Advertisement

ನಾಲ್ಕು ದಿನಗಳ‌ ಟೆಸ್ಟ್‌ ಗೆ ಕುಂಬ್ಳೆ ವಿರೋಧ

02:09 AM Feb 29, 2020 | Team Udayavani |

ಹೊಸದಿಲ್ಲಿ: ಭಾರತ ತಂಡದ ಮಾಜಿ ಆಟಗಾರ ಅನಿಲ್‌ ಕುಂಬ್ಳೆ ಇದೇ ಮೊದಲ ಬಾರಿ ನಾಲ್ಕು ದಿನಗಳ ಟೆಸ್ಟ್‌ ಕ್ರಿಕೆಟ್‌ ಆಲೋಚನೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಒಂದು ದಿನ ಕಡಿಮೆ ಮಾಡುವುದನ್ನು ತಾವು ವಿರೋಧಿಸುವುದಾಗಿ ಹೇಳಿದ್ದಾರೆ.

Advertisement

2023ರ ಬಳಿಕ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳಾಪಟ್ಟಿಯನ್ನು ಹೊಂದಾಣಿಕೆ ಮಾಡುವ ಉದ್ದೇಶದಿಂದ ಟೆಸ್ಟ್‌ ಪಂದ್ಯಗಳನ್ನು 4 ದಿನಗಳಿಗೆ ಸೀಮಿತಗೊಳಿಸುವ ಪ್ರಸ್ತಾವವನ್ನು ಐಸಿಸಿ ಮುಂದಿಟ್ಟಿತ್ತು. ಇದರಿಂದ ಟೆಸ್ಟ್‌ ಕಡೆಗೆ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು ಸಾಧ್ಯವಾಗಲಿದೆ ಎಂದು ಹೇಳಿತ್ತು. ಈ ಬಗ್ಗೆ ಮಾತನಾಡಿರುವ ಕುಂಬ್ಳೆ ನನ್ನ ಅಭಿಪ್ರಾಯಕ್ಕಿಂತಲೂ ಆಟಗಾರರಿಗೂ ಕೂಡ 4 ದಿನಗಳ ಟೆಸ್ಟ್‌ ಆಡಲು ಇಷ್ಟವಿಲ್ಲ ಎಂಬುದು ಇಲ್ಲಿ ಮುಖ್ಯ. ಟೆಸ್ಟ್‌ಎಂದರೆ ಅದು 5 ದಿನಗಳ ಪಂದ್ಯ. ಐದು ದಿನಗಳ ಕಾಲ ಆಡುವುದರಿಂದಲೇ ಅದನ್ನು ಟೆಸ್ಟ್‌ ಎಂದು ಕರೆಯಲಾಗುತ್ತದೆ. ಈಗ ಅದನ್ನು ನಾಲ್ಕು ದಿನಕ್ಕೆ ಇಳಿಸಿದರೆ ಟೆಸ್ಟ್‌ ಆಗಿ ಉಳಿಯುವುದಿಲ್ಲ. ಇದು ನನ್ನ ಸ್ಪಷ್ಟ ನಿಲುವು ಎಂದು ಕುಂಬ್ಳೆ ಹೇಳಿದ್ದಾರೆ.

ಐಸಿಸಿ ಕ್ರಿಕೆಟ್‌ ಸಮಿತಿಯ ಮುಖ್ಯಸ್ಥ ಕೂಡ ಆಗಿರುವ ಕುಂಬ್ಳೆ, ಟೆಸ್ಟ್‌ ಕ್ರಿಕೆಟ್‌ ಪಂದ್ಯವನ್ನು ನಾಲ್ಕು ದಿನಗಳಿಗೆ ಸೀಮಿತಗೊಳಿಸುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ಚರ್ಚಿಸಲಾಗಿತ್ತು ಎಂದು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಚರ್ಚೆ
ಎರಡು ವರ್ಷಗಳ ಹಿಂದೆಯೇ ಈ ಬಗ್ಗೆ ಚರ್ಚೆಯಾಗಿದೆ. ಆದರೆ, ನಾಲ್ಕು ದಿನದ ಟೆಸ್ಟ್‌ ಕಡ್ಡಾಯ ಮಾಡುವ ಕಡೆಗೆ ಯಾವುದೇ ದಿಟ್ಟ ಹೆಜ್ಜೆ ಇಡಲಾಗಿಲ್ಲ. ಇದನ್ನು ಮಾಡುವ ಅಗತ್ಯವಿದೆ ಎಂದು ನನಗನಿಸುತ್ತಿಲ್ಲ. ದಕ್ಷಿಣ ಆಫ್ರಿಕಾ-ಜಿಂಬಾಬ್ವೆ ಮತ್ತು ಇಂಗ್ಲೆಂಡ್‌-ಐಯರ್‌ಲ್ಯಾಂಡ್‌ ತಂಡಗಳ ನಡುವೆ 4 ದಿನಗಳ ಟೆಸ್ಟ್‌ ಪಂದ್ಯಗಳನ್ನು ಪ್ರಯೋಗಾರ್ಥವಾಗಿ ಆಡಿಸಲಾಗಿತ್ತು. ಆದರೆ, ಜಿಂಬಾಬ್ವೆ, ಐಯರ್‌ಲ್ಯಾಂಡ್‌ ಮತ್ತು ಅಫ್ಘಾನಿಸ್ಥಾನದಂತಹ ತಂಡಗಳ ಎದುರಷ್ಟೇ ಇದು ಸಾಧ್ಯ, ಎಂದು ಕುಂಬ್ಳೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next