Advertisement
ರಾಜ್ಯ ಸರ್ಕಾರದ “ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯ ವ್ಯಥೆ ಇದಾಗಿದೆ. ಹೊಸ ಸರ್ಕಾರದ ತೀರ್ಮಾನದ ಮೇಲೆ ಭವಿಷ್ಯ ಅವಲಂಬಿತವಾಗಿದೆ. ಯೋಜನೆ ಮುಂದುವರಿಸಲು ಈಗಿನ ಸಮ್ಮಿಶ್ರ ಸರ್ಕಾರ ತೀರ್ಮಾನಿಸಿದರೆ ಮಾತ್ರ ಫಲಾನುಭವಿಗಳ ಕೈಸೇರಲಿದೆ. ಇಲ್ಲದಿದ್ದರೆ, ಹತ್ತಾರು ತಿಂಗಳಿಂದ ಕಾದು ಕುಳಿತವರಿಗೆ “ಗ್ಯಾಸ್ ಟ್ರಬಲ್ ಗ್ಯಾರಂಟಿ’.
ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆಗಳು ಆಗಿವೆ. ಫಲಾನುಭವಿಗಳ ಆಯ್ಕೆಯೂ ನಡೆದಿದೆ. ಅವರಿಗೆ ಸಿಎಂ ಪತ್ರವೂ ಹೋಗಿದೆ. ಆದರೆ, ಯೋಜನೆ ಇನ್ನೇನು ಅನುಷ್ಠಾನಗೊಳಿಸಬೇಕು ಎಂಬ ಹಂತದಲ್ಲಿ ಚುನಾವಣೆ ಎದುರಾಯಿತು. ನೀತಿ ಸಂಹಿತೆ ಅಡ್ಡಿ ಆಗಿದ್ದರಿಂದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ ಒದಗಿಸಲು ಸಾಧ್ಯವಾಗಿಲ್ಲ. ಶೀಘ್ರದಲ್ಲೇ ಮುಖ್ಯಮಂತ್ರಿ ಅವರು ಸಭೆ ಕರೆಯಲಿದ್ದು, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಹೊಸ ಸರ್ಕಾರದಲ್ಲಿ ಯೋಜನೆ ಮುಂದುವರಿಯುತ್ತಾ ಎಂದು ಕೇಳಿದ್ದಕ್ಕೆ ಅಧಿಕಾರಿಗಳ ಬಳಿ ಉತ್ತರವಿಲ್ಲ.
Related Articles
ಕರ್ನಾಟಕವನ್ನು ಪಡಿತರ ಸೀಮೆ ಎಣ್ಣೆ ಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಅಡುಗೆ ಅನಿಲ ಸಂಪರ್ಕ ಇಲ್ಲದ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಕೊಡಲು ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ “ಮುಖ್ಯಮಂತ್ರಿ ಅನಿಲಭಾಗ್ಯ’ ಯೋಜನೆ ಜಾರಿಗೆ ತರಲಾಗಿತ್ತು. 30 ಲಕ್ಷ ಕುಟುಂಬಗಳನ್ನು ಯೋಜನೆಗೆ ಪರಿಗಣಿಸಲಾಗಿತ್ತು. ಮೊದಲ ಹಂತದಲ್ಲಿ 10 ಲಕ್ಷ ಫಲಾನುಭವಿಗಳಿಗೆ ಸೌಲಭ ಒದಗಿಸಲು ಗುರಿ ಇಟ್ಟುಕೊಳ್ಳಲಾಗಿತ್ತು. ಇದಕ್ಕಾಗಿ ಗ್ರಾ.ಪಂ. ಕಚೇರಿ, ಕರ್ನಾಟಕ ಒನ್, ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಆಯ್ಕೆಯಾದ ಪ್ರತಿ ಅರ್ಹ ಕುಟುಂಬಕ್ಕೆ ಉಚಿತ ಅನಿಲ ಸಂಪರ್ಕ, ಗ್ಯಾಸ್‌ಸ್ಟೌವ್, 2 ಸಿಲಿಂಡರ್ ಮತ್ತು ಲೈಟರ್ ನೀಡಲಾಗುತ್ತದೆ. ಇದಕ್ಕೆ ಒಂದು ಕುಟುಂಬಕ್ಕೆ 4,254 ರೂ. ಖರ್ಚು ಬರುತ್ತದೆ. ಈ ಖರ್ಚನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸುತ್ತದೆ. ಅದನ್ನು ಪೂರ್ತಿಯಾಗಿ ಸರ್ಕಾರವೇ ಭರಿಸಲಿದೆ.
Advertisement
ಕೈಸೇರಿದ್ದು ಸಿಎಂ ಪತ್ರ ಮಾತ್ರ!ರಾಜ್ಯ ಸರ್ಕಾರದ 2011ರ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಮಾನದಂಡಗಳನ್ನು ಮುಂದಿಟ್ಟುಕೊಂಡು ಬಡತನ ರೇಖೆಗಿಂತ ಕೆಳಗಿನ 30 ಲಕ್ಷ ಕುಟುಂಬಗಳನ್ನು “ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ’ಗೆ ಪರಿಗಣಿಸಲಾಗಿತ್ತು. ಈ ಪೈಕಿ ಮೊದಲ ಹಂತದಲ್ಲಿ 10 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಒಟ್ಟು 33 ಲಕ್ಷ ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ 9.71 ಲಕ್ಷ ಫಲಾನುಭವಿಗಳನ್ನು ಆಹಾರ ಇಲಾಖೆ ಆಯ್ಕೆ ಮಾಡಿದೆ. ಅದರಲ್ಲಿ 9.50 ಲಕ್ಷ ಫಲಾನುಭವಿಗಳಿಗೆ “”ನೀವು ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಅರ್ಹರಾದ್ದೀರಿ” ಎಂದು ಸ್ವತಃ ಮುಖ್ಯಮಂತ್ರಿಯವರು ಪತ್ರ ಬರೆದು ತಿಳಿಸಿದ್ದಾರೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಯೋಜನೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಸಿಎಂ ಪತ್ರ ಮಾತ್ರ ಸಿಕ್ಕಿದ್ದು, ಕಳೆದ ನಾಲ್ಕು ತಿಂಗಳಿಂದ ಉಚಿತ ಗ್ಯಾಸ್ ಸಂಪರ್ಕ ಸಿಕ್ಕಿಲ್ಲ. ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಅಷ್ಟಕ್ಕೆ ನಿಂತು ಹೋಗಿತ್ತು. ಈಗ ಹೊಸ ಸರ್ಕಾರ ಬಂದಿದೆ. ಹೊಸ ತೀರ್ಮಾನ, ಹೊಸ ಪ್ರಕ್ರಿಯೆ ಆಗಬೇಕಿದೆ.
– ಮನೋಜ್ ಕೊಳ್ಳ, ನೋಡಲ್ ಅಧಿಕಾರಿ, ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ – ರಫೀಕ್ ಅಹ್ಮದ್