ಗಂಗಾವತಿ: ತಾಲೂಕಿನ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಅನ್ಯ ಕೋಮಿನ ಜನರು ವ್ಯಾಪಾರ ವಹಿವಾಟು ಮಾಡದಂತೆ ನಿರ್ಬಂಧಿಸುವಂತೆ ಹಿಂದೂ ಜಾಗರಣಾ ವೇದಿಕೆ ಹಾಗೂ ಸಂಘ ಪರಿವಾರದವರು ತಾಲೂಕು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಅಂಜನಾದ್ರಿಯ ಸುತ್ತ ಕಟ್ಟಿದ್ದ ಬ್ಯಾನರ್ ಹಿನ್ನೆಲೆಯಲ್ಲಿ ಅಂಜನಾದ್ರಿಯ ಹತ್ತಿರದ ತೆಂಗಿನ ಕಾಯಿ, ಪೂಜಾ ಸಾಮಾನು ಹಾಗೂ ಉಪಹಾರದಂಗಡಿಗಳನ್ನು ನಡೆಸುತ್ತಿದ್ದ ಅನ್ಯ ಕೋಮಿನ ವ್ಯಾಪಾರಿಗಳು ಸ್ವಯಂಪ್ರೇರಣೆಯಿಂದ ತಮ್ಮ ಅಂಗಡಿಗಳನ್ನು ಬಂದ್ ಮಾಡಿಕೊಂಡಿದ್ದಾರೆ.
ಹಿಂದೂ ಧರ್ಮಿಯರ ಅಂಗಡಿಗಳು ಮತ್ತು ವ್ಯಾಪಾರಿಗಳು ತೆಂಗಿನಕಾಯಿ ಕೇಸರಿ ಶಾಲು ಮಾರಾಟದಲ್ಲಿ ತಲ್ಲಿನರಾಗಿದ್ದರು. 10 ಕ್ಕೂ ಹೆಚ್ಚು ಅಂಗಡಿಗಳು ಮತ್ತು 20ಕ್ಕೂ ಹೆಚ್ಚು ಅನ್ಯಕೋಮಿನ ಮಹಿಳೆಯರು, ಪುರುಷರು ಹನುಮನಹಳ್ಳಿ, ಆನೆಗೊಂದಿ, ನಂದಯ್ಯನಕ್ರಾಸ್, ರಾಂಪೂರ, ಮಲ್ಲಾಪೂರ, ಸಾಣಾಪೂರ, ವಿರೂಪಾಪೂರಗಡ್ಡಿ ಹಾಗೂ ಗಂಗಾವತಿಯಿಂದ ಆಗಮಿಸಿ ಕಳೆದ 4 ವರ್ಷಗಳಿಂದ ಅಂಜನಾದ್ರಿಯ ಹತ್ತಿರ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ.
ಹಿಂದೂ ಜಾಗರಣಾ ವೇದಿಕೆವರು ರಾಜ್ಯದ ಇತರೆಡೆ ಹಿಂದೂ ದೇವಾಲಯಗಳ ಮುಂದೆ ಅನ್ಯ ಕೋಮಿನವರು ವ್ಯಾಪಾರ ನಡೆಸದಂತೆ ಬ್ಯಾನರ್ ಹಾಕುತ್ತಿದ್ದು ಡಿ.03,04 ಮತ್ತು 05 ರಂದು ಹನುಮಮಾಲೆ ವಿಸರ್ಜನೆ ಮಾಡುವ ಧಾರ್ಮಿಕ ಕಾರ್ಯಕ್ರಮ ಇರುವುದರಿಂದ ಇಲ್ಲಿಯೂ ಅನ್ಯ ಕೋಮಿನವರಿಗೆ ವ್ಯಾಪಾರ ಮಾಡಲು ಅವಕಾಶ ಕೊಡಬಾರದೆಂದು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ನಂತರ ಆನೆಗೊಂದಿ ಅಂಜನಾದ್ರಿ ಸುತ್ತಲಿನ ಪ್ರದೇಶದಲ್ಲಿ ಅನ್ಯಕೋಮಿನವರು ವ್ಯಾಪಾರ ಮಾಡದಂತೆ ಬ್ಯಾನರ್ ಬಂಟಿಂಗ್ಸ್ ಕಟ್ಟಿದ್ದರು. ಇದರಿಂದಾಗಿ ಅಂಜನಾದ್ರಿಯಲ್ಲಿದ್ದ ಅನ್ಯಕೋಮಿನ ವ್ಯಾಪಾರಿಗಳು ಬುಧವಾರದಿಂದಲೇ ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿಕೊಂಡಿದ್ದಾರೆ.
ವ್ಯಾಪಾರಿಗಳ ಸ್ಥಳಾಂತರ
ಡಿ.03.04 ಮತ್ತು 05 ರಂದು ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಸುಮಾರು ಒಂದು ಲಕ್ಷ ಹನುಮಭಕ್ತರು ಸೇರುವುದರಿಂದ ಜನದಟ್ಟಣೆ ಮತ್ತು ಸಂಚಾರ ಸುಗಮಗೊಳಿಸಲು ಅಂಜನಾದ್ರಿಯ ಹಾಗೂ ರಸ್ತೆಗೆ ಹೊಂದಿಕೊಂಡಿದ್ದ ಹಣ್ಣು, ಹೂವು, ತೆಂಗಿನಕಾಯಿ ಮತ್ತು ಕೇಸರಿ ಶಲ್ಯ ಮಾರಾಟ ಮಾಡುವ ಮತ್ತು ಉಪಹಾರ, ಚಹಾದಂಗಡಿಗಳನ್ನು ಪಂಪಾಸರೋವರದ ಮಾರ್ಗದಲ್ಲಿರುವ ಮೂರ್ತಿ ಹೊಲಕ್ಕೆ ಸ್ಥಳಾಂತರ ಮಾಡುವಂತೆ ತಾಲೂಕು ಆಡಳಿತ ವ್ಯಾಪಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದು ಒಂದು ವೇಳೆ ಸ್ಥಳಾಂತರ ಮಾಡದಿದ್ದರೆ ತಾಲೂಕು ಆಡಳಿತವೇ ಸ್ಥಳಾಂತರ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.
ಹನುಮಮಾಲೆ ವಿಸರ್ಜನೆಗೆ ಈಗಾಗಲೇ ತಾಲೂಕು, ಜಿಲ್ಲಾಡಳಿತಗಳು ಸರ್ವ ಸಿದ್ಧತೆ ಮಾಡಿಕೊಂಡಿದ್ದು ಜನದಟ್ಟಣೆ ನಿಯಂತ್ರಿಸಲು ಪೊಲೀಸ್ ಬಂದೋಬಸ್ತ್ ಹಾಗೂ ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತದೆ. ಆಗಮಿಸುವ ಭಕ್ತರ ವಾಹನಗಳು ಮತ್ತು ಬೈಕ್‌ಗಳು ನಿಲ್ಲಿಸಲು ರೈತರ ಗದ್ದೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕುಡಿಯುವ ನೀರು, ಶೌಚಾಲಯ ಸೇರಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಅಂಜನಾದ್ರಿಯಲ್ಲಿ ಎಲ್ಲಾ ಕೋಮಿನವರು ಸಹ ವ್ಯಾಪಾರ ವಹಿವಾಟು ಮಾಡಲು ಅವಕಾಶ ಕಲ್ಪಿಸಲಾಗಿದ್ದು ಯಾರನ್ನು ನಿಷೇಧ ಮಾಡಿಲ್ಲ. ಸೌಹಾರ್ದತೆಯಿಂದ ವ್ಯಾಪಾರ ವಹಿವಾಟು ಮಾಡಬೇಕು. ಕೋಮುದ್ವೇಷ ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ಆಕ್ಷೇಪಾರ್ಹ ಬ್ಯಾನರ್ ಬಂಟಿಂಗ್ಸ್ ಗಳನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ತೆರವುಗೊಳಿಸಲಾಗಿದೆ.
-ಬಸವಣೆಪ್ಪ ಕಲಶೆಟ್ಟಿ, ಎಸಿ ಕೊಪ್ಪಳ