ಸಾಫ್ಟ್ವೇರ್ ಕ್ಷೇತ್ರದಿಂದ ಸಿನಿಮಾರಂಗಕ್ಕೆ ಬಂದವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಅಲ್ಲಿಂದ ಬಂದವರೀಗ ನಿರ್ದೇಶನ, ನಿರ್ಮಾಣ, ನಟನೆ ಹೀಗೆ ಹಲವು ವಿಭಾಗದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಾಲಿಗೆ ಮತ್ತೂಬ್ಬ ನಟಿ ಸೇರಿದ್ದಾರೆ. ಹೆಸರು ಅಂಜಲಿ. ಯಾರು ಈ ಅಂಜಲಿ ಅಂದರೆ, “ಮನೋರಥ’ ಚಿತ್ರ ತೋರಿಸಬೇಕು. ಈ ವಾರ ತೆರೆಕಾಣುತ್ತಿರುವ ಚಿತ್ರವಿದು. ಅಂಜಲಿ ಈ ಚಿತ್ರದ ಮೂಲಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ, ಸುಮನ ಕಿತ್ತೂರ್ ನಿರ್ದೇಶನದ “ಕಿರಗೂರಿನ ಗಯ್ನಾಳಿಗಳು’ ಚಿತ್ರದಲ್ಲೊಂದು ಪಾತ್ರ ನಿರ್ವಹಿಸಿದ್ದರು. ಅದಾದ ಬಳಿಕ “ರನ್ ಆಂಟೋನಿ’ ಚಿತ್ರದಲ್ಲೂ ಕಾಣಿಸಿಕೊಂಡರು. ದಿನೇಶ್ ಬಾಬು ನಿರ್ದೇಶನದ “ನನಗಿಷ್ಟ’ ಚಿತ್ರದಲ್ಲಿ ಪಾತ್ರ ಮಾಡಿದ ಬಳಿಕ “ಮನೋರಥ’ ಚಿತ್ರ ಸಿಕ್ಕಿದೆ.
ಚಿತ್ರದ ಬಗ್ಗೆ ಹೇಳುವ ಅಂಜಲಿ, “”ಮನೋರಥ’ ಒಂದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಮನುಷ್ಯನ ಮನಸ್ಥಿತಿ ಮೇಲೆ ಸಾಗುವ ಚಿತ್ರವಿದು. ಮಾನಸಿಕ ದೌರ್ಬಲ್ಯ ಇರುವ ವ್ಯಕ್ತಿ ಮೇಲೆ ಒಂದಷ್ಟು ಘಟನೆಗಳು ನಡೆಯುತ್ತವೆ. ಒಂದು ಫೋಬಿಯಾ ಖಾಯಿಲೆ ಸುತ್ತ ನಡೆಯೋ ಕಥೆಯೇ ಚಿತ್ರದ ಜೀವಾಳ. ಇದೊಂದು ಪ್ರಯೋಗಾತ್ಮಕ ಚಿತ್ರ. ಇಲ್ಲಿ ಎರಡು ಶೇಡ್ ಪಾತ್ರಗಳಿವೆ. ಒಂದು ಡಾಕ್ಟರ್ ಪಾತ್ರ. ಅದು ಪಾಸಿಟಿವ್ ಆಗಿರುತ್ತೆ. ಇನ್ನೊಂದು ನೆಗೆಟಿವ್ ಪಾತ್ರ. ಅದನ್ನು ಚಿತ್ರಮಂದಿರದಲ್ಲೇ ನೋಡಬೇಕು ಎಂಬುದು ಅಂಜಲಿ ಮಾತು.
ಅಂಜಲಿ ಮೂರನೇ ತರಗತಿ ಓದುವಾಗಲೇ ಭರನಾಟ್ಯ ಕಲಿತವರು. ವಿದ್ವತ್ ಕೂಡ ಆಗಿದೆ. ಎಂಜಿನಿಯರಿಂಗ್ ಮುಗಿಸಿ, ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿಗೆ, ಅದೇಕೋ ಸಾಫ್ಟ್ವೇರ್ ಕ್ಷೇತ್ರ ಬೇಡವಾಗಿ, ಸಿನಿಮಾ ಕಡೆ ವಾಲಿದ್ದಾರೆ. ಅದಕ್ಕೂ ಮುನ್ನ, ರಂಗಭೂಮಿಗೆ ಕಾಲಿಟ್ಟು, ಸಾತ್ವಿಕ ರಂಗಪಯಣ ತಂಡದಲ್ಲಿ ಹಲವು ನಾಟಕ ಪ್ರದರ್ಶನ ಮಾಡಿದ್ದಾರೆ. ಆ ಬಳಿಕ ಒಂದಷ್ಟು ಕಾರ್ಪೋರೇಟ್ ಇವೆಂಟ್‌ಗಳಿಗೆ ನಿರೂಪಣೆ ಮಾಡಿಕೊಂಡು, ಕಿರುತೆರೆಯಲ್ಲೂ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದಾರೆ. ಎರಡು ವರ್ಷದ ಅನುಭವ ಪಡೆದ ಅಂಜಲಿಗೆ ಈಗ ಮೊದಲ ಸಲ ನಾಯಕಿ ಆಗುವ ಅವಕಾಶ ಸಿಕ್ಕಿದೆ. ಇದೊಂದು ಗುರುತಿಸಿಕೊಳ್ಳುವ ಚಿತ್ರವಾಗುತ್ತೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಪ್ರಸನ್ನಕುಮಾರ್ ನಿರ್ದೇಶಕರು. ರಾಜ್‌ಚರಣ್ ನಾಯಕರಾಗಿದ್ದಾರೆ. ಚಂದ್ರು ಓಬಯ್ಯ ಸಂಗೀತವಿದೆ. ಮುರಳಿ ಅವರ ಛಾಯಾಗ್ರಹಣವಿದೆ. ಸದ್ಯಕ್ಕೆ ಅಂಜಲಿ “ಸ್ವತ್ಛ ಕರ್ನಾಟಕ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರೊಂದಿಗೆ ಇನ್ನೂ ಹೆಸರಿಡದ ಎರಡು ಚಿತ್ರ ಒಪ್ಪಿದ್ದಾರೆ.