Advertisement

ಅಂಜನಾ ವಸಿಷ್ಠ ಕೊಲೆ: “ಮದುವೆ ನಿರಾಕರಿಸಿದ್ದು ಕೊಲೆಗೆ ಕಾರಣ’

10:42 AM Jun 10, 2019 | keerthan |

ಮಂಗಳೂರು: ಅತ್ತಾವರದ ಬಾಡಿಗೆ ಮನೆಯಲ್ಲಿ ಶುಕ್ರವಾರ ನಡೆದಿದ್ದ ವಿದ್ಯಾರ್ಥಿನಿ ಅಂಜನಾ ವಸಿಷ್ಠ (22) ಕೊಲೆ ಪ್ರಕರಣದ ಆರೋಪಿ ವಿಜಯಪುರ ಜಿಲ್ಲೆ ಸಿಂಧಗಿಯ ಸಂದೀಪ್‌ ರಾಥೋಡ್‌ (24) ನನ್ನು ಪೊಲೀಸರು ರವಿವಾರ ಮಂಗಳೂರಿಗೆ ಕರೆ ತಂದು ಕೊಲೆ ನಡೆದ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ಬಳಿಕ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಕೊಲೆ ಆಕಸ್ಮಿಕ
ಅಂಜನಾ ಮತ್ತು ತಾನು 2018 ಜುಲೈ ತಿಂಗಳಲ್ಲಿ ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದೆವು. ದಿನ ಕಳೆದಂತೆ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಮಂಗಳೂರಿನಲ್ಲಿ ಆಗಾಗ ಬಂದು ಭೇಟಿಯಾಗುತ್ತಿದ್ದೆವು. ಮದುವೆಯಾಗಲು ಇಚ್ಛಿಸಿದ್ದೆವು. ಆದರೆ ಆಕೆ ಮನೆಯಲ್ಲಿ ಬೇರೆ ಮದುವೆ ಮಾಡಲು ಗಂಡು ಹುಡುಕಿದ್ದಾರೆ. ನನ್ನನ್ನು ಮರೆತು ಬಿಡು ಎಂದು ಆಕೆ ಹೇಳಿದ್ದಾಳೆ. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟವಾಗಿದೆ. ಸಿಟ್ಟಿನ ಭರದಲ್ಲಿ ಆಕಸ್ಮಿಕವಾಗಿ ಆಕೆಯ ಕೊಲೆ ನಡೆದು ಹೋಗಿದೆ ಎಂದು ಸ್ಥಳ ಮಹಜರು ನಡೆಸಿದಾಗ ಆತ ಪೊಲೀಸರಿಗೆ ವಿವರಿಸಿದ್ದಾನೆ.

ಜತೆಗಿರಲು ನಿರ್ಧರಿಸಿದ್ದರು
ಅಂಜನಾ ಎಂಎಸ್ಸಿ ಪದವಿ ಮುಗಿದ ಬಳಿಕ ಮಂಗಳೂರಿನಲ್ಲಿ ಬ್ಯಾಂಕಿಂಗ್‌ ಕೋಚಿಂಗ್‌ ಹಾಗೂ ಸಂದೀಪ್‌ ರಾಥೋಡ್‌ ಪಿಎಸ್‌ಐ ಪರೀಕ್ಷೆಗೆ ಕೋಚಿಂಗ್‌ ಪಡೆಯಲು ಬಂದು ಬಾಡಿಗೆ ಮನೆಯಲ್ಲಿ ಜತೆಗೆ ವಾಸ ಮಾಡುವ ಬಗ್ಗೆ ಮೊದಲೇ ನಿರ್ಧರಿಸಿದ್ದರು. ಆದರೆ ಕೊನೆ ಹಂತದಲ್ಲಿ ಮನೆಯವರು ನೋಡಿದ ಹುಡುಗನ ಜತೆ ವಿವಾಹವಾಗಲು ನಿರ್ಧರಿಸಿ ಈ ವಿಷಯವನ್ನು ರಾಥೋಡ್‌ ಜತೆ ಹಂಚಿಕೊಂಡದ್ದೇ ಆಕೆಯ ಕೊಲೆಗೆ ಕಾರಣವಾಗಿದೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

ಕದ್ರಿಯಲ್ಲಿ ತಾಳಿ ಕಟ್ಟಿದ್ದನಂತೆ!
ಸಂದೀಪ್‌ ರಾಠೊಡ್‌ ಯಾನೆ ಸಂದೀಪ್‌ ಬಾಳಪ್ಪ ರಾಠೊಡ್‌ನ‌ನ್ನು ಜೂ. 8ರಂದು ವಿಜಯಪುರ ಜಿಲ್ಲೆಯ ಸಿಂಧಗಿಯ ಸಂಗಮ್‌ ಡಿಲೇಕ್ಸ್‌ ವಸತಿ ಗೃಹದಲ್ಲಿ ದಸ್ತಗಿರಿ ಮಾಡಲಾಗಿತ್ತು. ಸಂದೀಪ್‌ ಮತ್ತು ಅಂಜನಾ ಸುಮಾರು ಒಂದು ವರ್ಷದಿಂದ ಫೇಸ್‌ ಬುಕ್‌ ಮುಖಾಂತರ ಪರಿಚಿತರಾಗಿದ್ದರು. ಆಗಾಗ ಬೇರೆ ಬೇರೆ ಕಡೆಗಳಲ್ಲಿ ಭೇಟಿ ಮಾಡಿ ಒಂದು ದಿನ ಕದ್ರಿ ದೇವಸ್ಥಾನದಲ್ಲಿ ಮದುವೆಯಾಗಿ ಆತ ಅಂಜನಾಳಿಗೆ ತಾಳಿ ಕಟ್ಟಿದ್ದು, ಈ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಬಳಿಕ ಲಾಡ್ಜ್ಗಳಲ್ಲಿ ಉಳಕೊಂಡು ದೈಹಿಕ ಸಂಪರ್ಕ ಹೊಂದಿದ್ದರು. ಅನಂತರ ಅಂಜನಾಳ ಮನೆಯವರು ಆಕೆಗೆ ಮದುವೆ ಮಾಡಲು ಹುಡುಗನನ್ನು ನಿಶ್ಚಯಿಸಿದ್ದು, ಅದಕ್ಕೆ ಅಂಜನಾ ಒಪ್ಪಿದ್ದಳು.

ಈ ವಿಚಾರವನ್ನು ಆಕೆ ಸಂದೀಪ್‌ ರಾಠೊಡ್‌ನಿಗೆ ಹೇಳಿದಾಗ, ಆತ ಆಕೆಯನ್ನು ಮಂಗಳೂರಿನ ರೂಮಿಗೆ ಬರುವಂತೆ ತಿಳಿಸಿದ್ದ. ಜೂ. 7 ರಂದು ಬೆಳಗ್ಗೆ ಅಂಜನಾಳ ರೂಮಿಗೆ ಬಂದಿದ್ದು, ಆ ಸಮಯ ಅವರಿಬ್ಬರ ಮಧ್ಯೆ ಜಗಳವಾಗಿತ್ತು. ಕೋಪದಿಂದ ಸಂದೀಪ್‌ ಆಕೆಯನ್ನು ಮಂಚದ ಮೇಲೆ ದೂಡಿ ಹಾಕಿ ಆಕೆಯ ಕುತ್ತಿಗೆಯನ್ನು ಮಂಚದ ಕಬ್ಬಿಣದ ಸರಳಿನ ಎಡೆಗೆ ಸಿಲುಕಿಸಿ, ಟಿ.ವಿ. ಕೇಬಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದನ್ನು ವಿಚಾರಣೆ ಸಂದರ್ಭ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next