ಜೆಸ್ಕಾಂ ವ್ಯಾಪ್ತಿಯಲ್ಲಿ ಸುಟ್ಟು ಹೋಗಿರುವ ಟ್ರಾನ್ಸ್ ಫಾರ್ಮರ್‌ಗಳನ್ನು ಸಕಾಲದಲ್ಲಿ ಬದಲಾಯಿಸುವಂತೆ ಕೋರಿ ಕಲಬುರಗಿ ಕೇಂದ್ರ ಕಚೇರಿಯ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿದರೆ ಸ್ವೀಕರಿಸಿಲ್ಲ. ಈ ಅಧಿಕಾರಿ ಯಾವುದೇ ವಿಭಾಗಕ್ಕೆ ಭೇಟಿ ನೀಡುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ಸಭೆ ಕರೆದು ಚರ್ಚೆಯನ್ನೂ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ರೈತರ ಕೃಷಿ ಪಂಪ್‌ಸೆಟ್ ಬಳಕೆಗೆ ತೊಂದರೆಯಾಗುತ್ತಿದೆ. ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ರಾಯರಡ್ಡಿ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಇದು ಮಾಧ್ಯಮದಲ್ಲಿ ಸುದ್ದಿಯಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಅಧಿಕಾರಿಗಳ ಸಭೆ ನಡೆಸುವಂತೆ ಸೂಚಿಸಿದ್ದು, ಸೆ.5ರಂದು ಜೆಸ್ಕಾಂ ಅಧಿಕಾರಿಗಳ ಜತೆಗೆ ಸಭೆ ಆಯೋಜಿಸಲಾಗಿದೆ.
ಯಲಬುರ್ಗಾ-ಕುಕನೂರು ತಾಲೂಕಿನ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಭೆಯನ್ನು ಶಾಸಕ ರಾಯರಡ್ಡಿ ಕುಕನೂರು ನಿರೀಕ್ಷಣ ಮಂದಿರದಲ್ಲಿ ಆಯೋಜಿಸಿದ್ದರು. ಸಭೆಯಲ್ಲಿದ್ದ ಜೆಸ್ಕಾಂ ಅಧಿಕಾರಿಗಳು ಯಲಬುರ್ಗಾ- ಕುಕನೂರು ತಾಲೂಕಿನಾದ್ಯಂತ 100ಕ್ಕಿಂತ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗಿವೆ. 100ಕ್ಕಿಂತ ಹೆಚ್ಚು ಟಿಸಿಗಳನ್ನು ವಿವಿಧ ಹಂತದಲ್ಲಿ ಅಳವಡಿಸುವುದಕ್ಕೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಒಟ್ಟು 200 ಟಿಸಿಗಳ ಅಗತ್ಯವಿರುವುದನ್ನು ಒಪ್ಪಿಕೊಂಡಿರುತ್ತಾರೆ. ಇದೇ ಪರಿಸ್ಥಿತಿ ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳಲ್ಲೂ ಇರುತ್ತದೆ. ಕೊಪ್ಪಳ, ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ಯಾದಗಿರಿ, ವಿಜಯನಗರ ಜಿಲ್ಲೆಗಳ ರೈತರಿಗೆ ಇದರಿಂದ ಸಮಸ್ಯೆಯಾಗಿರುತ್ತದೆ. ಕಳೆದ 2 ತಿಂಗಳಿಂದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಟಿಸಿ ಅಳವಡಿಕೆ ಹಾಗೂ ಬದಲಾವಣೆ ಸಾಧ್ಯವಾಗಿರುವುದಿಲ್ಲ. ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಗಾಗಿ ಪಂಪ್‌ಸೆಟ್ ನೆಚ್ಚಿಕೊಂಡಿರುವುದರಿಂದ ಏಕಾಏಕಿ ಓವರ್ ಲೋಡ್ ಸಮಸ್ಯೆಯಾಗುತ್ತಿದೆ. ಅದೇ ರೀತಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಹೊಸ ಪಂಪ್‌ಸೆಟ್‌ಗಳಿಗೆ ಸಂಪರ್ಕ ನೀಡಬೇಕಿದೆ. ಆದರೆ ಈ ಎಲ್ಲ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸಿಲ್ಲ. ಈ ಬಗ್ಗೆ ಶಾಸಕರು ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಹೀಗಾಗಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಅಧೀಕ್ಷಕ, ಕಾರ್ಯ ನಿರ್ವಾಹಕ ಅಭಿಯಂತ, ಕೆಪಿಟಿಸಿಎಲ್ ಅಧಿಕಾರಿಗಳು ಹಾಗೂ ಇಂಧನ ಸಚಿವರನ್ನು ಕರೆದು ಸಮಸ್ಯೆ ಬಗ್ಗೆ ಚರ್ಚಿಸಬೇಕೆಂದು ರಾಯರಡ್ಡಿ ಅವರು ಪತ್ರದಲ್ಲಿ ಕೋರಿದ್ದರು.