Advertisement

ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಸಲ್ಲದು: ಸಾಮೀಜಿ

06:32 PM Feb 08, 2022 | Team Udayavani |

ರಾಣಿಬೆನ್ನೂರ: ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಸಲ್ಲದು. ಯಾವ ದೇವರು ಪ್ರಾಣಿ ಬಲಿ ಕೇಳುವುದಿಲ್ಲ ಎಂದು ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

Advertisement

ಹಿರೇಬಿದರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೀರೇಶ್ವರ ಸದ್ಭಕ್ತ ಮಂಡಳಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೀರಲಿಂಗೇಶ್ವರ ನೂತನ ಒಳಗುಡಿ ದೇವಸ್ಥಾನ ಉದ್ಘಾಟನೆ, ಗದ್ದುಗೆಗೊಳಿಸುವ ಕಾರ್ಯಕ್ರಮ, ಸಾಮೂಹಿಕ ವಿವಾಹ ಮತ್ತು ಜನಜಾಗೃತಿ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸಾಲ ತಂದು ವರ್ಷಕ್ಕೆ ಎರಡು ಬಾರಿ ಪ್ರಾಣಿ ಬಲಿ ಮೂಲಕ ಹಬ್ಬ ಆಚರಿಸಿದರೆ ಮಾತ್ರ ದೇವರು ರಕ್ಷಿಸುತ್ತಾನೆ ಎಂಬುದು ತಪ್ಪು ಕಲ್ಪನೆ. ಇದರಿಂದ ಜೀವನ ಬದಲಾಗುವುದಿಲ್ಲ. ದೇವರ ಪ್ರೀತಿಗೆ ಪಾತ್ರರಾಗಲು ಭಕ್ತಿಯಿಂದ ಬಿಲ್ವಪತ್ರೆ ಅರ್ಪಿಸಿದರೆ ಸಾಕು. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಕೊಡಿ ಎಂದರು.

ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಣ್ಣ ರಂಧ್ರವೊಂದು ದೈತ್ಯ ಹಡಗನ್ನೇ ಮುಳುಗಿಸಿದಂತೆ, ಸಣ್ಣ ಅನುಮಾನ ಎಂಬುದು ಸುಂದರ ಸಂಸಾರನ್ನು ಹಾಳು ಮಾಡಬಲ್ಲದು. ಜೀವನದ ಸುಂದರ ಬದುಕಿಗೆ ನಂಬಿಕೆಯೇ ಮೂಲಾಧಾರ ಅದನ್ನರಿತು ಬದುಕು ಸಾಗಿಸಬೇಕು ಎಂದು ನುಡಿದರು.

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ಮಠ, ಮಂದಿರ, ಗುರುಪೀಠಗಳು ಸೂಜಿಯಂತೆ ಸಮಾಜದಲ್ಲಿ ಒಡೆದ ಮನಗಳನ್ನು ಜೋಡಿಸುವ ಮೂಲಕ ಸಮಾಜದ ವಿವಿಧ ವರ್ಗಗಳ ಬೆಸುಗೆಯಾಗಿ ಕೆಲಸ ಮಾಡುತ್ತಿವೆ ಎಂದರು.

Advertisement

ಶಾಸಕ ಅರುಣಕುಮಾರ ಪೂಜಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಸುಧಾರಣೆ ಮತ್ತು ಪರಿವರ್ತನೆಗೆ ಧರ್ಮ ಗುರುಗಳ ಅಗತ್ಯವಿದೆ. ಗುರುವಿನ ಮಾರ್ಗದರ್ಶನದಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದು ಹೇಳಿದರು. ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ನರಸೀಪುರ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ,
ಮಡಿವಾಳ ಮಾಚಿದೇವ ಗುರುಪೀಠದ ಬಸವಮಾಚಿದೇವ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಬಸವರಾಜ ಶಿವಣ್ಣನವರ, ಯುವ ಕಾಂಗ್ರೆಸ್‌ ಮುಖಂಡ ಪ್ರಕಾಶ ಕೋಳಿವಾಡ, ವಿಧಾನ ಪರಿಷತ್‌ ಸದಸ್ಯ ಆರ್‌. ಶಂಕರ್‌ ಮಾತನಾಡಿದರು.

ಹಿರೇಬಿದರಿ ಬೀರಲಿಂಗೇಶ್ವರ ಸ್ವಾಮೀಜಿ ಅವರು ಮೆಡ್ಲೆರಿ, ಹುಲಿಕಟ್ಟಿ, ಐರಣಿ, ಕಾಕೊಳ ಬೀರೇಶ್ವರ ದೇವರ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಸಕಲ ಸಂಗೀತ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಗ್ರಾಮದ ಬೀರೇಶ್ವರ ಸದ್ಭಕ್ತ ಮಂಡಳಿ ಯುವಕರಿಂದ ಬೈಕ್‌ ರ್ಯಾಲಿ ಮೂಲಕ ಸರ್ವ ಶರಣರನ್ನು ವೇದಿಕೆಗೆ ಕರೆತರಲಾಯಿತು.

ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 8 ಜೋಡಿ ಹೊಸಜೀವನಕ್ಕೆ ಪಾದಾರ್ಪಣೆ ಮಾಡಿದರು. ಯಕಲಾಸಪುರ ಜನನಿ ಜಾನಪದ ಕಲಾವಿದರು ಸುಮಧುರ ಜನಪದ ಗೀತೆಗಳನ್ನು ಹಾಡಿದರು. ಭಕ್ತರಿಗೆ ಮಾಸ್ಕ್ ಮತ್ತು ಪ್ರಸಾದ ವಿತರಿಸಲಾಯಿತು.

ಜಿಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ವಾಕರಸಾ ಸಂಸ್ಥೆ ನಿರ್ದೇಶಕ ಸಂತೋಷಕುಮಾರ ಪಾಟೀಲ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ನಗರಯೋಜನ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರು, ಎಪಿಎಂಸಿ ಉಪಾಧ್ಯಕ್ಷ ಸುರೇಶಬಿರಾಳ, ನಿರ್ದೇಶಕ ಪರಮೇಶಪ್ಪ ಗೂಳಣ್ಣನವರ, ಬಿ.ಡಿ. ಓಲೇಕಾರ, ಗ್ರಾಪಂ ಅಧ್ಯಕ್ಷೆ ಅನುಸೂಯಾ ಚಿಕ್ಕಬಿದರಿ, ಉಪಾಧ್ಯಕ್ಷ ಕೆಂಚಪ್ಪ ಸಂಗಾನವರ, ಕುರುಬ ಸಂಘದ ಅಧ್ಯಕ್ಷ ಷಣ್ಮುಖಪ್ಪ, ಆನಂದ ಚಳಗೇರಿ, ಮೋಹನ್‌ ಹಂಡೆ, ಕೃಷ್ಣಪ್ಪ ಕಂಬಳಿ, ಮಂಜುನಾಥ ಗೌಡಶಿವಣ್ಣನವರ, ಜಗದೀಶ ಸಂಗಾನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next