Advertisement

ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಕೃಷಿ ಪಾಠ ಮುಖ್ಯ

04:42 PM Oct 10, 2019 | Team Udayavani |

„ಅರುಣ ಶೆಟ್ಟಿ
ಅಂಕೋಲಾ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಶಾಲಾ ಸಮಯದಲ್ಲಿಯೇ ಮಕ್ಕಳಿಗೆ ಸ್ಥಳೀಯವಾಗಿ ಬೆಳೆಯುವ ತರಕಾರಿಗಳ ಕುರಿತು ಮಾಹಿತಿಯಿದ್ದರೆ ಮುಂದೊಂದು ದಿನ ಉತ್ತಮ ಕೃಷಿಕರಾಗಿಯೂ ಹೊರಹೊಮ್ಮಲು ಸಾಧ್ಯ. ಈ ನಿಟ್ಟಿನಲ್ಲಿ ಬೋಳೆ ಸಕಿಪ್ರಾ ಶಾಲೆ ಮುಖ್ಯಾಧ್ಯಾಪಕ ಜಗದೀಶ ನಾಯಕ ಮಕ್ಕಳಿಗೆ ಪಠ್ಯದ ಜೊತೆಗೆ ಕೃಷಿ ಪಾಠವನ್ನೂ ಮಾಡುತ್ತಿರುವುದು ಕಂಡುಬಂದಿದೆ.

Advertisement

ಸರ್ಕಾರಿ ಶಾಲೆಯೆಂದರೆ ಒಂದು ರೀತಿಯ ಅಸಡ್ಡೆ ಮನೋಭಾವವಿದೆ. ಆದರೆ ಇಂತಹ ಕೆಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಪರಿಶ್ರಮದಿಂದಾಗಿ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯಕ್ರಮ ಶಾಲೆ ಆವರಣದಲ್ಲಿ ಸ್ವತಃ ವಿವಿಧ ಜಾತಿ ತರಕಾರಿ ಬೆಳೆಯುವುದು ಮತ್ತು ಅದನ್ನು ಬಿಸಿಯೂಟಕ್ಕೆ ಬಳಸಿ ರುಚಿಕಟ್ಟಾದ ಅಡುಗೆ ತಯಾರಿಸುವುದು ಕೆಲ ವರ್ಷಗಳಿಂದ ಇಲ್ಲಿ ನಡೆದುಕೊಂಡು ಬಂದಿದೆ.

ಬೆಂಡೆಕಾಯಿ, ಹೀರೆಕಾಯಿ, ಸೋಡಿಗೆ, ಮೊಗ್ಗೆ ಕಾಯಿ, ಸವತೆ ಕಾಯಿ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಪಠ್ಯದ ಜೊತೆಗೆ ಬಿಡುವಿನಲ್ಲಿ ಮಕ್ಕಳಿಗೆ ಮಳೆಗಾಲದಲ್ಲಿ ತರಕಾರಿಗಳನ್ನು ಬೆಳೆಯುವುದು ಮತ್ತು ಅದರ ಪೋಷಣೆಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.

ಮಕ್ಕಳೇ ಖುಷಿಯಿಂದ ತರಕಾರಿಗಳ ಪೋಷಣೆ ಮಾಡುವುದಕ್ಕೆ ಮುಖ್ಯಾಧ್ಯಾಪಕರ ಕಾಳಜಿಯೇ ಪ್ರೇರಣೆಯಾಗಿದೆ. ಹಿಂದುಳಿದ ದಲಿತ ವಿದ್ಯಾರ್ಥಿಗಳೇ ಅಧಿಕವಾಗಿದ್ದು, ವಿವಿಧ ದಾನಿಗಳನ್ನು ಕರೆಸಿ ಶಾಲಾ ವಿದ್ಯಾರ್ಥಿಗಳಿಗೆ ಉಪಯುಕ್ತ ಉಪಕರಣಗಳನ್ನು ಕೊಡಿಸುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಕರೆಸಿ ಮಕ್ಕಳಿಗೆ ಜ್ಞಾನಾರ್ಜನೆ ಮಾಡುವುದು ಇಲ್ಲಿ ನಡೆಯುತ್ತದೆ.

ಪ್ರತಿಯೊಂದು ಶಾಲೆಯಲ್ಲಿಯೂ ಇಂತಹ ಚಟುವಟಿಕೆ ನಡೆದರೆ ಖಾಸಗಿ ಶಾಲೆಗಿಂತ ತಾವೇನೂ ಕಡಿಮೆಯಿಲ್ಲ ಎಂದು ತೋರಿಸಲು ಪ್ರೇರಣೆಯಾಗಲಿದೆ. ಮುಖ್ಯಾಧ್ಯಾಪಕರ ಜೊತೆಗೆ ಸಹ ಶಿಕ್ಷಕಿ ಸವಿತಾ ರಮೇಶ ನಾಯ್ಕರ ಸೇವೆ ಕೂಡ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next