Advertisement

ಕುಡಿವ ನೀರಿಲ್ಲದೇ ಪ್ರಾಣಿಗಳ ಅರಣ್ಯರೋದನೆ!

10:15 AM Jun 03, 2019 | Team Udayavani |

ಪಾವಗಡ: ತಾಲೂಕಿನ ಕೆರೆ ಕುಂಟೆಗಳು ಭತ್ತಿ ಹೋಗಿವೆ. ಬಾವಿ, ಕೊಳವೆ ಬಾವಿಗಳಲ್ಲಿ ನೀರಿಲ್ಲ. ತಾಲೂಕಿನಲ್ಲಿ ಭೀಕರ ಬರದಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಮನುಷ್ಯ ಎಲ್ಲಾದರು ನೀರನ್ನು ಕುಡಿಯುತ್ತಾರೆ. ಅದರೆ, ಮೂಕ ಪ್ರಾಣಿಗಳು ಕುಡಿಯಲು ನೀರಿಲ್ಲದೇ ಪರಿ ತಪಿಸುತ್ತಿದ್ದು, ಪ್ರಾಣಿಗಳ ಅರಣ್ಯರೋದನೆ ಕೇಳುವವರೇ ಇಲ್ಲದಂತಾಗಿದೆ.

Advertisement

ಕುರಿ, ಮೇಕೆ, ದನಕರುಗಳು ಬರಗಾಲಕ್ಕೆ ಸಿಕ್ಕಿ ನೀರು, ಮೇವು ಇಲ್ಲದೇ ಬಡಕಲಾಗುತ್ತಿವೆ. ಬಿರು ಬಿಸಿಲಿನಲ್ಲಿ ಗೋವುಗಳು ನೆಲ ದಲ್ಲಿರುವ ಹುಲ್ಲನ್ನು ನಿತ್ಯ ಹುಡಿಕಿ ತಿನ್ನವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ 10 ಗಂಟೆ ದಾಟದರೇ ಭಯಂಕರ ಬಿಸಿಲಿದ್ದು, ಹೊರಗಡೇ ಹೋಗಲು ಸಾಧ್ಯವೇ ಇಲ್ಲ ದಂತಾಗಿದೆ. ಮೂಕ ಪ್ರಾಣಿಗಳು ಹೊಲದಲ್ಲಿರುವ ಮರಗಳ ನೆರಳಿನಲ್ಲಿ ವಿಶ್ರಾಂತಿ ಪಡೆದು, ಸಂಜೆ ಮತ್ತೆ ಮನೆಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ.

ರೈತರು, ಕೂಲಿ ಕಾರ್ಮಿಕರು ವಲಸೆ: ಜಾನುವಾರು ಗಳಿಗೆ ಮೇವು ಕೇಂದ್ರ ಮತ್ತು ಗೋ ಶಾಲೆಗಳನ್ನು ತೆರೆಯಬೇಕಾಗಿದೆ. ತೀವ್ರ ಬರದ ಹಿನ್ನಲೆಯಲ್ಲಿ ತಾಲೂಕಿನ ರೈತರು ಮತ್ತು ಕೂಲಿ ಕಾರ್ಮಿಕರು ಸುಮಾರು 50 ಸಾವಿರಕ್ಕೂ ಹೆಚ್ಚು ಜನ ವಲಸೆ ಹೋಗಿದ್ದಾರೆ. ಇದಲ್ಲದೆ, ದನಕರಗಳಿಗೆ ಹಾಗೂ ಕುರಿ, ಮೇಕೆಗಳಿಗೆ ಮೇವಿಲ್ಲದೇ ಇಲ್ಲಿನ ರೈತರು ಸಂತೆಯಲ್ಲಿ ಮಾರಾಟ ಮಾಡಲು ಸಿದ್ಧರಾಗಿದ್ದಾರೆ.

ತಾಲೂಕಿನಲ್ಲಿ ಬರದಿಂದ ದನಕರುಗಳಿಗೆ ಮೇವು, ಕುಡಿಯುವ ನೀರು ಕೊರತೆಯಿದ್ದು, ಗ್ರಾಮ ಪಂಚಾಯ್ತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಹಳ್ಳಿ ಗಳಲ್ಲಿ ತೊಟ್ಟಿಗಳಿಗೆ ನೀರು ಬಿಡಬೇಕು. ಈ ಮೂಲಕ ಗೋವು ಮತ್ತು ಎಮ್ಮೆ, ಕುರಿಗಳಿಗೆ ನೀರುಣಿಸಲು ಮುಂದಾಗಬೇಕಾಗಿದೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಮಳೆ ಬರುವ ಕೊನೆಯಲ್ಲಿ ತರಾತುರಿಯಾಗಿ ಮೇವು ವಿತರಣೆ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ರೈತರು ಅರೋಪಿಸಿದ್ದಾರೆ.

ಬರ ಪೀಡಿತ ಪ್ರದೇಶವೆಂದು ಘೋಷಣೆ ವ್ಯರ್ಥ: ಬರಪೀಡಿತ ಪ್ರದೇಶ ಎಂದು ಘೋಷಣೆ ಕೇವಲ ಹೆಸರಿಗಷ್ಟೆಯಾಗಿದೆ. ರಾಜ್ಯದಲ್ಲಿ ಪಾವಗಡ ತಾಲೂಕು ಅತಿ ಹಿಂದುಳಿದ ಬರ ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೆ, ಇಲ್ಲಿಯ ವರಿಗೂ ರೈತರಿಗೆ ಯಾವುದೇ ಸೌಲಭ್ಯವನ್ನು ಸರ್ಕಾರ ಕಲ್ಪಿಸಿಲ್ಲ. ಸರ್ಕಾರಿ ಸೌಲಭ್ಯಗಳು ಉಳ್ಳವರ ಪಾಲಾ ಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

Advertisement

ತಾಲೂಕಿನ ಭೂ ವಿಸ್ತಿರ್ಣ 143843.17 ಇದ್ದು, ನಿವ್ವಳ ಸಾಗುವಳಿ 106838.51, ನೀರಾವರಿ ಸಾಗು ವಳಿ ವಿಸ್ತಿರ್ಣ 14049.5, ಮಳೆ ಅಶ್ರಿತ ಭೂಮಿ 92789 ಹೊಂದಿದೆ. ಪಾವಗಡ ತಾಲೂಕಿನಲ್ಲಿ ಸುಮಾರು ಹತ್ತು ವರ್ಷಗಳಿಂದ ಮಳೆ ಇಲ್ಲದೆ, ಬೆಳೆ ಅಗದೆ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ಜೀವನ ಮಾಡಲು ಸಹ ಸಾಮರ್ಥ್ಯ ಇಲ್ಲದೇ ಕೈಕಟ್ಟಿ ಕುಳಿತ್ತಿದ್ದಾರೆ. ಕೆಲ ರೈತರು ಸಾಲ ಮಾಡಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿ: ಬರದಿಂದ ತತ್ತರಿಸಿರುವ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಬೇಕಾಗಿದೆ. ಬರದ ಅನುದಾನದಡಿಯಲ್ಲಿ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಅನುಕೂಲ ವಾಗುವ ಯೋಜನೆಗಳನ್ನು ಜಾರಿಗೆ ತರಬೇಕು. ರೈತರ ಜಮೀನುಗಳಲ್ಲಿ ಕೊಳವೆ ಬಾವಿಗಳು ಒಣಗಿದ್ದರೆ, ಅಂತಹ ರೈತರಿಗೆ ಸರ್ಕಾರ ವೆಚ್ಚದಲ್ಲಿ ಕೊಳವೆ ಬಾವಿ ಕೊರೆಸಿ, ಅವರ ಜೀವನಮಟ್ಟ ಸುಧಾರಿಸಬೇಕು. ಕೂಲಿ ಕಾರ್ಮಿಕರು ಬೇರೆ ಕಡೆ ವಲಸೆ ಹೋಗದಂತೆ ಕೂಲಿ ಕಾರ್ಮಿಕರಿಂದ ಕೆಲಸ ಮಾಡುಸುವಂತಹ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ. ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಕೆರೆ- ಕುಂಟೆಗಳಲ್ಲಿ ಹೂಳು ತೆಗೆಯುವಂತಹ ಕೆಲಸ ಅನುಷ್ಠಾನಕ್ಕೆ ತರಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ನೀಡುತ್ತೇವೆ ಎಂದರೆ ಸಾಲದು, ಈ ಯೋಜನೆಯಲ್ಲಿ ವಾರಕ್ಕೊಮ್ಮೆ ಕೂಲಿ ಸಿಗುವುದಿಲ್ಲ. ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡಲು ಕೂಲಿ ಕಾರ್ಮಿಕರು ಹಿಂಜರಿಯುತ್ತಿದ್ದಾರೆ. ವಾರಕ್ಕೊಮ್ಮೆ ಕೂಲಿ ನೀಡುವ ಯೋಜನೆ ತ್ವರಿತವಾಗಿ ಜಾರಿಗೆ ತಂದರೆ ತಾಲೂಕಿನಲ್ಲಿ ಬರವನ್ನು ನಿಬಾಯಿಸಬಹುದಾಗಿದೆ.

ಬರ ನಿವಾರಿಸಲು ಮುಂದಾಗಿ: ಸರ್ಕಾರ ಕೋಟಿ ಗಟ್ಟಲೆ ಕಾಮಗಾರಿಗಳು ಮಂಜೂರು ಮಾಡು ವುದಲ್ಲದೆ, ಬರದ ಬವಣೆ ತಪ್ಪಿಸಲು ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಮತ್ತು ಯುವಕರಿಗೆ ಹುದ್ದೆ ನೀಡುವಂತ ವ್ಯವಸ್ಥೆ ಕಲ್ಪಿಸಬೇಕು. ಬರ ನಿವಾರಿಸಲು, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾ ಗಬೇಕಾಗಿದೆ. ತಾಲೂಕಿನಲ್ಲಿ ಕುಡಿಯುವ ನೀರಿನ ಬವಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲ ಗ್ರಾಮ ಗಳಲ್ಲಿ ಅರ್ಧಕ್ಕೆ ಅರ್ಧ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಅಂತಹ ಗ್ರಾಮಗಳಿಗೆ ಜಿಲ್ಲಾಡಳಿತ ಅದೇಶ ದಂತೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ನೀಡುತ್ತಿದ್ದು, ಕೆಲವು ಗ್ರಾಮಗಳಲ್ಲಿ ರೈತರ ಕೊಳವೆ ಬಾವಿಗಳನ್ನು ಗುತ್ತಿಗೆ ಅಧಾರದ ಮೇಲೆ ಗ್ರಾಮ ಪಂಚಾಯ್ತಿ ಮೂಲಕ ಕುಡಿಯುವ ನೀರಿನ ವ್ಯವಸ್ತೆ ಮಾಡಬೇಕಾಗಿದೆ. ಕೆಲ ರೈತರು ಮಳೆ ಅಭಾವದಿಂದ ಬೇಸಾಯವನ್ನು ಮರೆತು, ಹಾಲು ಮಾರಿ ಜೀವನ ಸಾಗುಸುತ್ತಿದ್ದಾರೆ. ಅದರೆ, ಮೇವು ಮತ್ತು ಕುಡಿಯುವ ನೀರು ಇಲ್ಲದ ಕಾರಣ ಹಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಒಟ್ಟಾರೆ ಕೂಲಿ ಕಾರ್ಮಿಕರು ಹಾಗೂ ರೈತರಿಗೆ ಉದ್ಯೋಗ ಮತ್ತು ಕುಡಿಯುವ ನೀರು ವ್ಯವಸ್ಥೆ, ಮೂಕ ಪ್ರಾಣಿಗಳಿಗೆ ಮೇವು, ಕುಡಿಯುವ ನೀರಿನ ಬಗ್ಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಶ್ರಮಿಸಬೇಕಾಗಿದೆ.

● ಆರ್‌.ಸಂತೋಷ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next