Advertisement

ಕರಾವಳಿಯಲ್ಲೂ ಭತ್ತಕ್ಕೆ ಅಂಗಮಾರಿ? ಬೆಳ್ತಂಗಡಿಯ ಬೆಳಾಲು, ಮೇಲಂತಬೆಟ್ಟಿನಲ್ಲಿ ಪತ್ತೆ

12:40 AM Sep 03, 2024 | Team Udayavani |

ಬೆಳ್ತಂಗಡಿ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಬ್ಯಾಕ್ಟೀರಿಯಾ ದುಂಡಾಣು ಅಂಗಮಾರಿ (Bacteria Blight) ರೋಗವು ಬೆಳ್ತಂಗಡಿ ತಾಲೂಕಿನ ಗದ್ದೆಯಲ್ಲಿ ಕಾಣಿಸಿಕೊಂಡಿದೆ.

Advertisement

ಅಂಗಮಾರಿ ಹೆಚ್ಚಾಗಿ ಬಯಲು ಸೀಮೆಯಲ್ಲಿ ಕಾಣಿಸಿಕೊಳ್ಳುವ ರೋಗ, ಕಾಲುವೆ ನೀರಿನ ಮೂಲಕ ಒಂದು ಭಾಗ ದಿಂದ ಮತ್ತೂಂದು ಭಾಗಕ್ಕೆ ಹರಡುತ್ತದೆ. ಆದರೆ ಈ ಬಾರಿ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಲಿಂಗಪ್ಪ ಪೂಜಾರಿ ಹಾಗೂ ಮೇಲಂತಬೆಟ್ಟು ಗ್ರಾಮದ ರಘುರಾಮ್‌ ಶೆಟ್ಟಿ ಅವರ ಭತ್ತದ ಗದ್ದೆಯಲ್ಲಿ ಈ ರೋಗದ ಲಕ್ಷಣ ಪತ್ತೆಯಾಗಿದ್ದು, ಇದರ ಬಗ್ಗೆ ಕೃಷಿ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಬ್ರಹ್ಮಾವರ ಭಾಗದಲ್ಲೂ ಈ ವರ್ಷದ ಮುಂಗಾರಿನಲ್ಲಿ ಸಸಿಮಡಿಯಲ್ಲೇ ಈ ರೋಗ ಲಕ್ಷಣ ಪತ್ತೆಯಾಗಿತ್ತು.

ರೋಗದ ಲಕ್ಷಣ
ಅಂಗಮಾರಿ ರೋಗವನ್ನು ಪತ್ತೆ ಹಚ್ಚುವುದು ಸ್ವಲ್ಪ ಕಷ್ಟದ ಕೆಲಸವಾಗಿದ್ದು, ಮೇಲ್ನೋಟಕ್ಕೆ ಸತುವಿನ ಕೊರತೆ, ಪೊಟ್ಯಾಷ್‌ ಮತ್ತು ಸಾರಜನಕದ ಜಂಟಿ ಕೊರತೆಯ ಲಕ್ಷಣಗಳಿಗೂ ಈ ರೋಗಕ್ಕೂ ಸಾಮ್ಯತೆ ಇದೆ. ಆದರೆ ಗರಿಗಳ ತುದಿ ಹಳದಿಯಾಗಿ ಮಡಚುವುದು ಹಾಗೂ ಒಣಗುವುದು ನಿರ್ದಿಷ್ಟವಾಗಿ ಈ ರೋಗದ ಲಕ್ಷಣ. ಭತ್ತದ ತೆನೆ ಬರುವ ಹಂತದಲ್ಲಿ ಕಾಣಿಸಿಕೊಂಡಲ್ಲಿ ಭತ್ತವು ಜೊಳ್ಳಾಗಿ (ಕಾಳುಗಳು ನಾಶವಾಗಿ) ಇಳುವರಿಗೆ ಹೊಡೆತ ಬೀಳುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದು ನೀರಿನಿಂದ ಹರಡುವ ರೋಗವಾಗಿದ್ದು, ಒಂದು ಬಾರಿ ಬಂದ ಸ್ಥಳದಲ್ಲಿ ಮುಂದಿನ ಬಾರಿಯೂ ಕಾಣಿಸಿಕೊಳ್ಳುವುದು. ಮೊದಲು ಗದ್ದೆಯ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬಂದು, ರೋಗದ ತೀವ್ರತೆ ಹೆಚ್ಚಿದಾಗ ಇಡೀ ಗದ್ದೆಯೇ ಸುಟ್ಟಂತೆ ಕಾಣಿಸುತ್ತದೆ. ತೆನೆ ಬಿಡುವ ಹಂತದಲ್ಲಿ ರೋಗ ಬಂದಲ್ಲಿ ಕಾಳು ಜೊಳ್ಳಾಗುತ್ತದೆ. ಬೆಳಾಲಿನ ಲಿಂಗಪ್ಪ ಪೂಜಾರಿ ಅವರ ಗದ್ದೆಯಲ್ಲಿ ಕಳೆದ ವರ್ಷ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದ್ದು, ಈ ವರ್ಷ ಮತ್ತೆ ಕಾಣಿಸಿಕೊಂಡಿದೆ. ಹೊಸ ಮಣ್ಣಿನಲ್ಲಿ ಗದ್ದೆ ಮಾಡಿ ಭತ್ತ ಬೆಳೆದಿದ್ದ ಮೇಲಂತಬೆಟ್ಟಿನ ರಘುರಾಮ್‌ ಶೆಟ್ಟರು ತಮ್ಮ ಗದ್ದೆಯಲ್ಲೂ ಈ ರೋಗ ಕಾಣಿಸಿಕೊಂಡಿದೆ ಎಂದಿದ್ದಾರೆ.

ನಿಯಂತ್ರಣ ವಿಧಾನ
ಪ್ರತೀ ಎಕ್ರೆಗೆ ಸ್ಟ್ರೆಪ್ಟೊಮೈಸಿನ್‌ 6 ಗ್ರಾಂ ಮತ್ತು ಕಾಪರ್‌ ಆಕ್ಸಿಕ್ಲೋರೈಡ್‌ 250 ಗ್ರಾಂ ಎರಡನ್ನೂ ಮಿಶ್ರಣ ಮಾಡಿ 200 ಲೀಟರ್‌ ನೀರಿಗೆ ಬೆರೆಸಿ ಒಂದೆರಡು ಬಾರಿ ಸಿಂಪಡಿಸಬೇಕು (ಗದ್ದೆಯಿಂದ ನೀರನ್ನು ಬಸಿದುಕೊಂಡು). ಸಾವಯವ ವಿಧಾನದಲ್ಲಿ ಗೋಬರ್‌ ಗ್ಯಾಸ್‌ನಿಂದ ಹೊರಬರುವ ಸೆಗಣಿ ಬಗ್ಗಡ (ಸ್ಲರಿ)ವನ್ನು ನೀರಿನ ಜತೆ ಗದ್ದೆಗೆ ಹಾಯಿಸಬೇಕು. ಬಿಸಿಲು ಕಡಿಮೆಯಾಗಿ ಮಳೆ ಇದ್ದಾಗ ರೋಗ ನಿಧಾನವಾಗಿ ಹತೋಟಿಗೆ ಬರುತ್ತದೆ.

Advertisement

ಈ ರೋಗ ಹೆಚ್ಚಾಗಿ ಕರಾವಳಿ ಭಾಗದಲ್ಲಿ ಕಂಡುಬರುವುದಿಲ್ಲ. ಅಂಗಮಾರಿ ರೋಗವು ತರಕಾರಿಗಳಲ್ಲಿ ಕಂಡುಬರುತ್ತದೆ. ಇದರ ಲಕ್ಷಣ ಬೆಂಕಿ ರೋಗದಂತೆ ಇರುತ್ತದೆ. ಜತೆಗೆ ಪೋಷಕಾಂಶ ಕೊರತೆಯಿಂದಲೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರ ಬಗ್ಗೆ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಚರ್ಚಿಸಲಾಗುವುದು.
-ಶಿವಶಂಕರ್‌ ದಾನೆಗೊಂಡರ್‌, ಜಂಟಿ ಕೃಷಿ ನಿರ್ದೇಶಕರು, (ಪ್ರಭಾರ)

ಇಂಥ ಸಮಸ್ಯೆಗಳು ಬಹಳ ವಿರಳ. ಬ್ಲೆ$çಟ್‌ ರೋಗ ಎಂಬುದು ಖಚಿತವಾಗಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ವಿವರ ಸಂಗ್ರಹಿಸಿದ್ದಾರೆ. ಭೂಮಿಯಲ್ಲಿ ಗಂಧಕ ಪೋಷಕಾಂಶ ಕೊರತೆಯಿಂದಲೂ ಇದು ಬರುವ ಸಾಧ್ಯತೆಯಿದೆ. ಮಾದರಿಯನ್ನು ಪಡೆದು ಪರಿಶೀಲಿಸಲಾಗುವುದು.
-ರಂಜಿತ್‌ ಟಿ.ಎಂ., ಸಹಾಯಕ ಕೃಷಿ ನಿರ್ದೇಶಕರು, ಬೆಳ್ತಂಗಡಿ

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next