ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಪಾರ್ಕಿಂಗ್ ಜಾಗದ ಮತ್ತು ಶೌಚಾಲಯದ ಹರಾಜು ಬುಧವಾರ ಜರುಗಿತು.
ಈ ಜಾಗದ ಹರಾಜು ಪ್ರಥಮ ಭಾರಿಗೆ ನಡೆದಿದ್ದು ಸಂಗಾಪೂರದ ತಾಳೂರಿ ಯೇಸುಬಾಬು ಅಂತಿಮವಾಗಿ 15.20 ಲಕ್ಷ ರೂ.ಗಳ ದಾಖಲೆಯ ಹರಾಜು ಕೂಗಿದರು. ಹರಾಜಿನಲ್ಲಿ ಒಟ್ಟು 40 ಜನ ಪಾಲ್ಗೊಂಡಿದ್ದರು. ಇದುವರೆಗೂ ದೇಗುಲ ಕಮೀಟಿಯ ಸಿಬ್ಬಂದಿ ವರ್ಗದವರು ವಾಹನಗಳ ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡುತ್ತಿದ್ದರು. ಈ ಮಧ್ಯೆ ಹಲವು ಸಂಘಟನೆಗಳು ಪಾರ್ಕಿಂಗ್ ಜಾಗದ ಶುಲ್ಕ ವಸೂಲಿಯಲ್ಲಿ ಅಕ್ರಮ ನಡೆಯುತ್ತಿದ್ದು ಪಾರ್ಕಿಂಗ್ ಜಾಗಕ್ಕೆ ಹರಾಜು ಕರೆದು ಹಣ ಮುಂಚಿತವಾಗಿ ದೇಗುಲ ಕಮೀಟಿ ಖಾತೆಗೆ ಜಮಾ ಮಾಡಿಸುವಂತೆ ಮನವಿಪತ್ರ ಸಲ್ಲಿಸಿದ್ದರು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಂಜನಾದ್ರಿ ದೇಗುಲದ ಕಾರ್ಯನಿರ್ವಾಹಕಾಧಿಕಾರಿಗಳು ಪತ್ರಿಕೆಗಳ ಮೂಲಕ ಪಾರ್ಕಿಂಗ್ ಜಾಗದ ಹಾಗೂ ಶೌಚಾಲಯದ ಹರಾಜು ಕರೆದಿದ್ದರು. ಹರಾಜು ಪಡೆದ ಒಂದು ವಾರದಲ್ಲಿ ಶೇ.30 ರಷ್ಟು ಹಣ ಪಾವತಿಸಬೇಕು. ಮುಂದಿನ ಹಣವನ್ನು ಕಂತುಗಳಲ್ಲಿ ಪಾವತಿಸುವ ಶರತ್ತುಗಳನ್ನು ವಿಧಿಸಲಾಗಿದೆ.
ಪ್ರತಿ ಶನಿವಾರ ಮಂಗಳವಾರ ಅಮಾವಾಸ್ಯೆ, ಹುಣ್ಣಿಮೆ ಹಾಗೂ ಸಂಕ್ರಾಂತ್ರಿ, ಹೋಳಿ, ಹನಮಜಯಂತಿ ಸಂದರ್ಭದಲ್ಲಿ ಸಾವಿರಾರು ಭಕ್ತರು ಅಂಜನಾದ್ರಿಗೆ ಆಗಮಿಸುತ್ತಾರೆ. ವಾಹನ ನಿಲುಗಡೆ ಮಾಡಲು ಬೆಟ್ಟದ ಕೆಳಗೆ ಇರುವ ಸರಕಾರಿ ಜಮೀನಿನಲ್ಲಿ ವ್ಯವಸ್ಥೆ ಮಾಡಲಾಗಿದೆ. 2018ರಲ್ಲಿ ಅಂಜನಾದ್ರಿ ದೇಗುಲವನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದ್ದು ಪ್ರತಿ ತಿಂಗಳು ಕನಿಷ್ಠ 10 ಲಕ್ಷ ರೂ.ಗಳಂತೆ ವಾರ್ಷಿಕ ಒಂದು ಕೋಟಿಗೂ ಅಧಿಕ ಹಣ ದೇಗುಲದ ಹುಂಡಿಯಲ್ಲಿ ಜಮಾ ಆಗುತ್ತಿದೆ. ಅಂಜನಾದ್ರಿಗೆ ಬರುವ ಭಕ್ತರು ದೇಣಿಗೆಯನ್ನು ಬರೆಸಲು ದೇಗುಲದ ಕಚೇರಿಯಲ್ಲಿ ರಸೀದಿಯ ಮತ್ತು ಆನ್‌ಲೈನ್ ಮೂಲಕವೂ ವ್ಯವಸ್ಥೆ ಮಾಡಲಾಗಿದೆ. 2018 ರಿಂದ ದೇಗುಲ ಜಿಲ್ಲಾಡಳಿತದ ವ್ಯಾಪ್ತಿಗೆ ಬಂದ ನಂತರ ಸ್ಥಳೀಯ 18 ಜನರನ್ನು ದಿನನಿತ್ಯದ ಕೆಲಸ ಕಾರ್ಯಗಳಿಗೆ ನೇಮಕ ಮಾಡಿಕೊಂಡು ದೇಗುಲದ ಬ್ಯಾಂಕ್ ಖಾತೆಯಿಂದ ವೇತನ ಭವಿಷ್ಯ ನಿಧಿ ವಿತರಣೆ ಮಾಡಲಾಗುತ್ತಿದ್ದು ಪ್ರತಿ ವರ್ಷ ಆಡಿಟ್ ಮಾಡಿಸಲಾಗುತ್ತಿದೆ.
ಪಾರ್ಕಿಂಗ್ ಜಾಗದ ಹರಾಜು ಪ್ರಕ್ರಿಯೆಯಲ್ಲಿ ತಹಸೀಲ್ದಾರ್ ಯು.ನಾಗರಾಜ, ಕಂದಾಯ ನಿರೀಕ್ಷಕ ಮಂಜುನಾಥ ಸ್ವಾಮಿ ಸೇರಿ ಹಂಪಿ, ತೋರಗಲ್, ಬಳ್ಳಾರಿ, ಗಂಗಾವತಿ, ಕೊಪ್ಪಳ, ಕನಕಗಿರಿ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.