Advertisement

ಜೋಶಿಮಠ: ಇನ್ನೂ ಹಲವೆಡೆ ಬಿರುಕು’ಸ್ಥಳೀಯರಲ್ಲಿ ಹೆಚ್ಚಿದ ಆತಂಕ

10:20 PM Jan 11, 2023 | Team Udayavani |

ಜೋಶಿಮಠ/ಡೆಹ್ರಾಡೂನ್‌: ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತದ ಆತಂಕದಿಂದ ಮನೆಗಳನ್ನು ತೆರವುಗೊಳಿಸುವ ಪ್ರಕ್ರಿಯೆಗಳು ಮುಂದುವರಿದಿವೆ. ಅದರ ನಡುವೆಯೇ ಇನ್ನೂ ಹಲವು ಸ್ಥಳಗಳಲ್ಲಿ ನೆಲವೇ ಕುಸಿದು ಹೋಗುವ ಭೀತಿಯ ಪರಿಸ್ಥಿತಿ ಉಂಟಾಗಿರುವುದು ಬೆಳಕಿಗೆ ಬಂದಿದೆ.

Advertisement

ತೆಹ್ರಿ ಘರ್ವಾಲ್‌ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ರಿಷಿಕೇಶ್‌-ಕರ್ಣಪ್ರಯಾಗ್‌ ರೈಲ್ವೇ ಕಾಮಗಾರಿಯಿಂದಾಗಿ ಸ್ಥಳೀಯರಿಗೆ ಭೀತಿ ಉಂಟಾಗಿದೆ. ತೆಹ್ರಿ ಜಿಲ್ಲೆಯ ಅಟಾಲಿ ಗ್ರಾಮದಲ್ಲಿ ಕಾಮಗಾರಿ ನಿಮಿತ್ತ ಕೈಗೊಳ್ಳಲಾಗಿರುವ ಟನೆಲ್‌ ನಿರ್ಮಾಣದಿಂದ ಸ್ಥಳೀಯರ ಮನೆಗಳ ಗೋಡೆಗಳಲ್ಲಿ ಬಿರುಕು ಉಂಟಾಗಿದೆ.

ಜೋಶಿಮಠದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸ್ಥಳಕ್ಕೆ ಧಾವಿಸಿ, ಸ್ಥಳೀಯರಿಗೆ ನೆರವು ನೀಡಲು ಮುಂದಾಗಿದ್ದಾರೆ. ಗುಲಾರ್‌, ವ್ಯಾಸಿ ಸೇರಿದಂತೆ ಇತರ ಗ್ರಾಮಗಳಲ್ಲಿಯೂ ತೊಂದರೆಯಾಗಿದೆ. ಇನ್ನೊಂದೆಡೆ, ಪೌರಿಯಲ್ಲಿಯೂ ಇದೇ ರೈಲ್ವೇ ಮಾರ್ಗದ ಕಾಮಗಾರಿಯಿಂದ ಸ್ಥಳೀಯರಿಗೆ ತೊಂದರೆಯಾಗಿದೆ.

ಬಾಗೇಶ್ವರಿಯ ಖರ್ಬಾಗದ್‌ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿ ಇರುವ ಜಲವಿದ್ಯುತ್‌ ಯೋಜನೆಗಾಗಿ ಸುರಂಗ ನಿರ್ಮಿಸಲಾಗುತ್ತಿದೆ. ಅದಕ್ಕಾಗಿ ಸ್ಫೋಟ ಕಾರ್ಯ ನಡೆಸಲಾಗುತ್ತಿದೆ. ಆ ಸ್ಥಳದಿಂದ ನಿರಂತರವಾಗಿ ನೀರು ಹೊರಕ್ಕೆ ಬರುತ್ತಿರುವುದು ಸ್ಥಳೀಯರನ್ನು ಚಿಂತೆಗೀಡು ಮಾಡಿದೆ. ಕಾಪ್‌ಕೋಟ್‌ ಎಂಬ ಗ್ರಾಮದಲ್ಲಿ ಭೂಕುಸಿತವೂ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ 60 ಕುಟುಂಬಗಳು ಇವೆ.

ರುದ್ರಪ್ರಯಾಗ್‌ ಜಿಲ್ಲೆಯ ಮರೋಡಾ ಗ್ರಾಮದಲ್ಲಿಯೂ ಕೂಡ ರಿಷಿಕೇಶ್‌-ಕರ್ಣಪ್ರಯಾಗ್‌ ನಡುವಿನ ರೈಲ್ವೇ ಕಾಮಗಾರಿಯಿಂದಾಗಿ ಮನೆಗಳಲ್ಲಿ ಬಿರುಕು ಮೂಡಿದೆ.

Advertisement

ಉತ್ತರಕಾಶಿಯ ಮಸ್ತದಿ ಮತ್ತು ಭಟ್ವಾಡಿ ಗ್ರಾಮಗಳಲ್ಲಿ ಅಪಾಯ ಎದುರಾಗಿದೆ. ಅಲ್ಲಿ 1991ರಲ್ಲಿ ಭೂಕಂಪ ಉಂಟಾದ ಬಳಿಕ ಸ್ಥಳೀಯರಿಗೆ ವಿವಿಧ ರೀತಿಯಲ್ಲಿ ಅನಾನುಕೂಲಗಳು ಎದುರಾಗಿವೆ. 1995 ಮತ್ತು 1996ರಲ್ಲಿ ಮನೆಯೊಳಗಿನಿಂದ ನೀರು ಹೊರಕ್ಕೆ ಬರುತ್ತಿರುವುದು ಇನ್ನೂ ನಿಂತಿಲ್ಲ.

ಅಲಿಗಢದಲ್ಲಿ:
ಉತ್ತರ ಪ್ರದೇಶದ ಅಲಿಗಢದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಅನ್ವಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದಕ್ಕಾಗಿ ಬೃಹತ್‌ ಪೈಪ್‌ಗಳನ್ನು ನೆಲದ ಅಡಿಯಲ್ಲಿ ಹಾಕುವ ನಿಟ್ಟಿನಲ್ಲಿ ಅಗೆತ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ, ಹಲವು ಮನೆಗಳಲ್ಲಿ ಬಿರುಕು ಉಂಟಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು, ಸ್ಥಳಕ್ಕೆ ಪರಿಣತರ ತಂಡ ಕಳುಹಿಸಿ ಅವರು ನೀಡಿದ ನೀಡಿದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.

ಪ್ರತಿ 1.75 ಲಕ್ಷ ರೂ ನೆರವು
ಉತ್ತರಕಾಶಿಯಲ್ಲಿ ತೊಂದರೆಗೀಡಾಗಿರುವ ಪ್ರತಿ ಕುಟುಂಬಕ್ಕೆ ತಕ್ಷಣದ ಪರಿಹಾರವೆಂದು 1.75 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಹೇಳಿದ್ದಾರೆ. ಜತೆಗೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ನಡೆದಿದೆ ಎಂದಿದ್ದಾರೆ. ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಿಎಂ ಜತೆ ಮಾತನಾಡಿದ್ದಾರೆ. ಬಿರುಕು ಬಿಟ್ಟ ಕಟ್ಟಡಗಳಿಂದ ತೆರಳುವುದಿಲ್ಲ ಎಂದು ಪಟ್ಟುಹಿಡಿದವರ ಮನವೊಲಿಕೆ ಕಾರ್ಯವೂ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next