ಶಿಡ್ಲಘಟ್ಟ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶದಲ್ಲಿ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸುವುದರ ಸಹ ಅದು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಳಕೆಗೆ ಬಾರದೆ ನನೆಗುದಿಗೆ ಬಿದ್ದು ಹಾಳಾಗುತ್ತಿದೆ ಎಂಬುದಕ್ಕೆ ಶಿಡ್ಲಘಟ್ಟ ತಾಲೂಕಿನ ಮೇಲೂರಿನ ಪಶು ಆಸ್ಪತ್ರೆಯೇ ಜೀವಂತ ಸಾಕ್ಷಿಯಾಗಿದೆ.
ಶಿಡ್ಲಘಟ್ಟ ಬೆಂಗಳೂರು ಮಾಧುವ ಮೇಲೂರು ಗ್ರಾಮದಲ್ಲಿ 2020-21 ನೇ ಸಾಲಿನ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಹಾಗೂ ಆರ್‌ಐಟಿಎಫ್ ನಬಾರ್ಡ್ 25ರ ಯೋಜನೆಯಡಿ ಎನ್‌ಪಿಸಿಸಿಎಲ್ ನಿರ್ಮಿಸಿರುವ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡು 4 ವರ್ಷವಾದರೂ ಸಹ ಉದ್ಘಾಟನೆ ಭಾಗ್ಯ ಇಲ್ಲದಂತಾಗಿದೆ.
ಪ್ರಸ್ತುತ ಗ್ರಾಮದಲ್ಲಿರುವ ಹಳೆ ಕಟ್ಟಡದಲ್ಲಿ ಪಶು ಆಸ್ಪತ್ರೆ ನಡೆಯುತ್ತಿದ್ದು ಕಟ್ಟಡದ ಸ್ಥಿತಿ ಶೋಚನೀಯವಾಗಿದೆ. ಮೇಲೂರು ಪಶು ಆಸ್ಪತ್ರೆಯ ವ್ಯಾಪ್ತಿಯಲ್ಲಿ ಅಪ್ಪೇಗೌಡನಹಳ್ಳಿ, ಚೌಡಸಂದ್ರ, ಗಂಗನಹಳ್ಳಿ,ಕಂಬದಹಳ್ಳಿ, ಪಟಾಲಾಮನಹಳ್ಳಿ, ರಾಗಿಮಾಕಲಹಳ್ಳಿ ಗ್ರಾಮದಲ್ಲಿ 1238 ರಾಸುಗಳು, 130 ಎಮ್ಮೆಗಳು, 1836 ಕುರಿಗಳು, 280 ಮೇಕೆಗಳಿವೆ ಪ್ರತಿನಿತ್ಯ 10 ರಿಂದ 15 ರೈತರು ತಮ್ಮ ರಾಸುಗಳ ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ವಿದ್ಯುತ್ ಸಂಪರ್ಕವಿಲ್ಲ. ಜಿಲ್ಲೆಯಲ್ಲಿ ಚರ್ಮಗಂಟು ರೋಗ ಮತ್ತು ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕುವ ಕೆಲಸವನ್ನು ಮೇಲೂರು ಪಶು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮಾಡಿದ್ದಾರೆ. ಆದರೆ ಕನಿಷ್ಠ ಕುಳಿತುಕೊಳ್ಳಲು ಯೋಗ್ಯವಿಲ್ಲದಂತಹ ಪಶು ಆಸ್ಪತ್ರೆಯಲ್ಲಿ ಕುಳಿತುಕೊಂಡು ವೈದ್ಯರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ವಿಶೇಷ ಏನೆಂದರೇ ಇಡೀ ಕಟ್ಟದಲ್ಲಿ ಚಾವಣಿಯಲ್ಲಿ ಗಿಡಗಂಟೆಗಳು ಬೆಳೆದು ಕಟ್ಟಡದ ಗೋಡೆಗಳು ಸೀಳಿ ಹೋಗಿವೆ.
ರಾಜಕೀಯ ಗ್ರಹಣ: ಮೇಲೂರು ನೂತನವಾಗಿ ನಿರ್ಮಿಸಿರುವ ಪಶು ಆಸ್ಪತ್ರೆ ಉದ್ಘಾಟನೆಗೆ ರಾಜಕೀಯ ಗ್ರಹಣ ಬಡಿದಿದೆಯೇ? ಎಂಬ ಅನುಮಾನ ವ್ಯಕ್ತವಾಗಿದೆ. ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅವರು ಪಶು ಆಸ್ಪತ್ರೆಯನ್ನು ಉದ್ಘಾಟಿಸಲು ಪಶು ವೈದ್ಯಾಕಾರಿಗಳಿಗೆ ಸೂಚಿಸಿದರೂ ಕಟ್ಟಡದಲ್ಲಿ ಸಣ್ಣಪುಟ್ಟದ ಕೆಲಸ ಉಳಿದಿದೆ ಶೀಘ್ರ ಉದ್ಘಾಟನೆಗೆ ಕ್ರಮವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪಶು ಆಸ್ಪತ್ರೆಯನ್ನು ಉದ್ಘಾಟಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ಮೇಲೂರು ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. –
ವಿ.ಮುನಿಯಪ್ಪ, ಶಿಡ್ಲಘಟ್ಟ ಶಾಸಕ ಶಿಡ್ಲಘಟ್ಟ
ತಾಲೂಕಿನ ಮೇಲೂರು ಪಶು ಆಸ್ಪತ್ರೆಯಲ್ಲಿ ಕೆಲವೊಂದು ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದುಕೊಂಡಿದ್ದು ಅದನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ನೂತನ ಪಶು ಆಸ್ಪತ್ರೆಯ ಕಟ್ಟಡವನ್ನು ಶಿಷ್ಟಾಚಾರದಂತೆ ಲೋಕಾರ್ಪಣೆ ಮಾಡಲಗುವುದು
. -ಡಾ. ಬಿ.ಕೆ. ರಮೇಶ್ ಸಹಾಯಕ ನಿರ್ದೇಶಕ