Advertisement

ಮಳೆಗಾಲ ಬಂತೆಂದರೆ ಸಮುದ್ರದ ಅಲೆ ಮನೆಗೆ ನುಗ್ಗುವ ಚಿಂತೆ

04:17 PM Jun 13, 2019 | Naveen |

ಅರುಣ ಶೆಟ್ಟಿ
ಅಂಕೋಲಾ
: ಮಳೆಗಾಲ ಬಂತೆಂದರೆ ಸಾಕು ಸಮುದ್ರ ತೀರದ ನಿವಾಸಿಗಳಿಗೆ ಎಲ್ಲಿಲ್ಲದ ಭಯ ಆವರಿಸುತ್ತೆ. ಎಲ್ಲಿ ಸಮುದ್ರದ ಅಲೆಗಳು ಮನೆಗೆ ನುಗ್ಗುತ್ತವೆ ಎನ್ನುವುದೆ ಚಿಂತೆ. ಹೀಗಾಗಿ ಮಳೆಗಾಲ ಎಂದರೆ ಸಮುದ್ರ ತಟದ ನಿವಾಸಿಗಳು ಯಾವಾಗ, ಎಲ್ಲಿ ಏನು ಅನಾಹುತ ಆಗುತ್ತದೆ ಎಂದು ಭಯಭೀತರಾಗುತ್ತಾರೆ.

Advertisement

ಮಳೆಗಾಲ ಸಮಿಪಿಸುತ್ತಿದ್ದಾಗ ಮಾತ್ರ ಕಡಲ್ಕೊರೆತ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖೆಗೆ ನೆನಪಾಗುತ್ತದೆ. ಬೇಸಿಗೆಯಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕೈಗೊಳ್ಳುವ ಬದಲು ಇಲಾಖೆ ನಿದ್ದೆಗೆ ಜಾರಿರುತ್ತದೆ. ಹೀಗಾಗಿ ಕಡಲ ಮಕ್ಕಳ ಆತಂಕಕ್ಕೆ ಕೊನೆಯೇ ಇಲ್ಲದಂತಾಗಿದೆ.

ಭಾವಿಕೇರಿ ಗಣೇಶಭಾಗದ ಕಡಲ ತಟದಲ್ಲಿ ಅಪೂರ್ಣ ಕಾಮಗಾರಿಯಿಂದಾಗಿ ನಿರಂತರ ಕಡಲ್ಕೊರೆತ ಉಂಟಾಗುತ್ತಿದೆ. ಹಾರವಾಡದಲ್ಲಿಯೂ ತಡೆಗೊಡೆ ನಿರ್ಮಿಸಿದರು ಇನ್ನೊಂದು ಬಾಗದಲ್ಲಿ ನೀರು ಒಳ ಹೊಕ್ಕುವ ಸಂಭವವು ಇದೆ. ಇಲ್ಲಿ ಹತ್ತಾರು ತೆಂಗಿನ ಮರಗಳ ಬುಡದಲ್ಲಿ ಕೊರಕಲು ಉಂಟಾಗಿ, ಮರಗಳು ನೆಲಕ್ಕುರುಳುವ ಹಂತದಲ್ಲಿವೆ. ಈ ಬಾರಿಯೂ ಕಡಲ ಕೊರೆತದಿಂದ ಮನೆಗಳಿಗೆ ನೀರು ನುಗ್ಗುವ ಸಂಭವವು ಇದೆ.

ಗಣೇಶಭಾಗ ಕಡಲ ತೀರದಲ್ಲಿ 9-10 ವರ್ಷಗಳಿಂದ ಕಡಲ್ಕೊರೆತ ಉಂಟಾಗುತ್ತಿದೆ. ಬೇಲೇಕೇರಿ ಭಾಗದಲ್ಲಿ 2004ರಿಂದ ಅದಿರು ವಹಿವಾಟು ನಡೆಸಲು ಸಮುದ್ರವನ್ನು ಅತಿಕ್ರಮಿಸಿ ಜಟ್ಟಿಗಳನ್ನು ನಿರ್ಮಿಸಿದ ಪರಿಣಾಮ ಭಾವಿಕೇರಿ ಗಣೇಶಭಾಗ ಪ್ರದೇಶದ ಮೇಲೆ ಪರಿಸರ ವೈಪರೀತ್ಯ ಪರಿಣಾಮದಿಂದಾಗಿ ಕಡಲ್ಕೊರೆತ ಕಂಡು ಬಂದಿದೆ. ಸುಮಾರು 20 ಎಕರೆ ಪ್ರದೇಶವು ಸಮುದ್ರ ನೀರು ನುಂಗಿದ ಪರಿಣಾಮ ರೈತರ ಭೂಮಿ ಬಂಜರಾಗಿದೆ. 12 ವರ್ಷಗಳಿಂದ ಕಡಲ್ಕೊರೆತವನ್ನು ತಡೆಯಲು ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ. ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸಮಸ್ಯೆ ಮುಂದುವರೆದಿದೆ.

ತಾಲೂಕಿನಲ್ಲಿ ಫಲವತ್ತಾದ ಉಸುಕು ಮಿಶ್ರಿತ ಮಣ್ಣು ಭಾವಿಕೇರಿಯದಾಗಿದೆ. ಸಮುದ್ರದ ಉಪ್ಪು ನೀರು ನುಗ್ಗಿದ ಪರಿಣಾಮ ರೈತರು ಸಂಕಷ್ಟ ಪಡುವಂತಾಗಿದೆ. ಇನ್ನು 250 ಮೀ. ಪ್ರದೇಶದಿಂದ ನೀರು ನುಗ್ಗಲು ಆರಂಭಿಸಿದೆ. ಕೂಡಲೇ ಉಸುಕಿನ ಚೀಲವನ್ನಾದರೂ ಹಾಕಿ ರೈತರನ್ನು ರಕ್ಷಿಸಬೇಕೆಂದು ಭಾವಿಕೇರಿಯ ಉದಯ ನಾಯಕ ಡಿಸಿ ಹಾಗೂ ಸಂಬಂಧ ಪಟ್ಟ ಇಲಾಖೆಗೆ ಒತ್ತಾಯಿಸಿದ್ದಾರೆ.

Advertisement

ಸಮುದ್ರದ ಬೋರ್ಗರೆವ ಕಡಲ್ಕೊರೆತದಿಂದ ಜನರನ್ನು ರಕ್ಷಿಸಲು ಸರಕಾರ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಆದರೆ ಕರಾವಳಿ ತೀರದಲ್ಲಿ ಅನೇಕ ಕಡೆಗಳಲ್ಲಿ ಸಮುದ್ರ ಕೊರೆತಕ್ಕೆ ತಡೆಗೋಡೆ ಆಗಬೇಕಾದ ಅವಶ್ಯಕತೆ ಇದ್ದುದರಿಂದ ಸರಕಾರದಿಂದ ಬರುವ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.

ಶಾಶ್ವತ ಪರಿಹಾರಕ್ಕೆ ಜನರ ಒತ್ತಾಯ
ನೆರೆಯ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಅನುದಾನ ಬಳಸಿ ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಕಂಡು ಕೊಂಡಿರುವ ಹಾಗೆ ಇಲ್ಲೂ ಕಡಲ ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಲು ಜಿಲ್ಲೆಯ ಸಚಿವ ಆರ್‌.ವಿ. ದೇಶಪಾಂಡೆ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಕಾರ್ಯಪ್ರವೃತ್ತರಾಗಬೇಕೆಂದು ಜನರು ಆಗ್ರಹಿಸಿದ್ದಾರೆ. ಇನ್ನಾದರೂ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗಬಹುದೆಂದು ಇಲ್ಲಿನ ಜನತೆ ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next