Advertisement

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಕ್ತು ಆಶ್ರಯ ಮನೆ ಹಕ್ಕುಪತ್ರ

12:21 PM Apr 04, 2017 | |

ದಾವಣಗೆರೆ: ಸರ್ಕಾರದ ಸವಲತ್ತು ಪಡೆದ ಫಲಾನುಭವಿಗಳು ಅದನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹೇಳಿದ್ದಾರೆ. ಎಸ್‌ಒಜಿ ಕಾಲೋನಿಯಲ್ಲಿ ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಂಜೂರಾಗಿದ್ದ ಮನೆಗಳ ಹಕ್ಕುಪತ್ರಗಳನ್ನು ಸೋಮವಾರ ತಮ್ಮ ನಿವಾಸದ ಆವರಣದಲ್ಲಿ ವಿತರಿಸಿ, ಮಾತನಾಡಿದರು.

Advertisement

ಸರ್ಕಾರ ಅನೇಕ ಯೋಜನೆ ಮೂಲಕ ಸವಲತ್ತು ನೀಡಲಿದೆ. ಅವನ್ನು ಸದುಪಯೋಗ ಪಡೆಸಿಕೊಳ್ಳಲು ಜನರು ಮುಂದಾಗಬೇಕು ಎಂದರು. ಬೆಂಗಳೂರಿನಲ್ಲಿ ಕಳೆದ ವಾರ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವೇಳೆ ಹೋರಾಟಗಾರರೊಂದಿಗೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದು,

ಉಪ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಆಶ್ವಾಸನೆ ನೀಡದೇ ಏ.10ರಂದು ಸಭೆ ಕರೆದಿದ್ದು ಅಂದಿನ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ ಶೇ.90ರಷ್ಟು ಗೌರವಧನ ನೀಡಬೇಕು.

ಆದರೆ, ಕೇಂದ್ರ ಸರ್ಕಾರ ಜನವಿರೋಧಿ ಧೋರಣೆ ಅನುಸರಿಸುತ್ತಿದ್ದು, ಕೇವಲ ಶೇ.40ರಷ್ಟು ಮಾತ್ರ ಸಹಾಯಧನ ನೀಡುತ್ತಿದೆ. ಆದರೆ, ನಮ್ಮ ಸರ್ಕಾರ ಜನಪರವಾಗಿದ್ದು, ಗೌರವಧನದಲ್ಲಿ ಯಾವುದೇ ಕಡಿತ ಮಾಡದೇ ಈಗಿರುವ 6,000 ರೂ. ಮುಂದುವರಿಸಿದೆ ಎಂದು ಅವರು ಹೇಳಿದರು. 

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಬಡವರಿಗೂ ಸೂರು ಸಿಗಬೇಕೆಂಬ ಕಾಂಗ್ರೆಸ್‌ ಪಕ್ಷದ ಆಶಯದಂತೆ ನೀಡಿರುವ ಆಶ್ರಯ ಮನೆಗಳನ್ನು ಯಾರೂ ಸಹ ಪರಭಾರೆ ಮಾಡದೇ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. 

Advertisement

ಈ ಹಿಂದೆ ಮಲ್ಲಿಕಾರ್ಜುನ್‌ ಜಿಲ್ಲಾ ಸಚಿವರಾಗಿದ್ದಾಗ 14ರಿಂದ 15 ಸಾವಿರ ಆಶ್ರಯ ಮನೆಗಳನ್ನು ನಿರ್ಮಿಸಿ, ಅರ್ಹ ಬಡವರಿಗೆ ಹಂಚಿಕೆ ಮಾಡಲಾಗಿತ್ತು, ಮತ್ತೆ ಕಾಂಗ್ರೆಸ್‌ ಪಕ್ಷ ಅಧಿಧಿಕಾರಕ್ಕೆ ಬಂದ ನಂತರ ಆ ಮನೆಗಳ ಸಾಲವನ್ನು ಮನ್ನಾ ಮಾಡಿ ಇಂದು ಎಲ್ಲಾ ಆಶ್ರಯ ಮನೆಗಳ ಸ್ವಾಧೀನಪತ್ರ ವಿತರಿಸಲಾಗಿದೆ ಎಂದರು. 

ಮನೆ ಒತ್ತೆ ಇಟ್ಟು ಯಾರೂ ಕೂಡ ಸಾಲ ಮಾಡದೇ ತಮ್ಮ ದುಡಿಮೆಯ ಮೂಲಕ ಸರಳ ಜೀವನ ನಡೆಸಿ. ನಗರದಲ್ಲಿ ಬಹಳಷ್ಟು ಜನ ಇನ್ನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಅವರಿಗೆ ಸ್ವಂತ ಮನೆ ನಿರ್ಮಿಸಲು ಜಮೀನು  ನೋಡಲಾಗುತ್ತಿದೆ. ಜಮೀನು ದೊರೆತ ತಕ್ಷಣ ಇನ್ನು 10 ಸಾವಿರಕ್ಕೂ ಆಶ್ರಯ ಮನೆಗಳನ್ನು ನಿರ್ಮಿಸಿ ಅರ್ಹರಿಗೆ ಹಂಚಿಕೆ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಮಿಕ ಮುಖಂಡ ಎಚ್‌. ಕೆ.ರಾಮಚಂದ್ರಪ್ಪ ಮಾತನಾಡಿ, ಬಡವರ ಪರ ಕೆಲಸ ಮಾಡುವವರ ಪರವಾಗಿ ನಾವು ಇದ್ದೇವೆ. ಈ ಹಿಂದೆ ಮಲ್ಲಿಕಾರ್ಜುನ್‌ ಸಚಿವರಾಗಿದ್ದಾಗ ವಿನಂತಿಸಿದಂತೆ 120 ಅಂಗನವಾಡಿ ಕಾರ್ಯಕರ್ತೆಯರಿಗೆ ಮನೆಗಳನ್ನು ನೀಡಿದ್ದರು ಎಂದು ತಿಳಿಸಿದರು. 

ಶ್ರೀಮತಿ ಪ್ರಭಾ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಮೇಯರ್‌ ರೇಖಾ ನಾಗರಾಜ್‌, ಉಪ ಆಯುಕ್ತ ಜಿ.ಎಂ. ರವೀಂದ್ರ, ಪಾಲಿಕೆ ಸದಸ್ಯರಾದ ಮಂಜುಳಮ್ಮ, ಅಬ್ದುಲ್‌ ಲತೀಫ್‌, ಆಶ್ರಯ ಸಮಿತಿ ಸದಸ್ಯರಾದ ಜರೀನಾ, ಕೆ.ಪಿ. ರವಿ ಧಣಿ, ನಿಟುವಳ್ಳಿ ಶ್ಯಾಮ್‌, ಸ್ಥಳೀಯ ಮುಖಂಡರಾದ ಪಾಮೇನಹಳ್ಳಿ ನಾಗರಾಜ್‌, ಆವರಗೆರೆ ಚಂದ್ರು, ಗೋವಿಂದನಾಯ್ಕ ಇತರರು ಈ ಸಂದರ್ಭದಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next