ಪಂಜಾಬ್: ಲೂಧಿಯಾನದಲ್ಲಿರುವ ಶಿವಸೇನಾ ಮುಖಂಡ ಯೋಗೇಶ್ ಬಕ್ಷಿ ಅವರ ಮನೆಯ ಮೇಲೆ ಬೈಕ್ ನಲ್ಲಿ ಬಂದ ಅಪರಿಚಿತ ಯುವಕರ ತಂಡವೊಂದು ಪೆಟ್ರೋಲ್ ಬಾಂಬ್ ಎಸೆದಿರುವುದಾಗಿ ವರದಿಯಾಗಿದೆ.
ಘಟನೆಯಲ್ಲಿ ಯೋಗೇಶ್ ಬಕ್ಷಿ ಅವರ ಕಾರಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ, ಘಟನೆ ನಡೆದ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಚಂದ್ರನಗರದ ಮೂರನೇ ರಸ್ತೆಯಲ್ಲಿ ವಾಸಿಸುತ್ತಿರುವ ಯೋಗೇಶ್ ಬಕ್ಷಿ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸುವ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೆಟ್ರೋಲ್ ಬಾಂಬ್ ಎಸೆದ ವೇಳೆ ಸದ್ದು ಕೇಳಿ ಬಕ್ಷಿ ಮನೆಯಿಂದ ಹೊರಗೆ ಬಂದು ನೋಡಿದಾಗ ಕಾರು ಬೆಂಕಿಗಾಹುತಿಯಾಗಿದೆ ಕೂಡಲೇ ನೀರು ಹಾಕಿ ಬೆಂಕಿ ನಂದಿಸಲಾಯಿತು ಮನೆಗೆ ಯಾವುದೇ ತೊಂದರೆ ಆಗಲಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆಯೂ ಬೆದರಿಕೆ ಬಂದಿತ್ತು:
ಯೋಗೇಶ್ ಬಕ್ಷಿ ಅವರಿಗೆ ಈ ಹಿಂದೆಯೂ ಹಲವು ಬಾರಿ ಬೆದರಿಕೆ ಕರೆಗಳು ಬಂದಿದ್ದವು ಎಂದು ಹೇಳಿದ್ದಾರೆ, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೈಬೋವಾಲ್ ಪೊಲೀಸ್ ಠಾಣೆ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.