Advertisement

ಪ್ರಾಣಿಗಳ ನೆರವಿನಿಂದ ಚಿಕಿತ್ಸೆ ಆರೋಗ್ಯಕ್ಕೆ ಹಿತಕರ

10:15 PM Aug 12, 2019 | mahesh |

ಪ್ರಾಣಿಗಳ ಮೇಲಿನ ಪ್ರೀತಿ ಸಹಜ. ಕೆಲವರಿಗೆ ಸಾಕಿದ ಪ್ರಾಣಿಗಳೆಂದರೆ ತುಂಬಾ ಇಷ್ಟವಿರುತ್ತದೆ. ಮನೆಯ ಸದಸ್ಯರಂತೆ ಅವರನ್ನು ನೋಡಿಕೊಳ್ಳುತ್ತಾರೆ. ಅವು ಕೂಡ ಅಷ್ಟೇ ಪ್ರೀತಿ ನೀಡಿದವರಿಗೆ ಬಳುವಳಿಯಾಗಿ ದುಪ್ಪಟ್ಟು ಪ್ರೀತಿ ನೀಡುತ್ತವೆ. ಅದಲ್ಲದೆ ಇವು ಮಾಲಿಕರ ಆರೋಗ್ಯವನ್ನು ಕಾಪಾಡುತ್ತವೆ ಎಂದರೆ ನಂಬಲೇಬೇಕು ಮತ್ತು ಅದು ಸಾಬೀತಾಗಿದೆ.

Advertisement

ಪ್ರಾಣಿ ಪ್ರೀತಿ ಸಹಜವಾದದ್ದೇ. ಮನೆಯಲ್ಲಿ ಮುದ್ದಿನ ಶ್ವಾನ, ಬೆಕ್ಕುಗಳಿದ್ದರೆ, ಮನೆ ಸದಸ್ಯರಿಗಿಂತ ಒಂದು ಪಟ್ಟು ಪ್ರೀತಿ ಹೆಚ್ಚೇ. ಮನೆ ಮಂದಿಯಂತೆಯೇ ಪ್ರೀತಿ, ಅವುಗಳಿಗೊಂದು ಪುಟ್ಟ ಮನೆ, ಕಾರಲ್ಲಿ ಜೊತೆಯಾಗಿಯೇ ಪ್ರಯಾಣ, ಮನೆಯೊಳಗೆಯೂ ಸ್ಥಾನ… ನಗರ ಪ್ರದೇಶಗಳಲ್ಲಿ ಹಲವರ ಮನೆಯಲ್ಲಿ ಸಾಮಾನ್ಯವಾದರೆ, ಹಳ್ಳಿಗಳಲ್ಲಿಯೂ ಶ್ವಾನ, ಬೆಕ್ಕುಗಳ ಮೇಲೆ ಪ್ರೀತಿ ಕಡಿಮೆ ಏನಲ್ಲ.

ಮನೆ ಸದಸ್ಯರಂತೆಯೇ ಇರುವ ಪ್ರಾಣಿಗಳು, ಮನೆಯ ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತವೆ. ಆದರೆ, ಇದೇ ಪ್ರಾಣಿಗಳು ಮನೆ ಕಾಯುವುದರೊಂದಿಗೆ ಮನುಷ್ಯರ ಆರೋಗ್ಯವನ್ನೂ ಕಾಯುತ್ತವೆ ಎಂದರೆ ನಂಬಲೇಬೇಕು. ಹೌದು. ಆಶ್ಚರ್ಯವೆನಿಸಿದರೂ ಇದು ಸತ್ಯ.

ಪ್ರಾಣಿಗಳಿಂದ ಮನುಷ್ಯ ಲವಲವಿಕೆಯಿಂದ, ದೀರ್ಘಾಯುಷಿಯಾಗಿ ಬಾಳಬಹುದು ಎನ್ನುತ್ತದೆ ಮಾನಸಿಕ ಆರೋಗ್ಯ ಜಗತ್ತು. ಪ್ರಾಣಿಗಳು ಮತ್ತು ಮನುಷ್ಯರ ನಡುವಿನಲ್ಲಿ ಒಡನಾಟ ಇದ್ದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತದೆ ಮನಃಶಾಸ್ತ್ರ. ಜನಸಾಮಾನ್ಯರು ಪ್ರಾಣಿಗಳ ಜತೆ ಒಡನಾಟದಿಂದಿದ್ದರೆ, ಶಕ್ತಿ, ಸಾಮರ್ಥ್ಯ ಹೆಚ್ಚುವುದಲ್ಲದೆ, ಭಾವನಾತ್ಮಕ ಸಂಬಂಧ ವೃದ್ಧಿಗೆ ಇದು ಕಾರಣವಾಗುತ್ತದೆ ಎಂಬುದು ಮನಃಶಾಸ್ತ್ರಜ್ಞರ ಅಂಬೋಣ. ಅದಕ್ಕಾಗಿಯೇ ವಿದೇಶಗಳಲ್ಲಿ ಅನಿಮಲ್‌ ಅಸಿಸ್ಟೆಡ್‌ ಥೆರಪಿಗೆ ಜನ ಹೆಚ್ಚು ಒಲವು ತೋರುತ್ತಾರೆ. ಕುದುರೆ, ನಾಯಿ, ಬೆಕ್ಕುಗಳ ಸಹಾಯದಿಂದ ನೀಡುವ ಈ ಚಿಕಿತ್ಸೆ ಪರಿಣಾಮಕಾರಿ ವಿಧಾನ ಎಂಬುದು ವಿದೇಶಿಯರ ನಂಬಿಕೆ.

ಮಂಗಳೂರಿನಲ್ಲೂ ಪರಿಚಯ
ಸಾಕುಪ್ರಾಣಿಗಳಾದ ಕುದುರೆ, ನಾಯಿ, ಬೆಕ್ಕುಗಳ ಸಹಾಯದಿಂದ ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳಿಗೆ ಚಿಕಿತ್ಸೆ ನೀಡುವ ಅಸಿಸ್ಟೆಡ್‌ ಥೆರಪಿ ಎಂಬ ಹೊಸ ಪರಿಕಲ್ಪನೆಯನ್ನು ಮಂಗಳೂರಿನಲ್ಲಿ ಮೊದಲ ಬಾರಿಗೆ ಅನಿರ್ವೇದ ಸಂಸ್ಥೆಯಲ್ಲಿ ಇತ್ತೀಚೆಗೆ ಪರಿಚಯಿಸಲಾಗಿದೆ. ಹೈಪರ್‌ ಆ್ಯಕ್ಟಿವಿಟಿ, ಆಟಿಸಂ, ಬುದ್ಧಿಮಾಂದ್ಯ ಮೊದಲಾದ ಸಮಸ್ಯೆ ಇರುವ ಮಕ್ಕಳಿಗೆ ಪರೀಕ್ಷೆ ನಡೆಸಿ, ಕ್ರಮಾನುಸಾರ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅನಿಮಲ್‌ ಅಸಿಸ್ಟೆಡ್‌ ಥೆರಪಿಯನ್ನು ಚಿಕಿತ್ಸೆಯ ಒಂದು ಭಾಗವಾಗಿ ಇಲ್ಲಿ ಹೊಸದಾಗಿ ಪರಿಚಯ ಮಾಡಲಾಗಿದೆ.

Advertisement

ವಿದೇಶದಲ್ಲಿ ಸಾಮಾನ್ಯ
1960ರಿಂದಲೇ ಅನಿಮಲ್‌ ಅಸಿಸ್ಟೆಡ್‌ ಥೆರಪಿ ಎಂಬ ಪರಿಕಲ್ಪನೆ ಇದೆ. ಇದು ವಿಶೇಷ ಮಕ್ಕಳಿಗೆ ಈ ಥೆರಪಿ ತುಂಬಾ ಪ್ರಯೋಜನಕಾರಿಯಾಗಿದೆ. ಭಾರತದಲ್ಲಿ ಅಪರೂಪವಾಗಿ ರುವ ಈ ಥೆರಪಿ ಭಾವನಾತ್ಮಕ ಸಂಬಂಧ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒತ್ತಡದ ಬದುಕಿನಲ್ಲಿ ಒಂದಷ್ಟು ಚೈತನ್ಯ, ಮಾನಸಿಕ ಆರೋಗ್ಯ ವೃದ್ಧಿಗೆ ಪ್ರಾಣಿಗಳ ನೆರವಿನಿಂದ ಮಾಡುವ ಈ ಚಿಕಿತ್ಸೆ ಹೆಚ್ಚು ಜಾಹೀರಾಗಬೇಕು.

ಶ್ವಾನ ಬೆಕ್ಕುಗಳ ಬಳಕೆ
ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ಆರೋಗ್ಯ, ಮಾನಸಿಕ ನೆಮ್ಮದಿ ಇದೆ ಎಂದು ಸಂಶೋಧನೆಗಳೇ ಸಾಬೀತುಪಡಿಸಿವೆ. ದಿನನಿತ್ಯ ಸಂಜೆ, ಬೆಳಗ್ಗೆ ಸಾಕುಪ್ರಾಣಿಗಳೊಂದಿಗೆ ವಾಕಿಂಗ್‌ ಹೋಗುವುದು ದೇಹಕ್ಕೆ ವ್ಯಾಯಾಮ ಸಿಗುತ್ತದೆಯಲ್ಲದೆ, ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ. ಹೈಪರ್‌ ಟೆನÒನ್‌ ದೂರವಾಗುವುದಕ್ಕೂ ಸಾಕುಪ್ರಾಣಿಗಳಿಂದ ನಡೆಸುವ ಥೆರಪಿ ಕಾರಣವಾಗುತ್ತದೆ.

ಈ ಮಾದರಿ ಚಿಕಿತ್ಸೆಯಲ್ಲಿ ಶ್ವಾನ ಮತ್ತು ಬೆಕ್ಕುಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಇದನ್ನು ಪೆಟ್‌ ಥೆರಪಿ ಎಂದೂ ಕರೆಯಲಾಗುತ್ತದೆ. ಮೀನು, ಕುದುರೆ ಮುಂತಾದ ಪ್ರಾಣಿಗಳನ್ನೂ ಅನಿಮಲ್‌ ಅಸಿಸ್ಟೆಡ್‌ ಥೆರಪಿಯಲ್ಲಿ ಬಳಕೆ ಮಾಡಲಾಗುತ್ತದೆ.

ಪ್ರಯೋಜನಗಳೇನು?
ಪೆಟ್‌ ಥೆರಪಿ ಅಥವಾ ಅನಿಮಲ್‌ ಅಸಿಸ್ಟೆಡ್‌ ಥೆರಪಿಯಿಂದ ಮನುಷ್ಯನ ಸರ್ವ ಆರೋಗ್ಯಕ್ಕೂ ಹಿತಕರ. ಆರೋಗ್ಯಯುತ ಮನಸ್ಸು ನಿರ್ಮಿಸುವಲ್ಲಿ ಈ ಥೆರಪಿ ಹೆಚ್ಚು ಸಹಕಾರಿಯಾಗುತ್ತದೆ. ಭಾವನಾತ್ಮಕ ಸಂಬಂಧಗಳ ಸಮತೋಲನ, ಏಕಾಗ್ರತೆ ಹೆಚ್ಚಳ ಸಹಿತ ಹೃದಯಾಘಾತ ತಡೆಯುವಲ್ಲಿಯೂ ಪೆಟ್‌ ಥೆರಪಿ ನೆರವಾಗುತ್ತದೆ.

ವಿಶೇಷ ಮಕ್ಕಳಿಗೆ ಥೆರಪಿ
ವಿಶೇಷ ಮಕ್ಕಳಲ್ಲಿ ಕೆಲವು ಮಕ್ಕಳು ಅತಿಯಾದ ವರ್ತನೆ ತೋರು ತ್ತಾರೆ. ಅಂತಹ ಮಕ್ಕಳಿಗೆ ಪ್ರಾಣಿಗಳ ಸ್ಪರ್ಶ, ಒಡನಾಟದಿಂದ ಸಮತೋಲನ ಕಾಯ್ದುಕೊಳ್ಳಲು ಸುಲಭ ಸಾಧ್ಯವಾಗುತ್ತದೆ. ಅಲ್ಲದೆ, ಅನಿಮಲ್‌ ಅಸಿಸ್ಟೆಡ್‌ ಥೆರಪಿಯಿಂದ ಮಕ್ಕಳಿಗೆ ಫಲಿತಾಂಶವೂ ಬೇಗ ಸಿಗುತ್ತದೆ ಎನ್ನುತ್ತಾರೆ ಅನಿರ್ವೇದ ಸಂಸ್ಥೆಯ ಸ್ಥಾಪಕಿ ಕೆ. ಟಿ. ಶ್ವೇತಾ.

ಧನಾತ್ಮಕ ಪರಿಣಾಮ
ಅನಿಮಲ್‌ ಅಸಿಸ್ಟೆಡ್‌ ಥೆರಪಿಯಿಂದ ಭಾವನಾತ್ಮಕ ಸಂಬಂಧಗಳ ಬೆರೆಯುವಿಕೆಗೆ ಪೂರಕವಾಗುತ್ತದೆ. ವಿಶೇಷ ಮಕ್ಕಳಿಗೆ ಪೆಟ್ಸ್‌ ಥೆರಪಿ ನೀಡುವುದರಿಂದ ಹಲವಾರು ರೀತಿಯ ಧನಾತ್ಮಕ ಪರಿಣಾಮಗಳಿವೆ ಎಂಬುದನ್ನು ಸಂಶೋಧನೆಗಳೇ ಸಾಬೀತುಪಡಿಸಿವೆ. ಉದ್ವಿಗ್ನತೆ, ಒತ್ತಡ ನಿವಾರಣೆಗೆ ಇದು ಸಹಕಾರಿ.
– ಕೆ. ಟಿ. ಶ್ವೇತಾ, ಮನಃಶಾಸ್ತ್ರಜ್ಞೆ

 ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next