Advertisement

ಜಿಲ್ಲಾಸ್ಪತ್ರೆಗೆ ಮನುಷ್ಯರೊಂದಿಗೆ ಪ್ರಾಣಿಗಳೂ ಪ್ರವೇಶ!

01:35 AM Jun 24, 2019 | sudhir |

ಉಡುಪಿ: ನಗರದ ಅಜ್ಜರಕಾಡುವಿನಲ್ಲಿರುವ ಜಿಲ್ಲಾಸ್ಪತ್ರೆಯ ಒಳ ಜಗುಲಿಗೆ ನಾಯಿಗಳು ಲಗ್ಗೆ ಇಡುತ್ತಿವೆ. ಹೊರರೋಗಿಗಳ ಸಂದರ್ಶನ ಕೊಠಡಿ ಮುಂದೆಯೇ ನಾಯಿಗಳು ಮಲಗುತ್ತವೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಹೆದರಿಕೊಳ್ಳುವ ಸ್ಥಿತಿ ಇದೆ.

Advertisement

ಆಸ್ಪತ್ರೆಗೆ ಔಷಧಿಗೆಂದು ಬಂದವರೇ ಕೆಲವೊಂದು ಮೂಲೆಯಲ್ಲಿ ಗುಟ್ಕಾ ಅಗಿದು ಉಗುಳಿರುವುದು ಕಂಡುಬರುತ್ತಿದೆ. ಇಂತಹ ಕಲುಷಿತ ವಾತಾವರಣದ ನಡುವೆಯೂ ರೋಗಿಗಳು ಚಿಕಿತ್ಸೆ ಪಡೆಯಬೇಕಾಗಿದೆ.

ಸುಮಾರು 10 ಎಕರೆ ವಿಸ್ತೀರ್ಣದಲ್ಲಿರುವ ಆಸ್ಪತ್ರೆಯನ್ನು 1997ರಲ್ಲಿ ಜಿಲ್ಲಾ ಆಸ್ಪತ್ರೆಯನ್ನಾಗಿ ಸರಕಾರ ಮೇಲ್ದರ್ಜೆಗೇರಿಸಿದೆ. ಆದರೆ ಇನ್ನೂ ಮೂಲಭೂತ ಸೌಕರ್ಯ ದೊರಕಿಲ್ಲ. 124 ಹಾಸಿಗೆಯ ಜಿಲ್ಲಾಸ್ಪತ್ರೆಯಲ್ಲಿ 30 ನರ್ಸ್‌ ಹಾಗೂ 22 ವೈದ್ಯಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.

ಜಿಲ್ಲಾಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಬ್ರಹ್ಮಾವರ, ಕೋಟೇಶ್ವರ, ಕುಂದಾಪುರ, ಹೆಬ್ರಿ, ಕಾಪು ತಾಲೂಕಿನಿಂದ ರೋಗಿಗಳು ಬರುತ್ತಾರೆ.

ಪ್ರತಿದಿನ 500 ರಿಂದ 600 ಹೊರರೋಗಿಗಳು ಚಿಕಿತ್ಸೆ ಪಡೆಯಲು ಆಗಮಿಸುತ್ತಾರೆ. ಒಳರೋಗಿಗಳಾಗಿ 160 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿಗೆ ಖಾಸಗಿ ವೈದ್ಯರ ಮುಷ್ಕರ ನಡೆದಾಗ ರೋಗಿಗಳ ಸಂಖ್ಯೆ ಜಾಸ್ತಿಯಾಗಿತ್ತು.

ಸೋಂಕು ಸಾಧ್ಯತೆ

ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಾರೆ. ಈ ಸಂದರ್ಭ ಆಸ್ಪತ್ರೆ ಒಳಗೆ ನಾಯಿಗಳು ತಿರುಗುತ್ತಿರುವುದರಿಂದ ರೋಗಿಗಳಿಗೆ ಸೋಂಕು ಹಾಗೂ ಕಡಿತಕ್ಕೆ ಒಳಗಾಗುವ ಸಾಧ್ಯತೆಯಿದೆ. -ರವಿರಾಜ್‌, ಉಡುಪಿ ನಿವಾಸಿ.
ಕ್ರಮ ಕೈಗೊಳ್ಳಲಾಗುವುದು

ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಭದ್ರತೆಯನ್ನು ಒದಗಿಸಲಾಗಿದೆ. ಸಾರ್ವಜನಿಕರು ಆಸ್ಪತ್ರೆಯಿಂದ ತೆರಳುವಾಗ ಬಾಗಿಲು ಮುಚ್ಚದೆ ತೆರಳುವುದರಿಂದ ಕೆಲವೊಮ್ಮೆ ನಾಯಿಗಳು ಆಸ್ಪತ್ರೆ ಒಳಗೆ ಪ್ರವೇಶಿಸುತ್ತದೆ. ಈ ಬಗ್ಗೆ ಮುಂದೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
-ಡಾ| ಮಧುಸೂದನ್‌ ನಾಯಕ್‌, ಜಿಲ್ಲಾ ಸರ್ಜನ್‌ ಉಡುಪಿ.
Advertisement
Advertisement

Udayavani is now on Telegram. Click here to join our channel and stay updated with the latest news.

Next