ಅಂಕೋಲಾ: ಶಿರೂರ ಗುಡ್ಡ ಕುಸಿತ ಸ್ಥಳದ ಗಂಗಾವಳಿ ನದಿಯಲ್ಲಿ ಭಾನುವಾರ (ಆ.04) ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಆಗಮಿಸಿದಾಗ ಅವರಿಗೆ ಶೋಧ ಕಾರ್ಯಾಚರಣೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆ ಕಾರ್ಯಾಚರಣೆ ನಡೆಸದೆ ಮರಳಿದ್ದಾರೆ.
ಅಮವಾಸ್ಯೆ ದಿನವಾದ ಬಾನುವಾರ ಕಾರ್ಯಾಚರಣೆ ಸೂಕ್ತವಾಗುವ ಹಿನ್ನೆಲೆಯಲ್ಲಿ ಈಶ್ವರ ಮಲ್ಪೆ ತಂಡ ಶಿರೂರಿನಲ್ಲಿ ಕಾರ್ಯಾಚರಣೆ ನಡೆಸಲು ಆಗಮಿಸಿತ್ತು. ಈ ಸಂದರ್ಭದಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಜಿಲ್ಲಾಡಳಿತ ಅನುಮತಿ ನೀಡಲು ನಿರಾಕರಿಸಿದರು. ಯಲ್ಲಾಪುರ ಭಾಗದಲ್ಲಿ ಮಳೆ ಹೆಚ್ಚಾಗಿದ್ದರ ಪರಿಣಾಮವಾಗಿ ನೀರಿನ ಹರಿವು ಹೆಚ್ಚಾಗಿದೆ.
ಜುಲೈ 16 ರಂದು ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಭೂ ಕುಸಿತ ಉಂಟಾಗಿತ್ತು. ಘಟನೆಯಲ್ಲಿ 11 ಜನರು ನಾಪತ್ತೆಯಾಗಿದ್ದರು. ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಆರ್ಮಿ ಕಾರ್ಯಾಚರಣೆ ನಡಿಸಿದಲ್ಲದೆ ಈಶ್ವರ್ ಮಲ್ಪೆ ತಂಡ ಕೂಡ ಗಂಗಾವಳಿ ನದಿಯ ಆಳಕ್ಕೆ ಇಳಿದು ಎರಡು ದಿನಗಳ ಶೋಧ ನಡೆಸಿತ್ತು. ಆದರೆ ಮೂವರ ಮೃತದೇಹ ಪತ್ತೆಯಾಗಿಲ್ಲ. ಹೀಗಾಗಿ ಅಮವಾಸ್ಯೆ ಆಗಿದ್ದರಿಂದ ನದಿಯ ನೀರು ಸಹಜಸ್ಥಿತಿಗೆ ಬರುವ ಕಾರಣಕ್ಕೆ ಈಶ್ವರ್ ಮಲ್ಪೆ ತಂಡ ಆಗಮಿಸಿಟ್ಟು, ಶೋಧ ಕಾರ್ಯಾಚರಣೆಗೆ ಬೇಕಾಗುವಂತ ದೋಣಿಗಳು ಮೀನುಗಾರರು ಸಿದ್ಧರಾಗಿದ್ದರು. ಆದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಶೋಧಕ್ಕೆ ಅನುಮತಿ ನೀಡಿಲ್ಲ. ಇದರಿಂದ ಮಲ್ಪೆ ತಂಡ ಮತ್ತು ಮೀನುಗಾರರು ವಾಪಸ್ ಹೋಗಿದ್ದಾರೆ.
ಜುಲೈ 16 ರಂದು ಸಂಭವಿಸಿದ ಘಟನೆಯಲ್ಲಿ ಶಿರೂರಿನ ಜಗನ್ನಾಥ ನಾಯ್ಕ ಗಂಗೆಕೊಳ್ಳದ ಲೋಕೇಶ್ ನಾಯ್ಕ ಮತ್ತು ಕೇರಳದ ಅರ್ಜುನ್ ನಾಪತ್ತೆಯಾಗಿದ್ದಾರೆ. ಅವರಿಗೆ ಸದ್ಗತಿ ಸಿಗಬೇಕು. ಈ ಕಾರಣಕ್ಕೆ ಶೋಧ ನಡೆಸಲು ಈಶ್ವರ್ ಮುಂದಾಗಿದ್ದರು.
ಇಂದು ಅಮವಾಸ್ಯೆ ಆಗಿದ್ದರಿಂದ ನದಿಯ ನೀರು ಕೊಂಚ ಶಾಂತವಾಗಬಹುದು. ಕಾರ್ಯಾಚರಣೆ ನಡೆಸಬಹುದು ಅಂದುಕೊಂಡ ಈಶ್ವರ್ ಅವರ ತಂಡಕ್ಕೆ ನಿರಾಶೆಯಾಗಿದೆ. ಘಟ್ಟದ ಮೆಲ್ಬಾಗದಲ್ಲಿ ಮಳೆ ಅಧಿಕವಾಗಿದ್ದರಿಂದ ನದಿಯ ನೀರಿನ ಒತ್ತಡ ಜಾಸ್ತಿಯಿದೆ. ಈ ಕಾರಣಕ್ಕೆ ಅಧಿಕಾರಿಗಳು ರಿಸ್ಕ್ ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ. ಮುಂದೆ ಮಳೆ ಕಡಿಮೆಯಾದಾಗ, ಕರೆದಾಗ ಖಂಡಿತ ಬರುವುದಾಗಿ ಈಶ್ವರ ಮಲ್ಪೆ ತಿಳಿಸಿದ್ದಾರೆ.