ಗಂಗಾವತಿ: ವಿಶ್ವದಾದ್ಯಂತ ಶ್ರೀರಾಮ ಜನ್ಮಭೂಮಿ ಅಯೋಧ್ಯೆ ಖ್ಯಾತಿ ಪಡೆದಂತೆ ಹನುಮ ಜನ್ಮಭೂಮಿ ಕಿಷ್ಕಿಂದಾ ಅಂಜನಾದ್ರಿ ಪ್ರಸಿದ್ದಿಯಾಗಿ ವಿಶ್ವದ ಎಲ್ಲಾ ಹಿಂದೂಗಳು ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವಂತಾಗಲಿ ಎಂದು ರಾಜ್ಯಪಾಲ ವಜುಭಾಯಿ ವಾಲಾ ಆಶಿಸಿದರು.
ಅವರು ಇತಿಹಾಸ ಪ್ರಸಿದ್ಧ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಗುಜರಾತ್ ರಾಜ್ಯದ ಆನಂದ ನಗರದಲ್ಲಿರುವ 500 ವರ್ಷದ ಶ್ರೀ ಹನುಮಾನ ದೇಗುಲ ಜೀರ್ಣೋದ್ಧಾರ ಕಾರ್ಯ ಆರಂಭವಾಗಿದ್ದು ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ (ಕಲ್ಲು) ಶಿಲೆಯನ್ನು ತೆಗೆದುಕೊಂಡು ಹೋಗಲು ರವಿವಾರ ಅಂಜನಾದ್ರಿ ಬೆಟ್ಟದಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜೆ ನೆರವೇರಿಸಲಾಯಿತು.
ಅಂಜನಾದ್ರಿ ಬೆಟ್ಟಕ್ಕೆ ನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇವರಿಗೆ ಮೂಲಸೌಕರ್ಯ ಕಲ್ಪಿಸಲು ಪರಿಸರಕ್ಕೆ ಧಕ್ಕೆಯಾಗದಂತೆ ಇಲ್ಲಿ ಅಭಿವೃದ್ಧಿ ಕಾರ್ಯಕ್ರಮ ನಡೆಯಬೇಕು. ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಕ್ಕೆ ಸರಕಾರದ ನೇತೃತ್ವದಲ್ಲಿ ರಚನೆ ಮಾಡಿದ ಟ್ರಸ್ಟ್ ಮಾದರಿಯಲ್ಲಿ ಕಿಷ್ಕಿಂದಾ ಅಂಜನಾದ್ರಿ ಟ್ರಸ್ಟ್ ರಚಿಸಿ ಸ್ಥಳೀಯರ ಸಹಕಾರದಿಂದ ಅಭಿವೃದ್ಧಿ ಮಾಡಲು ತಾವು ಸರಕಾರಕ್ಕೆ ಸಲಹೆ ನೀಡುವುದಾಗಿ ರಾಜ್ಯಪಾಲರು ತಿಳಿಸಿದರು.
ಇದನ್ನೂ ಓದಿ:ನಾನು ಒರಿಜಿನಲ್ ಜನಸಂಘದವನು, ಹಾಫ್ ಚಡ್ಡಿ ಹಾಕುತ್ತಿದ್ದೆ: ರಮೇಶ ಜಾರಕಿಹೊಳಿ
ಅರ್ಚಕ ಹಾಗು ಟ್ರಸ್ಟ್ ಪೀಠಾಧಿಪತಿ ಮಹಾಂತ ವಿದ್ಯಾದಾಸ ಬಾಬಾ, ಸಂಸದ ಕರಡಿ ಸಂಗಣ್ಣ,ಶಾಸಕ ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ್ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್, ಐಜಿ ಡಾ.ನಂಜುಂಡಸ್ವಾಮಿ, ಎಸ್ಪಿ ಟಿ.ಶ್ರೀಧರ, ಎಸಿ ನಾರಾಯಣ ರೆಡ್ಡಿ ಕನಕರೆಡ್ಡಿ, ತಹಸೀಲ್ದಾರ್ ಎಂ.ರೇಣುಕಾ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ರಾಜವಂಶಸ್ಥ ಶ್ರೀಕೃಷ್ಣದೇವರಾಯ, ಸಂತೋಷ ಕೆಲೋಜಿ ಸೇರಿ ಅನೇಕರಿದ್ದರು.