Advertisement

15 ದಿನಗಳಲ್ಲಿ ಅಂಜನಾದ್ರಿ ಅಭಿವೃದ್ಧಿ ನೀಲನಕ್ಷೆ

06:25 PM Jul 14, 2022 | Team Udayavani |

ಹೊಸಪೇಟೆ: ಹನುಮನ ಜನ್ಮಭೂಮಿ ಅಂಜನಾದ್ರಿಯ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಪರಿಣಿತ ವಾಸ್ತುಶಿಲ್ಪತಜ್ಞರಿಂದ 15 ದಿನದೊಳಗೆ ನೀಲನಕ್ಷೆ ಸಿದ್ಧಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದಸಿಂಗ್‌ ಹೇಳಿದರು.

Advertisement

ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿಟ್ಟಿದ್ದು, ಆ ಹಣವನ್ನು ಹಂತಹಂತವಾಗಿ ಹಣಕಾಸು ಇಲಾಖೆ ಒದಗಿಸಲಿದೆ. ಇನ್ನೂ ಹಣ ಅವಶ್ಯವಿದ್ದರೆ ಸರಕಾರ ಒದಗಿಸಲಿದೆ. ಈ ಪ್ರದೇಶದಲ್ಲಿ ಮೊದಲ ಹಂತವಾಗಿ ಶೌಚಾಲಯ, ಸ್ನಾನಗೃಹ, ಪಾರ್ಕಿಂಗ್‌, ಪ್ರವಾಸಿಗರ ಕೊಠಡಿ, ವಾಣಿಜ್ಯ ಮಳಿಗೆಗಳು ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒಳಗೊಂಡ ನೀಲನಕ್ಷೆ ಸಿದ್ಧಪಡಿಸಲಾಗುವುದು. ಜು. 20ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಜನಾದ್ರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಭೂಸ್ವಾಧೀನಕ್ಕೆ ರೈತರ ಒಪ್ಪಿಗೆ: ಅಂಜನಾದ್ರಿ ಸಮಗ್ರ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ 62 ಎಕರೆ ರೈತರ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಆಂಜನೇಯನ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ರೈತರು ಜಮೀನು ನೀಡಲು ಮುಂದೆ ಬಂದಿದ್ದಾರೆ. ರೈತರಿಗೆ ಪ್ರತಿ ಎಕರೆ ಜಮೀನಿಗೆ ಗರಿಷ್ಠ 42 ಲಕ್ಷ ರೂ. ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದಲೂ ರೈತರಿಗೆ ಈ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.

ತಾವು ಕೂಡ ತಮ್ಮ ತಾಲೂಕಿನ ರೈತರೊಂದಿಗೆ ಸಮಾಲೋಚನೆ ನಡೆಸಿ ಮನವರಿಕೆ ಮಾಡಿಕೊಡಿ ಎಂದು ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಅವರಿಗೆ ಸೂಚನೆ ನೀಡಿದರು. ಇನ್ನೂ ಹೆಚ್ಚಿನ ಹಣಕ್ಕೆ ರೈತರು ಪಟ್ಟುಹಿಡಿದರೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.

Advertisement

ಅಂಜನಾದ್ರಿ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಾಥಮಿಕ ಅಧಿಸೂಚನೆ ಹೊರಡಿಸುವಂತೆ ಸ್ಥಳದಲ್ಲಿದ್ದ ಕೊಪ್ಪಳ ಜಿಲ್ಲಾಧಿ ಕಾರಿ ಸುರಳ್ಕರ್‌ ವಿಕಾಸ್‌ ಕಿಶೋರ್‌ ಅವರಿಗೆ ಸೂಚನೆ ನೀಡಿದರು.

ನಿತ್ಯ ಅಂಜನಾದ್ರಿ ಬೆಟ್ಟದಲ್ಲಿನ ಆಂಜನೇಯನ ದರ್ಶನಕ್ಕೆ 5 ಸಾವಿರ ಜನರು ಆಗಮಿಸಲಿದ್ದಾರೆ. ವಾರಂತ್ಯದಲ್ಲಿ 25 ಸಾವಿರದಷ್ಟು ಜನರಿದ್ದರೇ ಹಬ್ಬ-ಹರಿದಿನಗಳ ಸಂದರ್ಭದಲ್ಲಿ 50 ಸಾವಿರದಷ್ಟು ಜನರು ದರ್ಶನಕ್ಕೆ ಬರುತ್ತಿದ್ದಾರೆ. ಅವರೆಲ್ಲರಿಗೂ ಅಗತ್ಯ ಸೌಲಭ್ಯ ಕಲ್ಪಿಸುವುದು ಆದ್ಯ ಕರ್ತವ್ಯವಾಗಿದೆ. ಮೊದಲ ಹಂತದಲ್ಲಿ ಭೂಸ್ವಾ ಧೀನಕ್ಕೆ ಹೆಚ್ಚು ಹಣ ಖರ್ಚಾಗಲಿದೆ. ಉಳಿದ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಪಿಪಿಪಿ ಮಾಡಲ್‌ನಲ್ಲಿ ರೋಪ್‌ ವೇ: ಅಂಜನಾದ್ರಿ ಬೆಟ್ಟಕ್ಕೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೋಪ್‌ ವೇ ಅಳವಡಿಸಲು ಉದ್ದೇಶಿಸಲಾಗಿದ್ದು, ಐಡೆಕ್‌ ಸಂಸ್ಥೆ ವತಿಯಿಂದ ವಿಸಿಬಲಿಟಿ ಸ್ಟಡೀಸ್‌ ಮಾಡಿದ ನಂತರ ಟೆಂಡರ್‌ ಹಾಗೂ ಇನ್ನಿತರ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

35 ಕಿ.ಮೀ ರಸ್ತೆ ಅಭಿವೃದ್ಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ತಿಂಗಳು ಸಭೆ ನಡೆಸಿ ನೀಡಿದ ಸೂಚನೆ ಅನ್ವಯ ಅಂಜನಾದ್ರಿಗೆ ಸಂಪರ್ಕ ಕಲ್ಪಿಸಲು ಹಿಟ್ನಾಳ್‌ ಕ್ರಾಸ್‌ನಿಂದ ಗಂಗಾವತಿಯವರೆಗಿನ 35 ಕಿ.ಮೀ ಚತುಷ್ಪತ ರಸ್ತೆ ನಿರ್ಮಿಸಲು ಉದ್ದೇಶಿಸಿ ವಿಸ್ತೃತ ವರದಿ ಸಿದ್ಧಪಡಿಸಲಾಗಿದೆ. 148 ಎಕರೆ ಭೂಸ್ವಾ ಧೀನ ಸೇರಿ 400 ಕೋಟಿ ರೂ. ಈ ರಸ್ತೆ ನಿರ್ಮಾಣಕ್ಕೆ ಅಂದಾಜು ವೆಚ್ಚವಾಗಲಿದೆ ಎಂದರು. ಹಿಟ್ನಾಳ್‌ ಕ್ರಾಸ್‌ನಿಂದ ಗಂಗಾವತಿವರೆಗೆ 10 ಹಳ್ಳಿಗಳು ಬರಲಿದ್ದು, ಹಳ್ಳಿಗಳ ಹತ್ತಿರ ಮಾತ್ರ ಈಗಿರುವ ದ್ವಿಪಥದ ರಸ್ತೆಯನ್ನೇ ಬಳಸಿಕೊಳ್ಳಲಾಗುತ್ತದೆ. ಈ ವಿಸ್ತೃತ ವರದಿಯನ್ನು ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ತರಲಾಗುವುದು. ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಕೊಪ್ಪಳ ಜಿಲ್ಲಾಧಿಕಾರಿ ಸುರಳ್ಕರ್‌ ವಿಕಾಸ್‌ ಕಿಶೋರ್‌ ಅವರು ಇದುವರೆಗಿನ ಪ್ರಗತಿಯನ್ನು ಸಭೆಯಲ್ಲಿ ವಿವರಿಸಿದರು.

ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಅವರು ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸುಂಕಮ್ಮ, ವಿಜಯನಗರ ಜಿಲ್ಲಾಧಿ ಕಾರಿ ಅನಿರುದ್ಧ ಶ್ರವಣ್‌, ವಿಜಯನಗರ ಎಸ್‌ಪಿ ಡಾ| ಅರುಣ್‌ ಕೆ, ಕೊಪ್ಪಳ ಎಸ್‌.ಪಿ ಅರುಣಾಂಗುÒ ಗಿರಿ, ವಿಜಯನಗರ ಜಿಪಂ ಸಿಇಒ ಹರ್ಷಲ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next