Advertisement

ಕುಸಿಯುವ ಭೀತಿಯಲ್ಲಿ ಅಮೀನಗಡ ಪಶು ಆಸ್ಪತ್ರೆ ಕಟ್ಟಡ

04:29 PM Jul 18, 2022 | Team Udayavani |

ಅಮೀನಗಡ: ಇಲ್ಲಿಯ ಸರ್ಕಾರಿ ಪಶು ಚಿಕಿತ್ಸಾ ಲಯ ಮತ್ತು ಕೃತಕ ಗರ್ಭಧಾರಣ ಉಪಕೇಂದ್ರ ಶಿಥಿಲಗೊಂಡಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಭಯದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ.

Advertisement

ಹೌದು, ಪಟ್ಟಣದ ಬೆಳಗಾವಿ-ರಾಯಚೂರು ಹೆದ್ದಾರಿಯ ಪಕ್ಕದಲ್ಲಿರುವ ಪಶು ಆಸ್ಪತ್ರೆಗೆ ಪಶುಗಳನ್ನು ಕರೆದುಕೊಂಡು ಬರುವ ರೈತರು ಆಸ್ಪತ್ರೆ ಕಟ್ಟಡ ನೋಡಿ ಆತಂಕಗೊಳ್ಳುವಂತಾಗಿದೆ. ಕಟ್ಟಡ ಯಾವಾಗ ಬೀಳುತ್ತದೋ ಎಂಬ ಆತಂಕ ಮೂಡದೇ ಇರದು, ಪಾಳು ಬಿದ್ದಂತೆ ಕಂಡು ಬರುವ ವಾತಾವರಣ ಅಲ್ಲಿ ನಿರ್ಮಾಣವಾಗಿದ್ದು, ಕಟ್ಟಡದ ಗೋಡೆಗಳಲ್ಲಿ ಬಿರುಕು, ಸಿಮೆಂಟ್‌ ಕಿತ್ತು ಬಂದಿರುವುದು ಸೇರಿದಂತೆ ದುರಾವಸ್ಥೆಯೇ ಇಲ್ಲಿ ನೆಲೆ ನಿಂತಂತಿದೆ.

ಆಸ್ಪತ್ರೆ ಕಟ್ಟಡ 1985ರಲ್ಲಿ ಉದ್ಘಾಟನೆಯಾ ಗಿದ್ದು, ಸುಮಾರು 37 ವರ್ಷಗಳ ಹಳೆಯ ಕಟ್ಟಡ ವಾಗಿದೆ. ಕಟ್ಟಡದಲ್ಲಿ ಒಂದು ಹಾಲ್‌, ಎರಡು ಕೊಠಡಿ ಹೊಂದಿದೆ. ಒಂದು ಕೊಠಡಿಯಲ್ಲಿ ವೈದ್ಯರು ಕುಳಿತು ಕಾರ್ಯನಿರ್ವಹಿಸುತ್ತಾರೆ.

ಮತ್ತೂಂದು ಕೊಠಡಿಯಲ್ಲಿ ಔಷಧ ದಾಸ್ತಾನು ಮಾಡಲಾಗಿದೆ. ಹಾಲ್‌ನಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಕಟ್ಟಡದ ಮೇಲ್ಛಾವಣಿ ಸಿಮೆಂಟ್‌ ಎಲ್ಲೆಂದರಲ್ಲಿ ಉದುರಿಬಿದ್ದು, ಛಾವಣಿಗೆ ಅಳವಡಿಸಿದ ಕಬ್ಬಿಣದ ರಾಡ್‌ಗಳು ಕಾಣುತ್ತಿವೆ. ಕಿಟಕಿಗಳು, ಬಾಗಿಲುಗಳು ಮುಟ್ಟದರೆ ಬೀಳುವ ಹಂತದಲ್ಲಿದೆ. ಆಸ್ಪತ್ರೆ ವ್ಯಾಪ್ತಿಯಲ್ಲಿ ಪಟ್ಟಣ ಸೇರಿದಂತೆ ಹಿರೇಮಾಗಿ, ಇನಾಮಬೂದಿಹಾಳ, ಮಾದಾಪುರ, ಹುಲಗಿನಾಳ, ಕಲ್ಲಗೋನಾಳ, ರಕ್ಕಸಗಿ, ಹಿರೇಯರನಕೇರಿ, ಚಿಕ್ಕಯರನಕೇರಿ, ಹೊನ್ನರಹಳ್ಳಿ, ಬೇವಿನಮಟ್ಟಿ ಸೇರಿದಂತೆ ಒಟ್ಟು 11 ಗ್ರಾಮಗಳ ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯ ವ್ಯಾಪ್ತಿಯಲ್ಲಿ 2880 ಎಮ್ಮೆ-ಆಕಳು,11000 ಕುರಿ-ಆಡುಗಳು ಸೇರಿ ಇತರ ಪ್ರಾಣಿಗಳಿವೆ ಎಂದು ಅಂದಾಜಿಸಲಾಗಿದೆ.

Advertisement

ಪ್ರಸ್ತುತ ಮಳೆಗಾಲ ಪ್ರಾರಂಭವಾಗಿದ್ದು, ಮಳೆ ಸುರಿದರೆ ಛಾವಣಿಯಿಂದ ನೀರು ಗೋಡೆ ಮೇಲೆ ಹರಿಯುವ ಜತೆಗೆ ಗೋಡೆಯ ಒಳ ಭಾಗಕ್ಕೆ ಜಿನಗುತ್ತಿದೆ. ಇದರಿಂದ ಗೋಡೆ ಛಾವಣಿಯಲ್ಲಿ ತೇವಾಂಶದಿಂದ ಪಾಚಿ ಬೆಳೆದಿದೆ. ಆದರಿಂದ ದುಃಸ್ಥಿತಿಯಲ್ಲಿರುವ ಕಟ್ಟಡವನ್ನು ಅಧಿಕಾರಿಗಳು ಗಮನ ಹರಿಸಿ ಬೀಳುವ ಹಂತದಲ್ಲಿರುವ ಪಶು ಆಸ್ಪತ್ರೆ ಕಟ್ಟಡ ಸರಿಪಡಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

ರೈತ ಸ್ನೇಹಿಯಾದ ಎತ್ತು, ಎಮ್ಮೆ, ಆಕಳು, ಕುರಿ,ನಾಯಿ ಹೀಗೆ ಹಲವು ಪ್ರಾಣಿಗಳಿಗೆ ಸಂಜೀವಿನಿಯಾಗಿರುವ ಪಟ್ಟಣದ ಪಶು ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದೆ.ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಸಿಬ್ಬಂದಿ ಜೀವಭಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಆದರಿಂದ ಸಂಬಂದಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಹಳೆ ಕಟ್ಟಡ ನೆಲಸಮಗೊಳಿಸಿ ಈಗಿರುವ ಸ್ಥಳದಲ್ಲಿ ಸುಸಜ್ಜಿತ ಪಶು ಆಸ್ಪತ್ರೆ ನಿರ್ಮಾಣ ಮಾಡಿ ಸಮಸ್ಯೆ ಬಗೆಹರಿಸಬೇಕು –ಹುಲ್ಲಪ್ಪ ಹುಲಗಿನಾಳ, ಇಸ್ಮಾಯಿಲ್‌ ಮುಲ್ಲಾ, ಗ್ರಾಮಸ್ಥರು

ಅಮೀನಗಡ ಪಟ್ಟಣದಲ್ಲಿರುವ ಪಶು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ವೀಕ್ಷಣೆ ಮಾಡಿದ್ದೇನೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಆರ್‌ಐಡಿಎಫ್‌(ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿ) -28 ಯೋಜನೆಯಡಿ 40 ಲಕ್ಷ ರೂ. ಅನುದಾನ ಬಿಡುಗೊಡೆಗೊಂಡ ತಕ್ಷಣವೇ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. –ಡಾ| ಎಸ್‌.ಬಿ.ಬೇನಾಳ, ಮುಖ್ಯಪಶು ವೈದ್ಯಾಧಿಕಾರಿ, ಆಡಳಿತ, ಪಶು ಆಸ್ಪತ್ರೆ, ಹುನಗುಂದ

ನಮ್ಮ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಆದರೆ, ಆಸ್ಪತ್ರೆ ಕಟ್ಟಡ ಶಿಥಿಲಗೊಂಡಿದೆ. ಕಟ್ಟಡದ ಮೇಲ್ಚಾವಣಿ ಸಿಮೆಂಟ್‌ ಎಲ್ಲೆಂದರಲ್ಲಿ ಉದುರಿಬಿದ್ದು ಆತಂಕದಲ್ಲಿ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಿರಿಯ ಅಧಿಕಾರಿಗಳು ಸದ್ಯಕ್ಕೆ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಲು ಜಿಪಂ ವತಿಯಿಂದ 4 ಲಕ್ಷ ಅನುದಾನ ಇದೆ. ಶೀಘ್ರ ಟೆಂಡರ್‌ ಕರೆದು ತಾತ್ಕಾಲಿಕ ಸಮಸ್ಯೆ ಬಗೆಹರಿಸಲಾಗುವುದು. ಕಟ್ಟಡ ಅನುದಾನ ಬಂದ ನಂತರ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. –ಶಂಕರಗೌಡ ಎಂ.ಬಿ., ವೈದ್ಯರು, ಪಶು ಆಸ್ಪತ್ರೆ ಅಮೀನಗಡ

-ಎಚ್‌.ಎಚ್‌.ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next