Advertisement

ಜೆಡಿಎಸ್‌ ಕಾರ್ಯಕರ್ತರೊಂದಿಗೆ ಅನಿತಾ ಕುಮಾರಸ್ವಾಮಿ ಚರ್ಚೆ

11:34 AM Oct 21, 2018 | Team Udayavani |

ರಾಮನಗರ: ನ.3ರಂದು ನಡೆಯುವ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನಿತಾ ಕುಮಾರಸ್ವಾಮಿ ಶನಿವಾರ ನಗರದ ವಾರ್ಡುವಾರು ಪ್ರಮುಖ ಕಾರ್ಯಕರ್ತರುಗಳೊಡನೆ ಸಮಾಲೋಚನೆ ನಡೆಸಿದರು. ನಗರವ್ಯಾಪ್ತಿಯಲ್ಲಿ ತಮಗೆ ಗರೀಷ್ಠ ಮತಗಳು ಲಭ್ಯವಾಗುವಂತೆ ಮತದಾರರ ಮನವೊಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Advertisement

ನಗರದ ಹೊರವಲಯದಲ್ಲಿರುವ ಹಿಲ್‌ ವ್ಯೂ ರೆಸಾರ್ಟ್‌ನಲ್ಲಿ ನಡೆದ  ಸಮಾಲೋಚನಾ ಸಭೆಯಲ್ಲಿ ಅವರು ನಗರದ 31 ವಾರ್ಡುಗಳ ಪ್ರಮುಖ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷಕ್ಕೆ ಲಭಿಸಿದ ಮತಗಳೆಷ್ಟು, ಎದುರಿಸದ ಸಮಸ್ಯೆಗಳು ಹಾಲಿ ಇರುವ ಸಮಸ್ಯೆಗಳು ಹೀಗೆ ವಿವಿಧ ವಿಚಾರಗಳಲಿ ಮಾಹಿತಿ ಸಂಗ್ರಹಿಸಿದರು. 

ಸಾರ್ವತ್ರಿಕ ಚುನಾವಣೆಯಲ್ಲಿ ನಗರವ್ಯಾಪ್ತಿಯಲ್ಲಿ  ಪಕ್ಷದ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕಡಿಮೆ ಮತಗಳು ಲಭ್ಯವಾದ ಹಿನ್ನೆಲೆಯಲ್ಲಿ ಅವರು ವಿಶೇಷ ಕಾಳಜಿವಹಿಸಿದ್ದರು ಎಂದು ಗೊತ್ತಾಗಿದೆ. ನಗರ ವ್ಯಾಪ್ತಿಯಲ್ಲಿ ಈ ಬಾರಿ ತಮಗೆ ಹೆಚ್ಚು ಮತಗಳು ಲಭ್ಯವಾಗಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ಕೊಟ್ಟಿರುವುದಾಗಿ  ಪಕ್ಷದ ಮೂಲಗಳು ತಿಳಿಸಿವೆ. 

ಕಾಂಗ್ರೆಸ್‌ನವರೊಂದಿಗೆ ಜೊತೆಗೂಡಿ ಪ್ರಚಾರ ಮಾಡಲು ಸಲಹೆ: ಸಮಾಲೋಚನೆ ವೇಳೆ ಕೆಲವು ವಾರ್ಡುಗಳ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ ಎಂದು ಗೊತ್ತಾಗಿದೆ. ಕೆಲವರನ್ನು ಬದಲಾಯಿಸುವಂತೆಯೂ  ಮನವಿ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಸಂಪನ್ಮೂಲ ವಿಚಾರದಲ್ಲಿ ಬಹಳಷ್ಟು ಕಾರ್ಯಕರ್ತರು ತಮ್ಮ ನೋವು ತೋಡಿಕೊಂಡಿದ್ದಾರೆ.

ಇವೆಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಭರವಸೆ ಕೊಟ್ಟ ಅನಿತಾ ಕುಮಾರಸ್ವಾಮಿ ಪ್ರಚಾರದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರನ್ನು ಜೊತೆಗೆ ಕರೆದುಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ. ತಾವು ಮೈತ್ರಿ ಅಭ್ಯರ್ಥಿಯಾಗಿದ್ದು, ಪ್ರಚಾರದಲ್ಲಿ ಕಾಂಗ್ರೆಸ್‌ ಮುಖಂಡರು ಸಹ ಭಾಗವಹಿಸಲಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ  ಇದ್ದ ಗೊಂದಲಗಳು ನಿವಾರಣೆ ಆಗಿವೆ.  ಸೋಮವಾರ ಅಧಿಕೃತವಾಗಿ ಪ್ರಚಾರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. 

Advertisement

ಕಾರ್ಯಕರ್ತರೊಡನೆ ನಡೆದ ಸಭೆಯ ವೇಳೆ ರಾಜ್ಯ ಜೆಡಿಎಸ್‌ನ ಬೂತ್‌ ಸಮಿತಿ ಅಧ್ಯಕ್ಷ ಸುರೇಶ್‌ ಬಾಬು, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌.ಎಂ.ಕೃಷ್ಣಮೂರ್ತಿ, ರಾಜ್ಯ ವಕ್ತಾರ ಬಿ.ಉಮೇಶ್‌, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ  ಅಶೋಕ್‌ ಕುಮಾರ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ರಾಜಶೇಖರ್‌, ಜಿಲ್ಲಾ ಯುವ ಜೆಡಿಎಸ್‌ ಅಧ್ಯಕ್ಷ  ಎಚ್‌.ಸಿ.ರಾಜು, ನಗರಸಭಾ ಸದಸ್ಯ ಪರ್ವಿಜ್‌ ಪಾಷ, ಮಾಜಿ ಅಧ್ಯಕ್ಷ ಸಾಬಾನ್‌ ಸಾಬ್‌, ಪ್ರಮುಖರಾದ ಭಾಸ್ಕರ್‌ ಮುಂತಾದವರು ಹಾಜರಿದ್ದರು. 

ಎಚ್‌.ಡಿ.ಕೆ. ಮತ್ತು ಡಿ.ಕೆ.ಶಿ ಜಂಟಿ ಪ್ರಚಾರ: ಕಾರ್ಯಕರ್ತರ ಸಮಾಲೋಚನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ, ಅಕ್ಟೋಬರ್‌ 22ರಿಂದ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸುವುದಾಗಿ, ಸಿಎಂ ಎಚ್‌.ಡಿ.ಕುಮಾರಸ್ವಾಮಿ. ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌   ಸಹ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದರು. 

ಸಾರ್ವತ್ರಿಕ ಚುನಾವಣೆಯಲ್ಲಿ  ನಗರವ್ಯಾಪ್ತಿಯಲ್ಲಿ  ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸ್ಪಲ್ಪ ಮಟ್ಟಿಗೆ ಮತಗಳಿಕೆಯಲ್ಲಿ ಹಿನ್ನಡೆಯಾಗಿತ್ತು. ಈ ಬಾರಿ ಚುನಾವಣೆ ವಿಭಿನ್ನ ಸನ್ನಿವೇಶದಲ್ಲಿ ನಡೆಯುತ್ತಿರುವುದರಿಂದ ಈ ಬಾರಿ ಅಧಿಕ ಮತಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಎರಡು ದಶಕಗಳಿಂದ ತಮ್ಮ ಕುಟುಂಬಕ್ಕೂ ರಾಮನಗರದ ಮತದಾರರಿಗೂ ಅವಿನಾಭಾವ ಸಂಬಂಧವಿದೆ.

ಎಚ್‌.ಡಿ.ಕುಮಾರಸ್ವಾಮಿ ಅವರನ್ನು ತಮ್ಮ ಮನೆ ಮಗನಂತೆ ಇಲ್ಲಿನ ಜನ ಕಾಣುತ್ತಿದ್ದಾರೆ.  ಕ್ಷೇತ್ರದ ಮತದಾರರು ತಮ್ಮನ್ನು ಮನೆ ಮಗಳಂತೆ ಸ್ವೀಕರಿಸುವ ವಿಶ್ವಾಸ ವ್ಯಕ್ತಪಡಿಸಿದರು. ರಾಜಕೀಯ ಪಕ್ಷ ಎಂದ ಮೇಲೆ ಸಣ್ಣಪುಟ್ಟ ಸಮಸ್ಯೆಗಳು ಸಹಜ, ಅದನ್ನೇ ದೊಡ್ಡದು ಮಾಡಬೇಡಿ ಎಂದು ಮಾಧ್ಯಮಗಳಿಗೆ ಸಲಹೆ ನೀಡಿದರು. ಭಾನುವಾರ ನಡೆಯುವ ಕಾಂಗ್ರೆಸ್‌ ಕಾರ್ಯಕರ್ತರೊಂದಿಗಿನ ಸಭೆಗೂ ಮಾಧ್ಯಮದವರಿಗೆ ಪ್ರವೇಶವಿಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next