“ಶ್ರುತಿ ಲಯ ಫೈನ್ ಆರ್ಟ್ಸ್’ ನೃತ್ಯಶಾಲೆಯ ನಾಟ್ಯಗುರು ಹೇಮಲತಾ ಪ್ರಕಾಶರ ಸಮರ್ಥ ತರಬೇತಿಯಲ್ಲಿ ರೂಪುಗೊಂಡ ಭರವಸೆಯ ಕಲಾವಿದೆ ಅಂಜಲಿ ಪದ್ಮಕುಮಾರ್, ಇತ್ತೀಚೆಗೆ, ಎ.ಡಿ.ಎ.ರಂಗಮಂದಿರದಲ್ಲಿ ವಿಧ್ಯುಕ್ತವಾಗಿ ರಂಗಪ್ರವೇಶ ಮಾಡಿದರು. ಸತತ ಎರಡುಗಂಟೆಗಳ ಕಾಲ ಲೀಲಾಜಾಲವಾಗಿ ನರ್ತಿಸಿದ ಅಂಜಲಿ, ತಮ್ಮ ಭಾವಪೂರ್ಣ ಅಭಿನಯದಿಂದ, ನೆರೆದಿದ್ದವರ ಅಂತರಂಗವನ್ನು ಸ್ಪರ್ಶಿಸಿದರು.
ಮೊದಲಿನಿಂದ ಕಡೆಯವರೆಗೂ ಚೇತೋಹಾರಿಯಾಗಿ ನರ್ತಿಸಿದ ಅಂಜಲಿ, “ಪುಷ್ಪಾಂಜಲಿ’ಯಿಂದ ಕಡೆಯ ತಿಲ್ಲಾನ’ದವರೆಗೂ ಒಂದೇ ಚೈತನ್ಯವನ್ನು ಉಳಿಸಿಕೊಂಡು ಬಂದಿದ್ದು ವಿಶೇಷ. “ಅಲ್ಲರಿಪು’ವಿನಲ್ಲಿ ಕಂಡುಬಂದ ಅಂಗ ಶುದ್ಧಿ, ಸುಂದರ ಚಾರಿಗಳ ಸೊಬಗು, ಶಕ್ತಿಸ್ವರೂಪಿಣಿ “ದೇವಿಸ್ತುತಿ’ಯ ಪ್ರಸನ್ನ-ರೌದ್ರ ರೂಪಗಳ ಅಭಿನಯ- ಮನಮೋಹಕ ಭಂಗಿಗಳು ನೆರೆದವರ ಕಣ್ತುಂಬಿದವು. “ಶ್ರೀ ಕೃಷ್ಣ ಕಮಲನಾಥೋ’- ಪದವರ್ಣ ಅವಳ ನೃತ್ಯಪ್ರತಿಭೆಯನ್ನು ಒರೆಗೆ ಹಚ್ಚಿತು.
ಸಂಚಾರಿಗಳಲ್ಲಿ ಮೂಡಿಬಂದ ಕೃಷ್ಣನ ಜನನದ ಪ್ರಕರಣದಿಂದ ಪೂತನಿ ಸಂಹಾರ, ಗೋವರ್ಧನ ಗಿರಿಧಾರಿ, ಗೀತೋಪದೇಶ- ವಿಶ್ವರೂಪದವರೆಗಿನ ಎಲ್ಲ ಕಥಾನಕಗಳಲ್ಲೂ ನಾಟಕೀಯ ದೃಶ್ಯವನ್ನು ಸೃಜಿಸಿದ ಅಂಜಲಿ ಪ್ರೇಕ್ಷಕರಲ್ಲಿ ಸಂಚಲನವನ್ನುಂಟು ಮಾಡಿದಳು. ಅಭಿನಯಕ್ಕಾಗಿಯೇ ಹೇಳಿಮಾಡಿಸಿದ್ದ ಭಾವಸ್ಫುರಣ ಕಂಗಳು, ಭಾವ ಸರೋವರದ ಮುಖಾಭಿವ್ಯಕ್ತಿ, ಸಮರ್ಥವಾಗಿ ಸಹಕರಿಸುತ್ತಿದ್ದ ಬಾಗು- ಬಳುಕಿನ ದೇಹಶ್ರೀ, ಅವಳ ನರ್ತನದ ಧನಾತ್ಮಕ ಅಂಶಗಳು.
“ಬಾಗಿಲನು ತೆರೆದು’-ಕನಕದಾಸರ ಕೃತಿಗೆ ವಿಶಿಷ್ಟ ಆಯಾಮ ನೀಡಿದ ಅವಳ ನರ್ತನದ ರಚನಾತ್ಮಕ ಬಗೆ ಹೃದಯಸ್ಪರ್ಶಿ. ಜಾನಪದ ಲಯ- ಮಟ್ಟಿನ “ಕಾವಡಿ ಬಿಂದು’- ಸೊಗಸಾದ ಚೇತೋಹಾರಿ ಬನಿಗೆ ಸಾಕ್ಷಿ ಆಯಿತು. ರಸರೋಮಾಂಚದ “ತಿಲ್ಲಾನ’ ಆಹ್ಲಾದತೆಯನ್ನು ಪಸರಿಸಿತು.
* ವೈ.ಕೆ. ಸಂಧ್ಯಾಶರ್ಮ