ವಿಟ್ಲ : ಅನಿಲಕಟ್ಟೆಯಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಕುಸಿದು ಬಿದ್ದು ಛಾವಣಿ ಸಹಿತ ಧ್ವಂಸಗೊಂಡಿದ್ದ ಬಸ್ ತಂಗುದಾಣ ಕೇವಲ ನಾಲ್ಕು ದಿನಗಳಲ್ಲಿ ದುರಸ್ತಿಗೊಂಡು ಪ್ರಯಾಣಿಕರ ಸೇವೆಗೆ ಸಿದ್ಧವಾಗಿದೆ. ಪಟ್ಟಣ ಪಂಚಾಯತ್ ಕ್ರಮದ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಅನಿಲಕಟ್ಟೆ ಸಾಹಿತ್ಯ ವೇದಿಕೆ ವತಿಯಿಂದ 7 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟಿದ್ದ ಈ ಪ್ರಯಾಣಿಕರ ತಂಗುದಾಣವು ಪ್ರಯಾಣಿಕರಿಗೆ ಉಪಯುಕ್ತವಾಗಿತ್ತು. ಜೂ.20 ರಂದು ಭಾರೀ ಮಳೆಗೆ ಈ ತಂಗುದಾಣ ಕುಸಿದುಬಿದ್ದಿತ್ತು. ಈ ಬಗ್ಗೆ ಜೂ. 21ರ ಉದಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು.
ಜತೆಗೆ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳು ವಿಟ್ಲ ಪಟ್ಟಣ ಪಂಚಾಯತ್‌ಗೆ ಮನವಿ ಸಲ್ಲಿಸಿ ಆ ತಂಗುದಾಣವನ್ನು ದುರಸ್ತಿ ಮಾಡಿಕೊಡಬೇಕೆಂದು ವಿನಂತಿಸಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪ.ಪಂ. ಮುಖ್ಯಾ ಧಿಕಾರಿ ಮಾಲಿನಿ, ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಳೀಯ ಸದಸ್ಯೆ ಸಂಧ್ಯಾ ಮೋಹನ್ ಅವರು ತ್ವರಿತವಾಗಿ ದುರಸ್ತಿಗೆ ಕ್ರಮ ಕೈಗೊಂಡ ಪರಿಣಾಮವಾಗಿ ನಾಲ್ಕೇ ದಿವಸಗಳಲ್ಲಿ ತಂಗುದಾಣ ಎಂದಿನಂತೆ ಪ್ರಯಾಣಿಕರ ಸೇವೆಗೆ ಸಿದ್ಧವಾಗಿ ನಿಂತಿದೆ.
ಕಾರ್ಯ ಶ್ಲಾಘನೀಯ
ತಂಗುದಾಣ ಕುಸಿದು ಬಿದ್ದುದು ಬೇಸರವಾಗಿತ್ತು. ಆದರೆ ತ್ವರಿತವಾಗಿ ನಮ್ಮ ಮನವಿಗೆ ಸ್ಪಂದಿಸಿದ ವಿಟ್ಲ ಪಟ್ಟಣ ಪಂಚಾಯತ್‌ಗೆ ಅಭಿನಂದನೆಗಳು. ಜನಪ್ರತಿನಿ ಧಿಗಳ ಮತ್ತು ಅಧಿಕಾರಿಗಳ ಶೀಘ್ರ ಸ್ಪಂದನೆ ಮತ್ತು ಪಟ್ಟಣ ಪಂಚಾಯತ್ ಕಾರ್ಯ ವೈಖರಿ ಶ್ಲಾಘನೀಯವಾಗಿದೆ.
- ಅಬೂಬಕರ್ ಅನಿಲಕಟ್ಟೆ ವಿಟ್ಲ
ದ.ಕ. ಜಿಲ್ಲಾಧ್ಯಕ್ಷರು, ಕ. ಸಾಹಿತ್ಯ ವೇದಿಕೆ