Advertisement

ಅಸಮರ್ಪಕ ಬರ ಕಾಮಗಾರಿಗೆ ಗರಂ

09:45 AM Jun 08, 2019 | Team Udayavani |

ಬಾದಾಮಿ: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಬರ ಅಧ್ಯಯನ ಕೈಗೊಂಡ ನಂತರ ಪಟ್ಟಣದಲ್ಲಿ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಬರ ಕಾಮಗಾರಿಗಳ ಕುರಿತು ಸಭೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಬರಗಾಲ ಕಾಮಗಾರಿಗೆ ಹಾಗೂ ಜನರು ಗುಳೆ ಹೋಗದಿರಲು ಯಾವೆಲ್ಲಾ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದೀರಿ? ಎಂದು ತಾಪಂ ಇ.ಒ ಭೀಮಪ್ಪ ಲಾಳಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಕಬ್ಬಲಗೇರಿಯಲ್ಲಿ 380 ಜನರಿಗೆ ಕೆರೆ ಹೂಳೆತ್ತುವ ಕೆಲಸ ನೀಡಲಾಗಿದೆ. ಆಡಗಲ್ನಲ್ಲಿಯೂ ಕೆಲಸ ನೀಡಲಾಗಿದೆ. ಒಬ್ಬರಿಗೆ ಪ್ರತಿದಿನ 249 ರೂ.ಗಳನ್ನು ನೀಡಲಾಗುತ್ತಿದೆ ಎಂದರು.

ಮಧ್ಯ ಪ್ರವೇಶಿಸಿದ ಮುಧೋಳ ಶಾಸಕ ಗೋವಿಂದ ಕಾರಜೋಳ, ತಾಲೂಕಿನಿಂದ ಯಾವ ಗ್ರಾಮದ ಎಷ್ಟು ಜನರು ಗುಳೆ ಹೋಗಿದ್ದಾರೆ ಎಂದು ಪ್ರಶ್ನಿಸಿದರು. ಆಗ ಅಧಿಕಾರಿ ಸಮರ್ಪಕ ಉತ್ತರ ನೀಡದಿದ್ದರಿಂದ ಕೋಪಗೊಂಡ ಕಾರಜೋಳ, ಜಿಲ್ಲೆಯಲ್ಲಿ 5,16,027 ಜನ, ತಾಲೂಕಿನಲ್ಲಿ 92,700 ಜನ ಗುಳೆ ಹೋಗಿದ್ದಾರೆ. ನೀವು ಜನರಿಗೆ ಕೇವಲ ಒಂದು ವಾರ ಕೆಲಸ ನೀಡಿ ಅವರೆಲ್ಲರೂ ಗುಳೆ ಹೋಗುವಂತೆ ಮಾಡಿದ್ದೀರಿ. ಬರ ನಿರ್ವಹಣೆಯಲ್ಲಿ ನೀವು ಸಂಪೂರ್ಣ ವಿಫಲರಾಗಿದ್ದು, ನೀವು ಆಡಳಿತ ನಡೆಸಲು ಅರ್ಹರಲ್ಲ ಎಂದು ಕಿಡಿಕಾರಿದರು.

ತಾಲೂಕಿನಲ್ಲಿ ಗೋ ಶಾಲೆ ಪ್ರಾರಂಭಿಸಿದ್ದೀರಾ?, ಮೇವು ಬ್ಯಾಂಕ್‌ ಸ್ಥಾಪಿಸಿದ್ದೀರಾ? ತಾಲೂಕಿನಲ್ಲಿ ಜಾನುವಾರುಗಳು ಎಷ್ಟಿವೆ ಎಂದು ಬಿಎಸ್‌ವೈ ಪ್ರಶ್ನೆಗಳ ಸುರಿಮಳೆ ಸುರಿಸಿದರು. ಈ ಪ್ರಶ್ನೆಗಳಿಗೆ ತಬ್ಬಿಬ್ಟಾದ ತಹಶೀಲ್ದಾರ್‌ ಉತ್ತರಿಸಲು ತಡವರಿಸುತ್ತ, ಗೋಶಾಲೆ ಪ್ರಾರಂಭಿಸಿಲ್ಲ. ಆದರೆ ಜಾನುವಾರುಗಳಿಗೆ 10 ಟನ್‌ ಮೇವನ್ನು 50*50 ರಂತೆ ಹರ್ಷ ಕಂಪನಿಯಿಂದ ಖರೀದಿಸಲಾಗಿದೆ ಎಂದರು.

ಶೀಘ್ರದಲ್ಲಿ ಜಿಪಂ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಿ, ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ, ಜನರಿಗೆ ಉದ್ಯೋಗ ಕಲ್ಪಿಸಿ, ಗುಳೆ ಹೋಗುವುದನ್ನು ತಪ್ಪಿಸಬೇಕು. ಗೋ ಶಾಲೆಗಳನ್ನು ತೆರೆದು ಜನರಿಗೆ ಅನುಕೂಲ ಕಲ್ಪಿಸಿ ಎಂದು ಉಪ ವಿಭಾಗಾಧಿಕಾರಿಗಳಿಗೆ ಯಡಿಯೂರಪ್ಪ ತಾಕೀತು ಮಾಡಿದರು.

Advertisement

ಈ ಸಂದರ್ಭದಲ್ಲಿ ಸಂಸದ ಪಿ. ಸಿಗದ್ದಿಗೌಡ್ರ, ಶಾಸಕರಾದ ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಲಕ್ಷ್ತ್ರಣ ಸವದಿ, ವಿಪ ಸದಸ್ಯ ಹನಮಂತ ನಿರಾಣಿ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ತಾ.ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಮಹಾಂತೇಶ ಮಮದಾಪುರ, ನಾಗರಾಜ ಕಾಚಟ್ಟಿ, ಅಣ್ಣಪ್ಪ ಹೊಸಮನಿ, ನಿಂಗಪ್ಪ ಹೊಸಮನಿ, ಮುತ್ತು ಉಳ್ಳಾಗಡ್ಡಿ, ಬಸವರಾಜ್‌ ಪಾಟೀಲ, ಭೀಮನಗೌಡ ಪಾಟೀಲ, ಉಪವಿಭಾಗಾಧಿಕಾರಿ ಜೆ.ಶಾಂತಾ, ತಹಶೀಲ್ದಾರ್‌ ಸುಹಾಸ ಇಂಗಳೆ, ಸಿ.ಎಸ್‌. ಅಂಗಡಿ ಹಾಗೂ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next