Advertisement

ಇಂದಿನಿಂದ ಅಂಗನವಾಡಿಗಳಲ್ಲಿ ಚಿಣ್ಣರ ಕಲರವ

07:20 PM Nov 07, 2021 | Team Udayavani |

ಉಡುಪಿ: ಕೋವಿಡ್‌-19 ಕಾರಣದಿಂದ ಸುಮಾರು 1.5 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಜಿಲ್ಲೆಯ ಎಲ್ಲ ಅಂಗನವಾಡಿಗಳಲ್ಲಿ ಪುಟ್ಟ ಮಕ್ಕಳ ನಗುವಿನ ಕಲರವ ಇಂದಿನಿಂದ ಆರಂಭಗೊಳ್ಳಲಿದೆ.

Advertisement

ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಡುಪಿ ಜಿಲ್ಲೆಯ ಉಡುಪಿ, ಬ್ರಹ್ಮಾವರ, ಕುಂದಾಪುರ ಮತ್ತು ಕಾರ್ಕಳದ ಒಟ್ಟು 4 ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ವ್ಯಾಪ್ತಿಯ 1191 ಅಂಗನವಾಡಿಗಳನ್ನು ಈಗಾಗಲೇ ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದೆ. ಕೇಂದ್ರಗಳ ಒಳ ಮತ್ತು ಹೊರ ಆವರಣಗಳನ್ನು, ಕಿಟಕಿ, ಬಾಗಿಲು, ಶೌಚಾಲಯಗಳನ್ನು ಸ್ವತ್ಛಗೊಳಿಸಲಾಗಿದೆ. ಕೇಂದ್ರದಲ್ಲಿ ಮಕ್ಕಳು ಕುಳಿತುಕೊಳ್ಳುವ ಡೆಸ್ಕ್, ಕುರ್ಚಿ,ಆಟಿಕೆ ಸಾಮಾನುಗಳನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಗಿದ್ದು, ಪೌಷ್ಟಿಕ ಆಹಾರ ತಯಾರಿಸುವ ಎಲ್ಲ ಪಾತ್ರೆ/ಲೋಟ/ ಕುಕ್ಕರ್‌ಗಳನ್ನು ಸ್ವತ್ಛಗೊಳಿಸಲಾಗಿದೆ.

ಕಾರ್ಯಕತೆರ್ಯರಿಗೆ ಲಸಿಕೆ
ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಕಡ್ಡಾಯವಾಗಿ 2 ಡೋಸ್‌ ಕೋವಿಡ್‌ ಲಸಿಕೆ ನೀಡಿದ್ದು, ಎರಡೂ ಲಸಿಕೆ ಪಡೆದಿರುವ ಕುರಿತಂತೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪರಿಶೀಲಿಸಲಿದ್ದಾರೆ. 72 ಗಂಟೆಗಳ ಮುಂಚೆ ಆರ್‌. ಟಿ.ಪಿ.ಸಿ.ಆರ್‌. ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಹೆತ್ತ ವರಿಗೆ ಮಾಹಿತಿ
ಅಂಗನವಾಡಿಯಲ್ಲಿ ಮಕ್ಕಳನ್ನು 1 ಮೀ. ಅಂತರದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. 1 ಮೀ. ಅಂತರದಲ್ಲಿ ಮಕ್ಕಳನ್ನು ಕೂರಿಸುವಾಗ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಕೇಂದ್ರದಲ್ಲಿ ಸ್ಥಳದ ಕೊರತೆಯಾದಲ್ಲಿ ಪ್ರತೀ ದಿನ ಎಷ್ಟು ಮಕ್ಕಳು ಬರಬೇಕು ಎಂಬುವುದನ್ನು ತೀರ್ಮಾನಿಸಲು ನಿರ್ಧರಿಸಿದ್ದು, ಯಾವ ಮಕ್ಕಳು ಬರಬೇಕು ಎಂಬುದರ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:ಅಫ್ಘಾನ್ ಮಣಿಸಿ ನ್ಯೂಜಿಲ್ಯಾಂಡ್ ಸೆಮಿ ಪ್ರವೇಶ : ಭಾರತದ ಕನಸು ಭಗ್ನ

Advertisement

ಮಧ್ಯಾಹ್ನದವರೆಗೆ ತರಗತಿ
ಮೊದಲ ಹಂತದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರ ವರೆಗೆ ಮಾತ್ರ ಅಂಗನವಾಡಿಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಮುಂದಿನ ಸೂಚನೆವರೆಗೆ ಪೂರಕ ಪೌಷ್ಟಿಕ ಆಹಾರವನ್ನು /ಆಹಾರ ಪದಾರ್ಥಗಳನ್ನು ಮನೆಗೆ ನೀಡಲಾಗುವುದು. 15 ದಿನಗಳ ಅನಂತರ ಪರಿಸ್ಥಿತಿಯನ್ನು ಅವಲೋಕಿಸಿ ಪೌಷ್ಟಿಕ ಆಹಾರವನ್ನು ಕೇಂದ್ರದಲ್ಲಿಯೇ ನೀಡಲಾಗುವುದು. ಕೇಂದ್ರದಲ್ಲಿ ಆಹಾರ ತಯಾರಿಸುವವರು ಮುಖಗವಸು, ಹೆಡ್‌ಕ್ಯಾಪ್ ಮತ್ತು ಏಪ್ರನ್‌ ಧರಿಸುವಂತೆ ಸೂಚನೆ ನೀಡಲಾಗಿದೆ.

ಸಿಹಿ ತಿನಿಸು ನೀಡಲು ಸೂಚನೆ
ಅಂಗನವಾಡಿ ಆರಂಭದ ದಿನದಂದು ಕೇಂದ್ರಗಳಲ್ಲಿ ಹಬ್ಬದ ವಾತಾವರಣ ಇರುವಂತೆ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಕೇಂದ್ರಗಳನ್ನು ತಳಿರು- ತೋರಣಗಳಿಂದ ಸಿಂಗರಿಸುವುದು, ಬಲೂನುಗಳಿಂದ ಅಲಂಕರಿಸುವುದು, ಪ್ರತಿ ಮಗುವನ್ನು ಗುಲಾಬಿ ಹೂ ನೀಡಿ ಸ್ವಾಗತಿಸುವುದು ಸಹಿತ ಪ್ರಾರಂಭದ ದಿನ ಸಿಹಿ ತಿನಿಸು ನೀಡುವಂತೆ ಸೂಚನೆ ನೀಡಲಾಗಿದೆ.

ಸಿದ್ಧತೆ ಸಂಪೂರ್ಣ
ರಾಜ್ಯ ಕೋವಿಡ್‌-19 ತಾಂತ್ರಿಕ ಸಲಹಾ ಸಮಿತಿಯ ಅನುಮೋದನೆಯಂತೆ ಜಿಲ್ಲೆಯಲ್ಲಿ ಇಂದಿನಿಂದ ಎಲ್ಲ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ವ್ಯವಸ್ಥಿತ ರೀತಿಯಲ್ಲಿ ಸಂಪೂರ್ಣ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲ ಅಂಗನವಾಡಿಗಳನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡುವಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರಕ್ಕೆ ಬರುವ ಪ್ರತೀ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಿದ್ದು, ಎಲ್ಲ ಅಂಗನವಾಡಿಗಳಲ್ಲಿ ಕೋವಿಡ್‌ ಸುರಕ್ಷಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು.
-ಡಾ| ವೈ. ನವೀನ್‌ ಭಟ್‌
ಪ್ರಭಾರ ಜಿಲ್ಲಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next