ದು, ಬಂಡೆಯ ಮೇಲ್ಭಾಗ ಸುಮಾರು ಐದು ಅಡಿಯಷ್ಟು ನೀರಿನ ಹೊರಗೆ ಕಾಣುತ್ತಿದೆ.
20 ಅಡಿಗಳಷ್ಟು ಮಣ್ಣು: ಬರೆ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ 20 ಅಡಿಗಳಷ್ಟು ಎತ್ತರದ ಮಣ್ಣಿನ ರಾಶಿ ಸಂಗ್ರಹವಾಗಿದೆ. ಈ ಮಣ್ಣಿನಲ್ಲಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರು ಸಹಿತ ಮತ್ತಷ್ಟು ವಾಹನ ಹಾಗೂ ಜನರು ಸಿಲುಕಿರುವ ಬಗ್ಗೆ ಸ್ಥಳದಲ್ಲಿ ಮಾತುಗಳು ಕೇಳಿಬಂದವು.
ಕಾರವಾರ ಬಳಿ ಗುಡ್ಡ ಕುಸಿದು ಓರ್ವ ಸಾವುಉತ್ತರಕನ್ನಡ ಜಿಲ್ಲೆ ಕಾರವಾರ ಬಳಿಯ ಕಿನ್ನರ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ತಿಕರ್ಸ ಗುರವ್ ಅವರು ಮೃತಪಟ್ಟಿದ್ದಾರೆ. ಕಾರ್ಯಾಚರಣೆ ನಡೆಸಿ ಕಲ್ಲು ಮಣ್ಣು ತೆರವುಗೊಳಿಸಿ ಶವ ಹೊರತೆಗೆಯಲಾಗಿದೆ. ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಗೋಕರ್ಣದ ಶ್ರೀರಾಮ ಮಂದಿರ (ರಾಮತೀರ್ಥ) ಹಿಂಭಾಗದ ಗುಡ್ಡ ಕುಸಿದಿದ್ದು, ದೇವಸ್ಥಾನ ಹಾಗೂ ಅಕ್ಕಪಕ್ಕದ ಪ್ರಮುಖ ಸ್ಥಳಗಳಲ್ಲಿ ಹಾನಿಯಾಗಿದೆ. ನದಿಯಲ್ಲಿ ತೇಲಿಹೋದ ಟ್ಯಾಂಕರ್
ಈ ಘಟನೆಯಲ್ಲಿ ಮಂಗಳೂರಿನಿಂದ ಧಾರವಾಡಕ್ಕೆ ಸಾಗುತ್ತಿದ್ದ ಬುಲೆಟ್ ಗ್ಯಾಸ್ ಟ್ಯಾಂಕರ್ ಗಂಗಾವತಿ ನದಿ ಪಾಲಾಗಿದ್ದು, ಏಳು ಕಿ.ಮೀ.ಗಳಷ್ಟು ದೂರ ತೇಲಿ ಹೋಗಿ ಸಗಡಗೇರಿ ಎಂಬಲ್ಲಿ ವಾಲಿ ನಿಂತಿದೆ. ಈ ಟ್ಯಾಂಕರ್‌ನಲ್ಲಿ ಸುಮಾರು 30 ಟನ್ ಅನಿಲವಿದ್ದು, ಸೋರಿಕೆ ಭೀತಿ ಕಾರಣ ಪರಿಸರದ ನಿವಾಸಿಗಳಿಗೆ ಒಲೆ ಹಾಗೂ ವಿದ್ಯುತ್ ದೀಪಗಳನ್ನು ಹಚ್ಚದಂತೆ ಜಿಲ್ಲಾಡಳಿತ ಸೂಚಿಸಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳಲು ಹೇಳಿದೆ.