Advertisement

ಅಂಗನವಾಡಿ ನಿರ್ವಹಣೆ ಸಮರ್ಪಕವಾಗಿಲ್ಲ

09:10 PM Dec 28, 2019 | Lakshmi GovindaRaj |

ಕೆ.ಆರ್‌.ನಗರ: ತಾಲೂಕಿನಲ್ಲಿರುವ ಅಂಗನವಾಡಿಗಳ ನಿರ್ವಹಣೆ ಮತ್ತು ಕಟ್ಟಡಗಳ ಕಾಮಗಾರಿಗಳನ್ನು ಸಮರ್ಪಕವಾಗಿ ನೋಡಿಕೊಳ್ಳುವ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ವಿಫ‌ಲರಾಗಿದ್ದಾರೆ ಎಂದು ತಾಪಂ ಅಧ್ಯಕ್ಷ ಕೆ.ಪಿ.ಯೋಗೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಪಟ್ಟಣದ ತಾಪಂ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಹತ್ತಾರು ಅಂಗನವಾಡಿ ಕೇಂದ್ರಗಳ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ ಮತ್ತು ಕೆಲವು ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಆದರೆ ಈ ವಿಚಾರವನ್ನು ಸಭೆಯ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಇಲಾಖೆಯ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಶ್ರೀನಿವಾಸಪ್ರಸಾದ್‌, ಗೊರಗುಂಡಿ ಗ್ರಾಮದ ಅಂಗನವಾಡಿ ಕೇಂದ್ರದ ತಡೆಗೋಡೆಯನ್ನು ಸಾರ್ವಜನಿಕರೊಬ್ಬರು ಬೀಳಿಸಿ ತಿಂಗಳುಗಳೇ ಕಳೆದರೂ ಈವರೆಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಅವರು ಅಂಗನವಾಡಿ ಸುತ್ತಮುತ್ತ ಸ್ವತ್ಛತೆ ಮತ್ತು ನೈರ್ಮಲ್ಯತೆ ಕಾಪಾಡುತ್ತಿಲ. ಇದರಿಂದ ಮಕ್ಕಳಿಗೆ ತೊಂದರೆಯಾದರೆ ಯಾರು ಹೊಣೆ ಎಂದು ಹೇಳಿದರು.

ಸದಸ್ಯ ಕೆ.ಎಲ್‌.ಲೋಕೇಶ್‌ ಮಾತನಾಡಿ, ತಾಲೂಕು ಸ್ತ್ರೀ-ಶಕ್ತಿ ಬ್ಲಾಕ್‌ ಸೊಸೈಟಿಗಳ ಚುನಾವಣೆ ನಡೆಸಿ ಆರು ವರ್ಷಗಳು ಕಳೆದಿದ್ದು, ಈವರೆಗೆ ಯಾಕೆ ಮತ್ತೆ ಚುನಾವಣೆ ಮಾಡಿಲ್ಲ ಎಂದು ಸಿಡಿಪಿಒ ಇಲಾಖೆಯ ಅಕ್ಕಮಹದೇವಿ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮದ್ಯ ಪ್ರವೇಶಿಸಿದ ಅಧ್ಯಕ್ಷರು ಇನ್ನೊಂದು ವಾರದಲ್ಲಿ ತಾಲೂಕು ಪಂಚಾಯಿತಿಗೆ ವರದಿ ಸಲ್ಲಿಸಬೇಕು ಎಂದು ಆದೇಶಿಸಿದರು.

ತಾಲೂಕಿನ ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಕಂಚುಗಾರಕೊಪ್ಪಲು ಗ್ರಾಮದ ಬಾಲಕೃಷ್ಣ ಮತ್ತು ಅವರ ಪತ್ನಿ ಗೌರಮ್ಮ ಅವರಿಗೆ ಪಂಚಾಯಿತಿಯಿಂದ ಆಶ್ರಯ ಮನೆಯ ಮತ್ತು ತೋಟಗಾರಿಕೆ ಇಲಾಖೆಯಿಂದ ತರಕಾರಿ ಶೇಖರಣಾ ಕೊಠಡಿ ನಿರ್ಮಾಣಕ್ಕೆ ಸಹಾಯಧನ ನೀಡಲಾಗಿದ್ದು ಇದರಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದಾಗ ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ ಭರವಸೆ ನೀಡಿ ತೋಟಗಾರಿಕೆ ಇಲಾಖೆಯ ಸಹಾಯಧನ ಹಿಂದಕ್ಕೆ ಪಡೆಯಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement

ಸದಸ್ಯ ಜಯರಾಮೇಗೌಡ ಮಾತನಾಡಿ, ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೋಬಳಿವಾರು ಸಭೆಗಳನ್ನು ನಡೆಸಿ ಸರ್ಕಾರದ ಸವಲತ್ತುಗಳ ಸದ್ಬಳಕೆಯ ಬಗ್ಗೆ ರೈತರಿಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಸದಸ್ಯರಾದ ಎಂ.ನಾಗರಾಜು, ಮಮತಮಹೇಶ್‌, ಬಿ.ಎಂ.ಮಹದೇವ್‌ ಮಾತನಾಡಿ, ಅಧಿಕಾರಿಗಳು ಸದಾ ಚುನಾಯಿತ ಜನಪ್ರತಿನಿಧಿಗಳ ಸಂಪರ್ಕದಲ್ಲಿದ್ದು ರೈತರು ಮತ್ತು ಅರ್ಹ ಫ‌ಲಾನುಭವಿಗಳಿಗೆ ಸವಲತ್ತುಗಳನ್ನು ಒದಗಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸದಸ್ಯರಾದ ಸಿದ್ದಮ್ಮದೇವರಾಜು, ಜಿ.ಎಸ್‌.ಮಂಜುನಾಥ್‌, ರತ್ನಮ್ಮಮಂಜುನಾಥ್‌, ಶೋಭಾಕೋಟೇಗೌಡ, ಪುಟ್ಟಗೌರಮ್ಮ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next