ಮಾನವ ಜೀವಿಗಳಾದ ನಮಗೆ ಪರಸ್ಪರ ಸಂವಹನವನ್ನು ಮಾಡಲು ಭಾಷೆಯ ಅವಕಾಶವಿದೆ. ಪ್ರಾಣಿಗಳೂ ತಮ್ಮದೇ ಆದ ಸಂವಹನ ಭಾಷೆಯನ್ನು ಉಪಯೋಗಿಸಿ ಈ ಪ್ರಕ್ರಿಯೆಯನ್ನು ನಡೆಸುತ್ತವೆ. ಮನುಷ್ಯರಲ್ಲಿ ಪ್ರತಿಯೊಬ್ಬರಿಗೂ ಹೆಸರುಗಳಿವೆ. ಈ ಹೆಸರುಗಳನ್ನು ಸಂಭೋದಿಸಿ ಸಂವಹನ ಮಾಡುತ್ತೇವೆ. ಹಾಗಾದರೆ ಪ್ರಾಣಿಗಳು ಕೂಡ ಪರಸ್ಪರ ಹೆಸರುಗಳನ್ನು ಹೊಂದಿವೆಯೇ ಎಂಬುದು ಕುತೂಹಲ ಮೂಡಿಸಬಹುದು.
ಸಾಮಾನ್ಯವಾಗಿ ಪ್ರಾಣಿ-ಪಕ್ಷಿಗಳು ತಮ್ಮದೇ ಆದ ಸಂಜ್ಞಾ ಭಾಷೆ ಅಥವಾ ಬೇರೆ ರೀತಿಯ ಸಂವಹನ ಪ್ರಕ್ರಿಯೆಯನ್ನು ಹೊಂದಿರುತ್ತವೆ. ಉದಾಹರಣೆಗೆ ಡಾಲ್ಫಿನ್, ಗಿಳಿಗಳು ತಮ್ಮ ಸಂಗಡದಲ್ಲಿರುವವರನ್ನು ಅವುಗಳ ವೈಯಕ್ತಿಕ ಧ್ವನಿಯ ಅನುಕರಣೆ ಮಾಡಿ ಕರೆಯುತ್ತವೆಯಂತೆ. ಹಾಗೆಯೇ ಆನೆಗಳು ತಮ್ಮದೇ ಆದ ಸಂವಹನ ಹೊಂದಿವೆ. ಅದರಲ್ಲೂ ಮನುಷ್ಯನಂತೆ ಪ್ರತೀ ಆನೆಗೂ ಹೆಸರಿವೆ, ಅವು ಆ ಹೆಸರಿನಿಂದಲೇ ಕರೆದು ಸಂವಹನ ನಡೆಸುತ್ತವೆ ಎಂದು ಇತ್ತೀಚಿನ ಅಧ್ಯಯನವೊಂದು ಕಂಡುಕೊಂಡಿದೆ.
ಕೊಲರಾಡೋ ಸ್ಟೇಟ್ ಯುನಿವರ್ಸಿಟಿಯ ಸಂಶೋಧನಕಾರರು ಉತ್ತರ ಹಾಗೂ ದಕ್ಷಿಣ ಕೀನ್ಯಾದ ರಾಷ್ಟ್ರೀಯ ಅಭಯಾರಣ್ಯಗಳಲ್ಲಿರುವ ಆಫ್ರಿಕಾದ ಆನೆಗಳ ಮೇಲೆ 1986ರಿಂದ 2022ರ ವರೆಗೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಆನೆಗಳಲ್ಲಿ ಹೆಸರಿನಂತಹ ವಿಷಯವಿದೆ ಎನ್ನುವುದನ್ನು ಸಂಶೋಧನಕಾರರು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಕಂಡುಕೊಂಡಿದ್ದಾರೆ.
ತಮ್ಮ ಸಂಗಾತಿ ಆನೆ ಅಥವಾ ತಮ್ಮ ಗುಂಪಿನ ಆನೆಗಳು 50 ಮೀಟರ್‌ಗಿಂತ ದೂರ ಹೋದಾಗ ಅವುಗಳು ಹೆಸರನ್ನು ಹಿಡಿದು ಈ ಕರೆಗಳನ್ನು ಮಾಡುತ್ತವಂತೆ. ಹೀಗಿರುವ 469 ವಿಭಿನ್ನ ಕರೆಗಳನ್ನು ಗುರುತಿಸಲಾಗಿದೆ. ಆನೆಗಳು ಮಾಡುವ ಈ ಕರೆಗಳಿಗೆ ಇನ್ನೊಂದು ಬದಿ ಇರುವ ಆನೆಗಳು ಸಕ್ರಿಯವಾಗಿ ಪ್ರತಿಕ್ರಿಯಿಸುವುದನ್ನು ದಾಖಲಿಸಲಾಗಿದೆ. ಸಂಶೋಧನಕಾರರು ಈ ಕರೆಗಳನ್ನು ರೆಕಾರ್ಡ್ ಮಾಡಿ ಅದನ್ನು ಪುನಃ ಹಾಕಿ ಕರೆದಾಗ ಆನೆಗಳು ತಮ್ಮ ಸ್ವಂತ ಹೆಸರೆಂಬಂತೆ ಆ ಕರೆಗಳಿಗೆ ಬಲವಾಗಿ ಪ್ರತಿಕ್ರಿಯಿಸಿವೆ. ಇದರಿಂದ ಮನುಷ್ಯನಂತೆ ಆನೆಗಳು ಹೆಸರುಗಳನ್ನು ಬಳಸಿಕೊಂಡು ಸಂವಹನ ನಡೆಸುತ್ತವೆ ಎನ್ನುವುದು ಕಂಡುಹಿಡಿಯಲಾಗಿದೆ.
ವಿಧಾತ್ರಿ ಭಟ್, ಉಪ್ಪುಂದ