Advertisement
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕುಟುಂಬ ಪಕ್ಷಗಳ ಟೀಕೆ ನೆಪವಷ್ಟೇ. ಪ್ರಧಾನಿಯವರ ಮೂಲಗುರಿ ಪ್ರಾದೇಶಿಕ ಪಕ್ಷಗಳ ಮೂಲೋತ್ಪಾಟನೆ. ಕಾಂಗ್ರೆಸ್ ನೆಲಕಚ್ಚಿದ ಮೇಲೆ ಬಿಜೆಪಿಗೆ ಪ್ರತಿ ರಾಜ್ಯದಲ್ಲಿ ಎದುರಾಗುತ್ತಿರುವ ರಾಜಕೀಯ ವೈರಿಗಳೆಂದರೆ ಪ್ರಾದೇಶಿಕ ಪಕ್ಷಗಳೇ. ಇಂಥ ಬಲಿಷ್ಠ ಪಕ್ಷಗಳನ್ನು ಮುಗಿಸಲು ಬಿಜೆಪಿ ಏನೆಲ್ಲ ಅಡ್ಡದಾರಿ ಹಿಡಿಯಿತು ಎನ್ನುವುದು ಗುಟ್ಟೇನಲ್ಲ ಎಂದಿದ್ದಾರೆ.
Related Articles
Advertisement
ದೇಶಕ್ಕೆ ಅಪಾಯ ಇರುವುದು ʼಕುಟುಂಬವಾದಿ ಪಕ್ಷಗಳಿಂದಲ್ಲ, ಬಿಜೆಪಿಯಂಥ ಕೋಮುವಾದಿ ಪಕ್ಷದಿಂದ.ʼ ಭಾವನಾತ್ಮಕವಾಗಿ ಜನರನ್ನು ಜಗಳಕ್ಕಿಳಿಸಿ ಜಾಗ ಹಿಡಿಯುವ ಪರಿಪಾಠ ಪ್ರಜಾಪ್ರಭುತ್ವದ ನಿಜವಾದ ದೊಡ್ಡ ಶತ್ರು. ಸಂವಿಧಾನಕ್ಕೆ ಗಂಡಾಂತರಕಾರಿ. ಮಾನ್ಯ ಮೋದಿ ಅವರಿಗೆ ಈ ವಿಷಯ ಗೊತ್ತಿಲ್ಲವೆಂದು ನಾನು ಭಾವಿಸುವುದಿಲ್ಲ. ಜಾತಿ, ಧರ್ಮ, ಸಂಸ್ಕೃತಿ, ಭಾಷೆ, ಆಹಾರ, ವ್ಯಾಪಾರ ಇತ್ಯಾದಿಗಳ ಮೂಲಕ ವಿವಿಧತೆಯಲ್ಲಿ ಏಕತೆ ಸಾಧಿಸಿದ್ದ ಭಾರತದ ಭಾವೈಕ್ಯತೆಯ ಬುಡಕ್ಕೆ ಕೊಡಲಿ ಹಾಕಿದವರು ಯಾರು? ಪ್ರಜಾಸತ್ತೆಯ ಅಖಂಡ ರಕ್ಷಕನಾದ ಸಂವಿಧಾನಕ್ಕೇ ಅಪಚಾರವೆಸಗಿ ʼಆಪರೇಷನ್ ಕಮಲʼವೆಂಬ ಅನೈತಿಕ ರಾಜಕಾರಣ ಆರಂಭ ಮಾಡಿದ್ದು ಯಾರು? ಕರ್ನಾಟಕದಲ್ಲಿ ಎರಡು ಸಲ ಬಿಜೆಪಿ ಸರಕಾರ ಬಂದಿದ್ದು ಹೇಗೆ? ರಾಜಮಾರ್ಗದಲ್ಲಿ ಬಂತಾ? ಇಲ್ಲ, ಶಾಸಕರನ್ನು ಸಂತೆಯಲ್ಲಿ ರಾಸುಗಳಂತೆ ನಿರ್ಲಜ್ಜವಾಗಿ ಖರೀದಿಸಿದ್ದರಿಂದಲೇ ಬಂದ ʼಅಕ್ರಮ ಸರಕಾರʼವಿದು! ಪ್ರಧಾನಿಯವರು ಇದನ್ನು ನಿರಾಕರಿಸುತ್ತಾರಾ? ಮೋದಿ ಅವರು ಈ ನೀತಿಹೀನ ಸರಕಾರಕ್ಕೆ ಅಧಿಕೃತ ಮುದ್ರೆ ಒತ್ತಿದ್ದು ಸುಳ್ಳಾ? ಕೋಟಿ ಕೋಟಿ ಲೂಟಿ ಹೊಡೆದು ಅಕ್ಕಪಕ್ಕದ ಪಕ್ಷಗಳ ಶಾಸಕರನ್ನು ಎಗರಿಸಿಕೊಂಡು ಹೋಗಿದ್ದು ದೇಶಕ್ಕೆ ಒಳ್ಳೆಯದಾ? ಯುವಜನರಿಗೆ ದಾರಿದೀಪವಾ? ಈ ಬಗ್ಗೆ ಮೋದಿ ಅವರ ಮನ್ ಕೀ ಬಾತ್ ಮೌನವಾಗಿದೆ! ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ದಾವೋಸ್ ಪ್ರವಾಸ ಯಶಸ್ವಿ, ರಾಜ್ಯದಲ್ಲಿ 5 ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆ ನಿರೀಕ್ಷೆ: ನಿರಾಣಿ
‘ಆಪರೇಷನ್ ಕಮಲವನ್ನೇ ರಾಷ್ಟ್ರೀಕರಣʼ ಮಾಡಿದ ಕಿರಾತಕ ರಾಜಕಾರಣಕ್ಕೆ ಮೌನಸಮ್ಮತಿ ತೋರಿದವರು ಮೋದಿ ಅವರಲ್ಲವೇ? ಜನಾದೇಶದಂತೆ ರಚನೆಯಾಗಿದ್ದ ಮಧ್ಯಪ್ರದೇಶದ ಸರಕಾರವನ್ನು ಕೆಡವಿದ್ದು ಇವರ ಪಕ್ಷವೇ ಅಲ್ಲವೆ? ಒಂದೆಡೆ ಸಂಸತ್ತು-ಸಂವಿಧಾನಕ್ಕೆ ಶಿರಸಾಷ್ಟಾಂಗ ನಮಸ್ಕಾರ! ಇನ್ನೊಂದೆಡೆ; ಆಪರೇಷನ್ ಕಮಲದ ಮೂಲಕ ಸಂವಿಧಾನದ ಶಿರಚ್ಛೇಧ! ಇದೆಂಥಾ ರಾಜಕಾರಣ? ಇದು ರಾಷ್ಟ್ರೀಯವಾದಿ ಪಕ್ಷದ ಸೋಗಲಾಡಿತನ ಎಂದು ಎಚ್ ಡಿಕೆ ಕಟುಮಾತುಗಳಲ್ಲಿ ಜರಿದಿದ್ದಾರೆ.
ಮುಖ್ಯಮಂತ್ರಿ ಸ್ಥಾನವನ್ನು ಕರ್ನಾಟಕದಲ್ಲಿ ಮಾರಾಟಕ್ಕೆ ಇಟ್ಟಿದ್ದು ಯಾರು? ಕುಟುಂಬ ರಾಜಕಾರಣದ ಪಕ್ಷವೋ? ಬಿಜೆಪಿಯೋ? “ರೂ.2,500 ಕೋಟಿ ಕೊಡಿ, ನಿಮ್ಮನ್ನು ಸಿಎಂ ಮಾಡುತ್ತೇವೆ” ಎಂದು ಕೇಳಿದ ಪಾರ್ಟಿ ಬಿಜೆಪಿ. ಇದನ್ನು ಹೇಳಿದ್ದು ಸ್ವತಃ ಬಿಜೆಪಿ ಶಾಸಕರೇ! ಆ ಶಾಸಕರ ವಿರುದ್ಧ ಒಂದು ನೊಟೀಸನ್ನೂ ಕೊಡಲಿಲ್ಲ. ಮೋದಿ ಅವರೂ ಸಿಎಂ ಕರ್ಚಿ ಮಾರಾಟದ ಬಗ್ಗೆ ಮಾತನಾಡಲಿಲ್ಲ. ಈ ಘನಘೋರ ಆರೋಪದ ಬಗ್ಗೆಯೂ ಅವರದ್ದು ಮುಂದುವರಿದ ಮೌನ! ಅಲ್ಲಿಗೆ ಶಾಸಕರ ಹೇಳಿಕೆ ಸತ್ಯ ಎಂದಾಯಿತಲ್ಲ. ಪಿಎಸ್ʼಐ ಹುದ್ದೆಗಳಂತೆ ಸಿಎಂ ಪದವಿಯನ್ನೂ ಮಾರಿಕೊಳ್ಳುವುದು ದೇಶಕ್ಕೆ ಸೌಭಾಗ್ಯವಾ? ಯುವಕರಿಗೆ ಆದರ್ಶವಾ? ಕುಟುಂಬ ರಾಜಕಾರಣದ ನೆಪವೊಡ್ಡಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ತಂತ್ರ ಫಲಿಸದು. ಭಾರತವೆಂದರೆ ಬಿಜೆಪಿಯಷ್ಟೇ ಅಲ್ಲ, 140 ಕೋಟಿಗೂ ಹೆಚ್ಚು ಭಾರತೀಯರು ಸೇರಿದರೆ ಮಾತ್ರ ಭಾರತ. ಪ್ರಧಾನಿಗಳು ಈ ಆಶಯವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.