ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಅಖಾಡ ಪ್ರವೇಶಿಸಿರುವ ನಿಖಿಲ್‌ಕುಮಾರಸ್ವಾಮಿಗೆ ಅಮ್ಮ ಅನಿತಾ ಕುಮಾರಸ್ವಾಮಿ ಹೆಗಲಾಗಿ ನಿಂತಿದ್ದಾರೆ.
ಶನಿವಾರ ಕಾಂಗ್ರೆಸ್‌ನ ಹಿರಿಯ ನಾಯಕರಾದ ಜಿ.ಮಾದೇಗೌಡ, ಎಂ.ಎಸ್.ಆತ್ಮಾನಂದ, ಎಚ್.ಡಿ.ಚೌಡಯ್ಯ, ಎಂ.ಡಿ.ರಮೇಶ್‌ರಾಜು ಅವರ ನಿವಾಸಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ಜೆಡಿಎಸ್ ನಾಯಕರೊಟ್ಟಿಗೆ ತೆರಳಿ ಬೆಂಬಲ ಕೋರಿದರು. ಹಿರಿಯ ನಾಯಕರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ನಿಖಿಲ್, ತಮ್ಮನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.
ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಜಿ.ಮಾದೇಗೌಡ, ಮೈತ್ರಿಕೂಟದ ಅಭ್ಯರ್ಥಿಯಾಗಿರೋ ನಿಖಿಲ್‌ಗೆ ಆಶೀರ್ವಾದ ಮಾಡಿದ್ದೇನೆ. ಸುಮಲತಾ ಅವರು ಬಂದು ಬೆಂಬಲ ಕೇಳಿದ್ದರು. ಆಗೋಲ್ಲ ಎಂದು ಹೇಳಿ ಕಳುಹಿಸಿದ್ದೆ. ಈಗ ನಿಖಿಲ್ ಬಂದಿದ್ದಾರೆ. ಅವರಿಗೂ ಆಗೋಲ್ಲ ಅಂತಿದ್ದೆ. ಆದರೆ, ಅವರು ಮೈತ್ರಿ ಪಕ್ಷದ ಅಭ್ಯರ್ಥಿ ಎಂದಿದ್ದಾರೆ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಮಾದೇಗೌಡರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ಮೈತ್ರಿ ಅಭ್ಯರ್ಥಿಯಾಗಿ ನನ್ನನ್ನು ಘೋಷಣೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಭೇಟಿ ಮಾಡಿದ್ದೇನೆ. ಮಾದೇಗೌಡರನ್ನು ನನ್ನ ತಾತನ ಸ್ಥಾನದಲ್ಲಿ ನೋಡುತ್ತಿದ್ದಾರೆ. ಭೇಟಿ ವೇಳೆ ಅವರ ಸಾಕಷ್ಟು ರಾಜಕೀಯ ಅನುಭವಗಳನ್ನು ಹಂಚಿಕೊಂಡು ಆಶೀರ್ವದಿಸಿದ್ದಾರೆ. ಮುಂದೆಯೂ ಅವರ ಜೊತೆ ಬಂದು ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ಸಂಸದ ಎಲ್.ಆರ್.ಶಿವರಾಮೇಗೌಡ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಯುವ ಘಟಕದ ಅಧ್ಯಕ್ಷ ಬೇಲೂರು ಶಶಿಧರ್ ಇದ್ದರು. ಆನಂತರ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ನಿವಾಸಕ್ಕೆ ತೆರಳಿ ಬೆಂಬಲ ಕೋರಿದರು.
ಅಲ್ಲಿಂದ ಪಿಇಟಿ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಕ್ಷ ಎಚ್.ಡಿ.ಚೌಡಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ರಮೇಶ್‌ರಾಜು, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್ ಮನೆಗೂ ತೆರಳಿ ಮಾತುಕತೆ ನಡೆಸಿ ಬೆಂಬಲ ಕೋರಿದರು.
ಜುಟ್ಟು ಹಿಡಿಯಬೇಡಿ: ಮೊದಲಿಗೆ ಮಾದೇಗೌಡರ ನಿವಾಸಕ್ಕೆ ತೆರಳಿದ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಅವರ ಕಾಲಿಗೆ ನಮಸ್ಕರಿಸಿದರು. ಈ ವೇಳೆ ನಿಖಿಲ್‌ಗೆ ಗುಡ್‌ಲಕ್ ಎಂದು ಹಸ್ತಲಾಘವ ನೀಡಿದರು. ನಿನಗೆ ಗುಡ್‌ಲಕ್ ಆಗಬೇಕೆಂದರೆ ಎಲ್ಲರನ್ನೂ ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರಲ್ಲದೆ, ಈಗ ಕಾಲಿಗೆ ಬಿದ್ದು ಆಮೇಲೆ ಜುಟ್ಟು ಹಿಡಿಯಬೇಡಿ ಎಂದು ಹಾಸ್ಯಧಾಟಿಯಲ್ಲಿ ಚಟಾಕಿ ಹಾರಿಸಿದರು.