Advertisement

ಕಾಲುಬಾಯಿ ಲಸಿಕೆ ಹಾಕಲು ಹಿಂದೇಟು!

02:03 PM Sep 30, 2020 | Suhan S |

ಮಂಡ್ಯ: ಪಶುಪಾಲನಾ ಇಲಾಖೆ ಹಾಗೂ ಮನ್‌ ಮುಲ್‌ ವತಿಯಿಂದ ಅ.2ರಿಂದ ನ.15ರವರೆಗೆ ಜಿಲ್ಲಾದ್ಯಂತ ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳ ಲಾಗಿದೆ. ಆದರೆ, ಕೋವಿಡ್ ಭೀತಿಯಿಂದ ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಶು ವೈದ್ಯರು, ಪರಿವೀಕ್ಷಕರು, ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.

Advertisement

ಈಗಾಗಲೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಗ್ರಾಮೀಣ ಭಾಗದಲ್ಲೂ ಸೋಂಕು ಹೆಚ್ಚುತ್ತಿರುವುದರಿಂದ ಜಾನುವಾರುಗಳಿಗೆ ಲಸಿಕೆ ಹಾಕಿಸಲು ರೈತರು ಬರುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಲಸಿಕೆ ಹಾಕುವ ಕಾರ್ಯಕ್ರಮ ಮುಂದೂಡುವಂತೆ ಪಶು ವೈದ್ಯರು, ಪಶು ಪರಿವೀಕ್ಷಕರು, ಸಿಬ್ಬಂದಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಲಸಿಕೆ ಹಾಕಿಸಲು ರೈತರು ಸಿದ್ಧ: ಕೋವಿಡ್ ಸಂದರ್ಭದಲ್ಲಿ ಹೈನುಗಾರಿಕೆ ನಮ್ಮಕೈಹಿಡಿದಿದೆ. ಹಾಲು ಮಾರಾಟದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಹೈನುಗಾರಿಕೆ ಕಸುಬಾಗಿರುವುದರಿಂದ ಜಾನುವಾರು ಆರೋಗ್ಯವೂ ಮುಖ್ಯವಾಗಿದೆ. ಎಲ್ಲಾ ಜಾನುವಾರಿಗೆ ರೈತರು ಲಸಿಕೆ ಹಾಕಿಸಲಿದ್ದಾರೆಂದು ರೈತರೊಬ್ಬರು ಹೇಳಿದರು.

4,88,437 ಜಾನುವಾರು: ಜಿಲ್ಲೆಯಲ್ಲಿ ಒಟ್ಟು 4,88,837 ಜಾನುವಾರುಗಳಿವೆ. ಇದರಲ್ಲಿ ಹಸು 3,69,986, ಎಮ್ಮೆ 1,09,443, 9408 ಹಂದಿಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಹಾಕುವ ಆಂದೋಲನ ಮಾಡಿಕೊಂಡು ಬಂದಿದ್ದರಿಂದ 2017ರಿಂದ ಜಿಲ್ಲಾದ್ಯಂತ ಯಾವುದೇಕಾಲುಬಾಯಿ ಜ್ವರ ಕಾಣಿಸಿಕೊಂಡಿಲ್ಲ. ಮೊದಲ ಹಂತದಲ್ಲಿ 1702 ಗ್ರಾಮಗಳಲ್ಲಿ ಲಸಿಕೆ ಹಾಕಲಾಗುತ್ತದೆ.

ಕೇಂದ್ರದಿಂದಲೇ ಆಯೋಜನೆ:ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಅಭಿಯಾನಕ್ಕೆ ಕೇಂದ್ರ ಸರ್ಕಾರವೇ ಮುಂದಾಗಿದ್ದು, ಅದಕ್ಕಾಗಿ ಜಿಲ್ಲೆಗೆ ಅಗತ್ಯವಿರುವ ಲಸಿಕೆ, ಸಿರೆಂಜ್‌ ಸರಬರಾಜು ಮಾಡಲಿದೆ. ಪ್ರತಿ 6 ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ಹಾಕಬೇಕಾಗಿತ್ತು. ಆದರೆ, ಕೋವಿಡ್ ಇರುವುದರಿಂದ ಸಾಧ್ಯವಾಗಿರಲಿಲ್ಲ. ಈಗ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಒಂದು ಬಾರಿ ಲಸಿಕೆ ಹಾಕಿದರೆ ಆ ಜಾನುವಾರುಗಳಲ್ಲಿ 9 ತಿಂಗಳವರೆಗೆ ರೋಗ ನಿರೋಧಕ ಶಕ್ತಿ ಇರುತ್ತದೆ.

Advertisement

ಡೇರಿಗಳ ನೇತೃತ್ವ: ಜಿಲ್ಲೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು ಇದರಲ್ಲಿ ಭಾಗವಹಿಸಲಿವೆ. ಸಹಕಾರ ಸಂಘಗಳಲ್ಲಿಯೇ ಆ ವ್ಯಾಪ್ತಿಯ ಜನಪ್ರತಿನಿಧಿಗಳ ಮೂಲಕ ಚಾಲನೆ ದೊರೆಯಲಿದೆ. ಇದಕ್ಕೆ ಹಾಲು ಉತ್ಪಾದಕರ ಸಂಘಗಳು ಸಂಪೂರ್ಣ ತೊಡಗಿಸಿಕೊಳ್ಳಲಿವೆ. ಪ್ರತಿ ರಾಸಿಗೂ ಗುರುತಿನ ಓಲೆ: ಲಸಿಕೆ ಮೂಲಕ ಪ್ರತಿ ರಾಸಿಗೂ ವಿಶೇಷ ಗುರುತಿನ ಓಲೆ ಹಾಕಲಾಗುತ್ತದೆ. ಈಗಾಗಲೇ 2.93 ಲಕ್ಷ ಜಾನುವಾರುಗಳಿಗೆ ಓಲೆ ಹಾಕಲಾಗಿದೆ. ಉಳಿದ 1,95,837 ರಾಸುಗಳಿಗೂ ಹಾಕಲಾಗುತ್ತದೆ.

ಆನ್‌ಲೈನ್‌ನಲ್ಲಿ ಮಾಹಿತಿ: ಗುರುತಿನ ಓಲೆ ಹಾಕುವುದರ ಜತೆಗೆ ಆನ್‌ಲೈನ್‌ನಲ್ಲಿ ಆ ರಾಸುಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುವುದು. ಯಾವಾಗ ಬೇಕಾದರೂ ಆ ರಾಸುಗಳ ಮಾಹಿತಿ ಸಿಗುತ್ತದೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಅಲ್ಲದೆ, ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಎಂ.ಸಿ.ಪದ್ಮನಾಭ ಹೇಳಿದರು.

ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್‌ ವಿತರಣೆ :  ಪಶುಪಾಲನಾ ಇಲಾಖೆ ಹಾಗೂ ಮನ್‌ಮುಲ್‌ ಸಹಯೋಗದಲ್ಲಿ ಲಸಿಕೆ ನಡೆಯುವುದರಿಂದ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಲಸಿಕೆದಾರರ ಆರೋಗ್ಯ ದೃಷ್ಟಿಯಿಂದ ಮಾಸ್ಕ್, ಸ್ಯಾನಿಟೈಸರ್‌ ವಿತರಿಸಲಾಗುವುದು. ಅಲ್ಲದೆ, ಸಿಬ್ಬಂದಿಗೆ ಆರೋಗ್ಯದಲ್ಲಿ ಏರುಪೇರಾದರೆ ಇಲಾಖೆಯಿಂದ ವಿಮೆ ಸೌಲಭ್ಯವಿದೆ. ಪಶುಪಾಲನಾ ಇಲಾಖೆ ಹಾಗೂ ಮನ್‌ಮುಲ್‌ನಿಂದ ಒಟ್ಟು 307 ಸಿಬ್ಬಂದಿಯಿದ್ದು, 6ರಿಂದ 7 ಜನರ 37 ತಂಡ ರಚಿಸಲಾಗಿದೆ. ಪ್ರತಿ ತಂಡಕ್ಕೂ ಪಶು ವೈದ್ಯರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಕಾಲುಬಾಯಿ ಜ್ವರಕಾಣಿಸಿಕೊಂಡಿದೆ. ಆದರೆ, ಜಿಲ್ಲೆಯಲ್ಲಿಕಳೆದ 3 ವರ್ಷಗಳಿಂದ ಕಾಣಿಸಿಕೊಂಡಿಲ್ಲ.ಕಾಲ ಕಾಲಕ್ಕೆ ಲಸಿಕೆ ಹಾಕಿನಿಯಂತ್ರಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ರೈತರಿಗೆ ಹೈನುಗಾರಿಕೆಕೈಹಿಡಿದಿದ್ದು ರೈತರು ಜಾನುವಾರುಗಳಿಗೆಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಎಂ.ಸಿ.ಪದ್ಮನಾಭ, ಉಪನಿರ್ದೇಶಕ, ಪಶುಪಾಲನಾ ಇಲಾಖೆ, ಮಂಡ್ಯ

ಮನ್‌ಮುಲ್‌ ವತಿಯಿಂದಕಾಲುಬಾಯಿ ಜ್ವರ ಲಸಿಕೆ ಹಾಕಿಸಲು ಈಗಾಗಲೇ ಪ್ರಚಾರ ಕೈಗೊಳ್ಳಲಾಗಿದೆ. 47 ವಾಹನ ನೀಡಲಾಗುತ್ತಿದ್ದು, 87 ಮಂದಿ ಸಮೂಹಕಾರ್ಯಕರ್ತರು ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆಯಾ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಲಸಿಕೆ ರವಾನಿಸಲು ವಾಹನದ ಸೌಲಭ್ಯ ಒದಗಿಸಲಾಗಿದೆ. ಡಾ.ರಾಮಕೃಷ್ಣ, ಪ್ರಭಾರ ವ್ಯವಸ್ಥಾಪಕ, ಮನ್‌ಮುಲ್‌

Advertisement

Udayavani is now on Telegram. Click here to join our channel and stay updated with the latest news.

Next