ಬಹುಶಃ ಅಂಬರೀಶ್ ಮೊದಲ ಬಾರಿಗೆ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದು “ಅಂತ’ ಚಿತ್ರದಲ್ಲಿ. ಆ ಚಿತ್ರದಲ್ಲಿ ಅವರು ಸ್ಮಗ್ಲರ್‌ಗಳ ವಿರುದ್ಧ ಹೋರಾಡುವ ಶಿಷ್ಟ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದರು. ಅವರಿಗೆ ಇನ್ನೂ ದೊಡ್ಡ ಹೆಸರು ತಂದುಕೊಟ್ಟಿದ್ದು “ಚಕ್ರವ್ಯೂಹ’. ಈ ಚಿತ್ರದಲ್ಲಿ ಇಡೀ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಬುಡಸಮೇತ ಕಿತ್ತು ಹಾಕುವ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದರು.
ಆ ನಂತರ ಅಂಬರೀಶ್ ಎಂದೂ ಹಿಂದಿರುಗಿ ನೋಡುವಂಥಾ ಪ್ರಮೇಯವೇ ಬರಲಿಲ್ಲ. ಅದರ ನಂತರ ಅಂಬರೀಶ್ ಸಾಲು ಸಾಲು ಚಿತ್ರಗಳಲ್ಲಿ ಅದೇ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡರು. “ಗಜೇಂದ್ರ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಇದೇ ತರಹದ ಪಾತ್ರಗಳಲ್ಲಿ ಮುಂದುವರೆದರು. ಆ್ಯಂಗ್ರಿ ಯಂಗ್ ಮ್ಯಾನ್ ಜೊತೆಗೆ ಅಂಬರೀಶ್ ಇನ್ನೂ ಹಲವು ಪಾತ್ರಗಳಲ್ಲಿ ಅಭಿನಯಿಸಿದರು. ಆದರೆ, ಜನ ಅವರನ್ನ ಗುರುತಿಸಿದ್ದು ಆ್ಯಂಗ್ರಿ ಯಂಗ್ ಮ್ಯಾನ್ ಆಗಿಯೇ. ಅದಕ್ಕೆ ಕಾರಣವೂ ಇದೆ.
ಪೊಲೀಸ್ ಇನ್ಸ್‌ಪೆಕ್ಟರ್ ಆಗಲೀ, ಕಳ್ಳನಾಗಲೀ, ಸುಳ್ಳನಾಗಲೀ, ಪ್ರೇಮಿಯಾಗಲೀ, ಡಾಕ್ಟರ್ ಆಗಲೀ- ಎಲ್ಲೆಲ್ಲೂ ಅವರ ಮುಖದೊಳಗೊಬ್ಬ ಗಡಸು ಗಂಡಸು, ಎದೆಯಲ್ಲಿ ಕೆಚ್ಚು, ಕಣ್ಣಲ್ಲಿ ಮಚ್ಚು. ಅಂಬರೀಶ್ ಎಂದರೆ ಅಭಿಮಾನಿಗಳ ಪಾಲಿಗೆ ಹಾಗೇ ಇರಬೇಕು. ಮಧ್ಯೆಮಧ್ಯೆ ಅಂಬಿ “ಮೇಘ ಬಂತು ಮೇಘ’ ಅಂತ ಹಾಡಿದರು, “ಸಪ್ತಪದಿ’, “ಹೃದಯ ಹಾಡಿತು’, “ಮಿಡಿವ ಹೃದಯಗಳು’ಗಾಗಿ ತುಂಬ ಮೃದು ಪ್ರೇಮಿಯಾದರು,
“ಒಲವಿನ ಉಡುಗೊರೆ’ ತರುವ ಹತಾಶ ಪ್ರಿಯಕರನಾದರು, ಚಳಿ ಚಳಿ ಎನ್ನುತ್ತಾ ಅಂಬಿಕಾನನ್ನು ತಬ್ಬುವ ರಸಿಕನಾದರು, “ನಮ್ಮೂರ ಹಮ್ಮಿರ’ನಾದರು, “ನ್ಯೂಡೆಲ್ಲಿ’ಯ ಪತ್ರಿಕಾ ಸಂಪಾದಕರಾದರು, ಮಠಗಳ ಬಣ್ಣ ಬಯಲು ಮಾಡುವ “ಗುರು ಜಗದ್ಗುರು’ವಿನಲ್ಲಿ ಗುರುವಿಗೆ ಜಗದ್ಗರುವಾದರು. ದುಡಿದ ಹಣದಲ್ಲಿ ಒಂದಿಷ್ಟು ಉಳಿಸಿ ಥಿಯೇಟರ್‌ಗೆ ಬಂದು ಕುಳಿತರೆ ಹಣೆ ಮೇಲಿನ ಕೂದಲನ್ನು ಎಡಗೈಲಿ ಸರಿಸಿ ಬೆವರುತ್ತಾ,
ಖಳರನ್ನು ಕಣ್ಣಲ್ಲೇ ಬೆದರಿಸುತ್ತಾ ಫೈಟು ಮಾಡುವ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಅಂಬಿ ಕಂಡರು. ದೊಡ್ಡ ಕಣ್ಗಳು, ತಮ್ಮದೇ ವಿಶಿಷ್ಟ ಹೇರ್‌ಸ್ಟೈಲ್, ಎತ್ತರದ ವ್ಯಕ್ತಿತ್ವ, ಗಡಸು ದನಿಗಳು ಅಂಬರೀಶ್ ಅವರನ್ನು ನೆಚ್ಚಿನ ಹೀರೋ ಮಾಡಿದವು. ಅಂಬರೀಶ್ ನಂತರ ಹಲವು ನಾಯಕರು ಆ್ಯಂಗ್ರಿ ಯಂಗ್ ಮ್ಯಾನ್‌ಗಳಾಗಿ ವಿಜೃಂಭಿಸಿದರು. ಆದರೆ, ಕನ್ನಡದ ಮೊದಲ ಆ್ಯಂಗ್ರಿ ಯಂಗ್ ಮ್ಯಾನ್ ಎಂದರೆ ಅದು ಅಂಬರೀಶ್ ಮಾತ್ರ.