ಮಣಿರತ್ನಂ ನಿರ್ದೇಶನದ, ಅನಿಲ್ ಕಪೂರ್ ನಟನೆಯ “ಪಲ್ಲವಿ ಅನುಪಲ್ಲವಿ’ ನೋಡಿದವರಿಗೆಲ್ಲ, ಅಲ್ಲೊಬ್ಬ ಡುಮ್‌ಡುಮ್ಮಕೆ ಇರುವ ಪೋರ ಕಾಡುತ್ತಾನೆ. “ಪ್ರಣಯರಾಜ’ ಶ್ರೀನಾಥ್ ಅವರ ಮಗ, ರೋಹಿತ್ ಆತ. ಇತ್ತೀಚೆಗೆ ಅನಿಲ್ ಕಪೂರ್ ಬೆಂಗಳೂರಿಗೆ ಬಂದಾಗ, 37 ವರ್ಷಗಳ ನಂತರ ರೋಹಿತ್, ಅವರನ್ನು ಮಾತನಾಡಿಸಿದರು. ರೋಹಿತ್ ಹೇಳಿದ ಕೆಲವು ನೆನಪುಗಳು ಇಲ್ಲಿ ದಾಖಲಾಗಿವೆ…
ಅದೇ ಮುಖ. ಸ್ವಲ್ಪವೂ ಹೊಳಪು ಕುಂದಿರಲಿಲ್ಲ. ಮುಖದ ತುಂಬ ಹಬ್ಬಿದ ನಗು. ಕಣ್ಣ ಹೊಳಪಲ್ಲೇ ಏನೋ ಮಾತಿತ್ತು. 37 ವರುಷದ ಹಿಂದೆ ಕಂಡಿದ್ದ ಚೆಲುವ ಅನಿಲ್ ಕಪೂರ್, ಮತ್ತೆ ಕ್ಲೋಸಪ್‌ನಲ್ಲಿ ನಿಂತಾಗ, “ಈ ಪುಣ್ಯಾತ್ಮ, ಸ್ವಲ್ಪನೂ ಬದಲಾಗಲಿಲ್ವಲ್ಲ’ ಅಂತನ್ನಿಸಿತಾದರೂ, ಕಣ್ಣ ಸುತ್ತ ಟಿಸಿಲೊಡೆದ ನಿರಿಗೆಗಳು, ಅನಿಲ್‌ನ ನಿಜವಾದ ವಯಸ್ಸು ಹೇಳುತ್ತಿದ್ದವು. ಅನಿಲ್‌ನನ್ನು ನೋಡಲೆಂದೇ, ಮೊನ್ನೆ ಬೆಂಗಳೂರು ಗಣೇಶೋತ್ಸವಕ್ಕೆ ಓಡೋಡಿ ಹೋಗಿದ್ದ ನನಗೆ, ಕೆಲ ಕ್ಷಣಗಳ ಭೇಟಿ, ಮತ್ತೆ “ಪಲ್ಲವಿ ಅನುಪಲ್ಲವಿ’ಯನ್ನು ನೆನಪಿಸುವಂತೆ ಮಾಡಿತು.
ಮಣಿರತ್ನಂ ನಿರ್ದೇಶನದ ಆ ಚಿತ್ರ ಶುರುವಾದಾಗ, ನನಗಿನ್ನೂ ಐದು ವರುಷ. ಪ್ರೀಕೆಜಿಯಲ್ಲಿದ್ದ ನಾನು, 1ನೇ ಕ್ಲಾಸ್‌ನ ಸಮೀಪ ಬರುವ ಹೊತ್ತಿಗೆ, ಆ ಚಿತ್ರ ಮುಗಿದಿತ್ತು. ಬರೋಬ್ಬರಿ ಮೂರು ವರುಷದ ಶೂಟಿಂಗು. ಅಪ್ಪ, ಅಮ್ಮ ಈಗಲೂ ಹೇಳ್ತಾರೆ, ಆ ದಿನಗಳಲ್ಲಿ ನಾನು ಯೂನಿಟ್ ಬಿಟ್ಟು ಬರಲಿಲ್ವಂತೆ. ಅನಿಲ್, ನನ್ನ ಜೊತೆ ಇದ್ದಷ್ಟು ಹೊತ್ತು, ಆಟಾಡ್ಕೊಂಡು, ಖುಷಿ ಖುಷಿಯಾಗಿ ಇರುತ್ತಿದ್ದರು. ಮಗುವಿನಂತಿದ್ದ ಅನಿಲ್ ಮನಸ್ಸು, ಮಗುವೇ ಆಗಿದ್ದ ನಾನು- ಇಬ್ಬರ ಕೆಮಿಸ್ಟಿಯೂ ವರ್ಕೌಟ್ ಆಗಿತ್ತು ಅಂತ ಕಾಣಿಸುತ್ತೆ. ಆಗ ಎಷ್ಟೋ ಸಲ, ಅವರೇ ನನಗೆ ಊಟ ಮಾಡಿಸುತ್ತಿದ್ದರು.
ಆ ಹೊತ್ತಿನಲ್ಲಿ ನಾನು, ಅನಿಲ್‌ಗಿಂತ ಚೆನ್ನಾಗಿ ಕನ್ನಡ ಮಾತಾಡುತ್ತಿದ್ದೆ. ಅದನ್ನು ನೋಡಿ, ಅವನು ವಿಸ್ಮಯದ ಕಣ್ಣು ತೆರೆಯುತ್ತಿದ್ದ. ಮೊದಲ ಚಿತ್ರವೇ ಪರಭಾಷೆಯಲ್ಲಿ ಇದ್ದಿದ್ದರಿಂದ, ಕನ್ನಡದ ಸಂಭಾಷಣೆ ಹೇಳಲು ಅವನು ತುಂಬಾ ಪರದಾಡೋನು. ಏನೋ ಹೇಳಲು ಹೋಗಿ, ಅದು ತಪ್ಪಾದಾಗ, ನಾನು ಲಕ್ಷ್ಮೀ ಬಿದ್ದೂ ಬಿದ್ದು ನಗುತ್ತಿದ್ದೆವು. ಅದು ಹಂಗಲ್ಲ, ಈ ಥರ ಹೇಳ್ಬೇಕು ಅಂತ ನಾನು ಹೇಳಿದಾಗ, ಸ್ವಲ್ಪವೂ ಸಿಟ್ಟಾಗುತ್ತಿರಲಿಲ್ಲ. ಎಷ್ಟೋ ಸಲ ನನ್ನ ಬಳಿ ಕನ್ನಡ ಹೇಳಿಸಿಕೊಂಡು, ಚಾಕ್ಲೆಟ್ ಕೊಡುತ್ತಿದ್ದ.
ನೀವು ಆ ಸಿನಿಮಾದಲ್ಲಿ ನೋಡಿ, ನಾನು ಕೆಲವೊಂದು ದೃಶ್ಯಗಳಲ್ಲಿ ಸ್ವೆಟರ್, ಮಂಕಿಕ್ಯಾಪ್ ಹಾಕಿಕೊಂಡಿದ್ದೆ. ಆಗ ನನಗೆ ಜ್ವರ ನೂರಾನಾಲ್ಕು ಡಿಗ್ರಿ ದಾಟಿತ್ತು. ಚಿತ್ರದ ಬಹುತೇಕ ಚಿತ್ರೀಕರಣ ಸಾಗಿದ್ದು, ಮರ್ಕೇರ (ಇಂದಿನ ಮಡಿಕೇರಿ), ಊಟಿಯಲ್ಲಿ. ಆ ಚಳಿಯಲ್ಲಿ, ಜ್ವರದಲ್ಲಿ ನಾನು ಕಂಪಿಸುತ್ತಿದ್ದಾಗ, ಅನಿಲ್ ಆಗಾಗ್ಗೆ ನನ್ನನ್ನು ಅಪ್ಪಿಕೊಂಡು, ಬೆಚ್ಚಗೆ ಮಾಡುತ್ತಿದ್ದ ನೆನಪು, ಈಗಲೂ ಕಾಡುತ್ತದೆ. ಲಕ್ಷ್ಮಿಯಂತೂ ಶಾಲು ಹೊದ್ದಿಸಿ, ನನಗೆ ಮೈ ತಂಪೇರದಂತೆ ನೋಡಿಕೊಳ್ಳುತ್ತಿದ್ದರು. ಚಿತ್ರದಲ್ಲಿ ನಾನು, ಅನಿಲ್‌ನ ತೊಡೆ ಮೇಲೆ ಕುಳಿತು ಅಂಬಾಸಡರ್ ಕಾರನ್ನು ಚಲಾಯಿಸುವಾಗ, ಪಾರ್ಕಿನಲ್ಲಿ ಮುಖಕ್ಕೆ ಮುಖ ಕೊಟ್ಟು ನೋಡುವ ದೃಶ್ಯವೆಲ್ಲ, ಅತ್ಯಂತ ಸಹಜವಾಗಿಯೇ ಮೂಡಿಬಂದವು. ಮಣಿರತ್ನಂ ಅವರು “ದೃಶ್ಯ ಹೀಗಿದೆ, ನಿಮಗೆ ಸರಿ ಅನ್ನಿಸಿದ್ದನ್ನು ಸಹಜವಾಗಿ ಮಾಡಿ’ ಎಂದು ನಮಗೇ ಸ್ವಾತಂತ್ರ್ಯ ಕೊಡುತ್ತಿದ್ದರು. ನಮಗೆ ರಿಹರ್ಸಲ್, ಗಿಹರ್ಸಲ್ ಏನೂ ಇದ್ದೇ ಇರಲಿಲ್ಲ.
ಆ ಚಿತ್ರ ಮುಗಿದು, ಶಾಲಾ ದಿನಗಳಿಗೆ ಬರುವ ಹೊತ್ತಿಗೆ, ನನಗೆ ಅನಿಲ್‌ನನ್ನು ನೋಡಬೇಕು ಅಂತ ಯಾವತ್ತೂ ಅನ್ನಿಸಲೇ ಇಲ್ಲ. ಕಾಲೇಜಿಗೆ ಬಂದಾಗ ಮಾತ್ರ, “ಪಲ್ಲವಿ ಅನುಪಲ್ಲವಿ’ ಚಿತ್ರದ ನೆನಪು ಯಾಕೋ ಕಾಡತೊಡಗಿತು. ಅಪ್ಪನ ಜೊತೆ ಒಮ್ಮೆ ಬಾಂಬೆಗೆ ಹೋದಾಗ, “ಇಷ್ಟು ದೂರ ಬಂದಿದ್ದೀನಿ, ಇಲ್ಲಿ ಅನಿಲ್‌ನ ಮನೆಯೆಲ್ಲಿ?’ ಅಂತ ಯೋಚಿಸಿದ್ದೂ ಇದೆ. ಒಂದ್ಹತ್ತು ವರ್ಷಗಳ ಹಿಂದೆ, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನನ್ನ ಅಮ್ಮ, ಅನಿಲ್‌ನನ್ನು ನೋಡಿ, “ನಾನು ಪಲ್ಲವಿ ಅನುಪಲ್ಲವಿಯ ರೋಹಿತ್‌ನ ಅಮ್ಮ’ ಅಂತೆಳಿದಾಗ, ಅವರ ಮುಖ ಅರಳಿತ್ತಂತೆ.
ಮೊನ್ನೆ ಮತ್ತೆ ಪರಿಚಯ ಮಾಡಿಕೊಂಡಾಗಲೂ, ಅದೇ ನಗುವೇ ಅವರ ಮುಖದಲ್ಲಿತ್ತು. ಇಷ್ಟು ದಿನ ಆ ಪೋರನನ್ನು ನೋಡಿಯೇ ಇರಲಿಲ್ವಲ್ಲ ಎನ್ನುವಷ್ಟರ ಮಟ್ಟಿಗೆ ಅವರ ನಗುಭಾವವಿತ್ತು. ನಾನು ಅವರನ್ನು, ಅವನು ನನ್ನನ್ನು ನೋಡಲು ಒಳಗೊಳಗೇ ಕಾತರಿಸುತ್ತಿದ್ದುದ್ದು, ಅಲ್ಲಿ ಸ್ಪಷ್ಟವಿತ್ತು. ಅವರು ನನ್ನ ಎವರ್‌ಗ್ರೀನ್ ನಟ. ಅವನ ಚಿತ್ರಗಳನ್ನು ಫಾಲೋ ಮಾಡುತ್ತಲೇ ಬಂದಿದ್ದೇನೆ. “ಪರಿಂದಾ’ದಲ್ಲಿ ನಾನಾ ಪಾಟೇಕರ್ ಜತೆಗಿನ ಕರಣ್, “ಬೇಟಾ’ದ ಮುಗ್ಧ ಚೆಲುವಿನ ರಾಜುವನ್ನು ನೋಡುವಾಗ, “ಪಲ್ಲವಿ ಅನುಪಲ್ಲವಿ’ಯ ವಿಜಯ್ ಜತೆಗಿನ ದಿನಗಳ ನೆನಪಿನ ರೀಲ್ ಯಾಕೋ, ನನ್ನನ್ನು ಸುತ್ತಿಕೊಳ್ಳುತ್ತದೆ.
ನಿರೂಪಣೆ: ಕೀರ್ತಿ ಕೋಲ್ಗಾರ್