Advertisement

ಅಂಗನವಾಡಿ ಮೇಲ್ದರ್ಜೆಗೆ ಹೋರಾಟ

11:12 AM Jan 24, 2019 | |

ರಾಯಚೂರು: ಎಲ್‌ಕೆಜಿ, ಯುಕೆಜಿ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಮೂಲಕ ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಾಲೆಗಳಾಗಿ ಪರಿವರ್ತಿಸಬೇಕು ಎಂಬ ಬೇಡಿಕೆಯೊಂದಿಗೆ ಪ್ರಬಲ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷೆ ಶಾಂತಾ ಎನ್‌.ಗಂಟಿ ತಿಳಿಸಿದರು.

Advertisement

ನಗರದ ಜೆಸಿ ಭವನದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) 6ನೇ ಜಿಲ್ಲಾ ಸಮ್ಮೇಳನದ 2ನೇ ದಿನ ನಡೆದ ಪ್ರತಿನಿಧಿಗಳ ಅಧಿವೇಶನದಲ್ಲಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಂಗನವಾಡಿ ದುರ್ಬಲ ಮಾಡುವ ಹುನ್ನಾರ ನಡೆಸಿವೆ. ಐಸಿಬಿಎಸ್‌ ಯೋಜನೆ ಶುರುವಾಗಿ ನಾಲ್ಕು ದಶಕಗಳಾಗುತ್ತಿದ್ದು, ಕೇವಲ 150 ರೂ.ನಿಂದ ನೌಕರರು ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ, ಅವರಿಗೆ ಉದ್ಯೋಗ ಭದ್ರತೆಯಾಗಲಿ, ಕನಿಷ್ಠ ವೇತನವಾಗಲಿ ಸಿಕ್ಕಿಲ್ಲ. ಸರ್ಕಾರಗಳ ಇಂಥ ಧೋರಣೆ ವಿರುದ್ಧ ನೌಕರರು ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ ಎಂದರು.

ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾರ್ಮಿಕ ವಿರೋಧಿ ನೀತಿಯನ್ನೇ ಅನುಸರಿಸುತ್ತಿದೆ. ಮುಖ್ಯವಾಗಿ ಮಹಿಳೆ ನೌಕರರಿಗಾಗಿ ರೂಪಿಸಿದ ಯೋಜನೆಗಳಿಗೆ ಅನುದಾನ ಕಡಿತ ಮಾಡುವ ಮೂಲಕ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿವೆ. ಕಾರ್ಮಿಕರ ಹಕ್ಕುಗಳನ್ನು ಕೂಡ ತಿದ್ದುಪಡಿ ಮಾಡಿ ಕಾರ್ಮಿಕರ ಬದುನಕನ್ನೇ ಅತಂತ್ರಗೊಳಿಸುತ್ತಿದೆ. ಈ ನೀತಿಗಳ ವಿರುದ್ಧ ಪ್ರಬಲ ಹೋರಾಟ ರೂಪಿಸುವ ನಿಟ್ಟಿನಲ್ಲಿ ಜ.30ರಿಂದ ಫೆ.1ರವರೆಗೆ ಬೀದರ್‌ನಲ್ಲಿ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.

ವಿಮಾ ನೌಕರರ ಸಂಘದ ಕಲಬುರಗಿ ವಿಭಾಗ ಮಟ್ಟದ ಕಾರ್ಯದರ್ಶಿ ಎಂ.ರವಿ ಮಾತನಾಡಿ, ಸರ್ಕಾರ ಖಾಸಗೀಕರಣ ನೀತಿ ಹೆಚ್ಚಾಗಿ ಪಾಲಿಸುತ್ತಿದ್ದು, ಕಾರ್ಮಿಕ ವಲಯ ಅಕ್ಷರಶಃ ಆತಂಕಕ್ಕೊಳಗಾಗಿದೆ. ಸೌಲಭ್ಯ ನೀಡದೆ ಕಾರ್ಮಿಕರ ಶೋಷಣೆ ಮಾಡುತ್ತಿವೆ. ಸಾರ್ವಜನಿಕ ಉದ್ಯಮಗಳನ್ನೂ ಖಾಸಗೀಕರಣ ಮಾಡುವ ಮೂಲಕ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರನ್ನು ಬೀದಿಗೆ ತರುವಂಥ ಕಾನೂನು ರೂಪಿಸುತ್ತಿವೆ. ಇದರ ವಿರುದ್ಧ ನಡೆಯುವ ಎಲ್ಲ ಹೋರಾಟಗಳಿಗೆ ನಮ್ಮ ಸಂಘಟನೆ ಸದಾ ಬೆಂಬಲಿಸಲಿದೆ ಎಂದರು.

ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಸುಲೋಚನಾ, ಎಂ.ಶರಣಗೌಡ ಮಾತನಾಡಿದರು. ಸಂಘಟನೆ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ವರಲಕ್ಷ್ಮೀ, ರಂಗಮ್ಮ ಅನ್ವರ ಇತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next