ಹಾಸನ: ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ಹಾಸನ ತಾಲೂಕು ಪ್ರಭಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರು ಧರಣಿ ನಡೆಸಿದರು.
ಮಾನಸಿಕ ಹಿಂಸೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಎದುರು ಸಿಐಟಿಯು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೌಕರರು, ಪ್ರಭಾರಿ ಸಿಡಿಪಿಒ ಕಿರುಕುಳ ಮತ್ತು ದೌರ್ಜನ್ಯ ಸಹಿಸದೇ ಹಾಸನ ತಾಲೂಕು ದೊಡ್ಡಮಲ್ಲೇನಹಳ್ಳಿ ಅಂಗನವಾಡಿ ಕಾರ್ಯಕರ್ತೆ ಎನ್. ಸುಶೀಲಮ್ಮ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕಾರ್ಯಕರ್ತೆ ಎನ್. ಸುಶೀಲಮ್ಮ ಅವರು ಕಿರುಕುಳ ತಾಳಲಾರದೇ ಮಾ. 2ರಂದು ಸಿಡಿಪಿಒ ಕಚೇರಿಯಲ್ಲಿಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದರು. ಈಗ ಅವರನ್ನು ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಂತ್ರಸ್ತೆಗೆ ಪರಿಹಾರ ಕೊಡಿ: ಹಾಸನ ತಾಲೂಕಿನ ಪ್ರಭಾರ ಸಿಡಿಪಿಒ ಕ್ಷುಲ್ಲಕ ಕಾರಣಗಳಿಗಾಗಿ ಸುಶೀಲಮ್ಮ ಅವರಿಗೆ ಕಿರುಕುಳ ನೀಡಿ, ಕೆಲಸದಿಂದ ಕಿತ್ತುಹಾಕುವ ಬೆದರಿಯೊಡ್ಡಿದ್ದರಿಂದ ಸುಶೀಲಮ್ಮ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೊಳಗಾಗಿರುವ ಅಂಗನವಾಡಿ ಕಾರ್ಯಕರ್ತೆಗೆ ಪರಿಹಾರ ನೀಡಬೇಕು. ಚಿಕಿತ್ಸಾ ವೆಚ್ಚವನ್ನೂ ಭರಿಸಬೇಕು ಎಂದೂ ಪ್ರತಿಭಟನಾಕಾರರು ಒತ್ತಾಯಿಸಿ ಮನವಿ ಸಲ್ಲಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಮುಖಂಡರಾದ ನವೀನ್ ಕುಮಾರ್, ಪೃಥ್ವಿ, ಅರವಿಂದ್, ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಇಂದಿರಮ್ಮ, ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಖಜಾಂಚಿ ಶೈಲಜಾ, ತಾಲೂಕು ಕಾರ್ಯದರ್ಶಿ ಜಯಂತಿ, ಖಜಾಂಚಿ ಮೀನಾಕ್ಷಿ, ತಾಲೂಕು ಉಪಾಧ್ಯಕ್ಷೆ ಮಂಜುಳ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.