ಮುಂಬಯಿ: ಡಾ| ಹೋಮಿ ಭಾಭಾ ರಾಜ್ಯ ವಿಶ್ವವಿದ್ಯಾನಿಲಯ ಮುಂಬಯಿಯ ಹಳೆಯ ಮತ್ತು ಪ್ರತಿಷ್ಠಿತ ಕಾಲೇಜುಗಳನ್ನು ಒಳಗೊಂಡಿದೆ. ಈ ಕಾಲೇಜುಗಳು ಈಗಾಗಲೇ ಗುಣಮಟ್ಟಕ್ಕೆ ಪ್ರಸಿದ್ಧವಾಗಿವೆ. ಆದ್ದರಿಂದ ಗುಂಪು ವಿಶ್ವವಿದ್ಯಾನಿಲಯವಾಗಿ ಕೆಲಸ ಮಾಡುವಾಗ ಡಾ| ಹೋಮಿ ಭಾಭಾ ರಾಜ್ಯ ವಿಶ್ವವಿದ್ಯಾನಿಲಯವು ಶ್ರೇಷ್ಠತೆಗಾಗಿ ಶ್ರಮಿಸಬೇಕು ಮತ್ತು ಶ್ರೇಷ್ಠತೆಯ ಕೇಂದ್ರವಾಗಿ ಖ್ಯಾತಿಯನ್ನು ಗಳಿಸಬೇಕು ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹೇಳಿದರು.
ಜೂ. 22ರಂದು ರಾಜಭವನದಲ್ಲಿ ಎಲ್ಫಿನ್‌ಸ್ಟೋನ್ ಕಾಲೇಜು, ಸಿಡೆನ್‌ಹ್ಯಾಮ್ ಕಾಲೇಜು ಮತ್ತು ಮಹಾರಾಷ್ಟ್ರ ಮಾಧ್ಯಮಿಕ ತರಬೇತಿ ಕಾಲೇಜುಗಳ ಸಹಯೋಗದಲ್ಲಿ ನಡೆದ ವಿಜ್ಞಾನ ಸಂಸ್ಥೆಯ ಆಶ್ರಯದಲ್ಲಿ ಸ್ಥಾಪಿಸಲಾದ ಡಾ| ಹೋಮಿ ಭಾಭಾ ರಾಜ್ಯ ವಿಶ್ವವಿದ್ಯಾನಿಲಯದ ಜನರಲ್ ಕೌನ್ಸಿಲ್‌ನ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, 2019ರಲ್ಲಿ ಸ್ಥಾಪನೆಯಾದ ಸಮುದಾಯ ವಿಶ್ವವಿದ್ಯಾಲಯವು ಅನೇಕ ಸಮಸ್ಯೆಗಳನ್ನು ಹೊಂದಿದೆ. ಆದರೆ ಈ ಗುಂಪು ಖಂಡಿತವಾಗಿಯೂ ವಿಶ್ವವಿದ್ಯಾನಿಲಯಕ್ಕೆ ಸಕಾರಾತ್ಮಕ ರೀತಿಯಲ್ಲಿ ಸಹಾಯ ಮಾಡುತ್ತದೆ ಎಂದು ಆಶಿಸಿದರು.
ಪರಮಾಣು ಇಂಧನ ಆಯೋಗದ ಮಾಜಿ ಅಧ್ಯಕ್ಷರು ಮತ್ತು ಹೋಮಿ ಭಾಭಾ ರಾಜ್ಯ ವಿವಿ ಸದಸ್ಯ ಡಾ| ಅನಿಲ್ ಕಾಕೋಡ್ಕರ್ ಮಾತನಾಡಿ, ಡಾ| ಹೋಮಿ ಭಾಭಾ ರಾಜ್ಯ ವಿಶ್ವವಿದ್ಯಾನಿಲಯವು ಶ್ರೇಷ್ಠತೆಗೆ ಹೊಸ ಮಾರ್ಗವನ್ನು ಕಂಡುಕೊಳ್ಳಬೇಕು. ವಿವಿ ನೀಡುವ ಪದವಿಪೂರ್ವ, ಸ್ನಾತಕೋತ್ತರ, ಶಿಕ್ಷಕರ ತರಬೇತಿ, ಸಂಶೋಧನ ಕೋಸ್‌ಗಳು ಪರಸ್ಪರ ಪೂರಕವಾಗಿವೆ ಮತ್ತು ಸಮಾಜ, ಕೈಗಾರಿಕೆ ಮತ್ತು ಉನ್ನತ ಶಿಕ್ಷಣವನ್ನು ಒಟ್ಟುಗೂಡಿಸಿ ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ಈಡೇರಿಸಬೇಕು ಎಂದರು.
ಸಮೂಹ ವಿವಿ ಉಸ್ತುವಾರಿ ರಿಜಿಸ್ಟ್ರಾರ್ ಅಪರ್ಣಾ ಸರಫ್ ಅವರು ವಿವಿ ಪ್ರಾರಂಭಿಸಲಿರುವ ಹೊಸ ಸ್ನಾತಕೋತ್ತರ ಕೋರ್ಸ್‌ಗಳು, ವಿವಿಧ ವಿವಿ ಗಳೊಂದಿಗೆ ಸಹಕಾರ ಒಪ್ಪಂದಗಳು, ವಿವಿಯಲ್ಲಿ ಖಾಲಿ ಹುದ್ದೆಗಳು, ಭರ್ತಿ ಮಾಡಬೇಕಾದ ಹುದ್ದೆಗಳು, ವಿವಿಯ ಧನಸಹಾಯದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ವಿವಿ ಉಸ್ತುವಾರಿ ಉಪಕುಲಪತಿ ಡಾ| ಸ್ವತಿ ವಾವಲ…, ವಿಜ್ಞಾನ ಸಂಸ್ಥೆಯ ಡೀನ್ ಡಾ| ಜಯರಾಮ್ ಖೋಬ್ರಗಡೆ, ಕುಲಪತಿ ಅವಿನಾಶ್ ದಲಾಲ್ ಉಪಸ್ಥಿತರಿದ್ದರು.
ವಾಣಿಜ್ಯ ಶಾಖೆಯ ಡೀನ್ ಡಾ| ಮಾಧುರಿ ಕಾಗಲ್ಕರ್, ರಾಜ್ಯ ಸರಕಾರದ ಪ್ರತಿನಿಧಿ ಯುವರಾಜ್ ಮಾಲೆ^, ಕೈಗಾರಿಕಾ ಪ್ರತಿನಿಧಿ ಡಾ| ರತನ್ ಹಜಾರೆ, ಕೈಗಾರಿಕಾ ಪ್ರತಿನಿಧಿ ಡಾ| ರಾಜೀವ್ ಲಾಥಿಯಾ, ವಿಜ್ಞಾನಿ ಡಾ| ಸುನಿತ್ ರಾಣೆ, ರಿಜಿಸ್ಟ್ರಾರ್ ಉಸ್ತುವಾರಿ ಅಪರ್ಣಾ ಸಾರಾಫ್ ಭಾಘವಹಿಸಿದ್ದರು.