ಗುರುಮಠಕಲ್: ತಾಲೂಕಿನ ಗಾಜರಕೋಟ ಗ್ರಾಮದ ಅಂಬೇಡ್ಕರ್ ನಗರ 1ನೇ ಅಂಗನವಾಡಿ ಕೇಂದ್ರದ ಮುಂಭಾಗ ಚರಂಡಿಯಲ್ಲಿ ಕೊಳಚೆ ನೀರು ತುಂಬಿ ಗಬ್ಬೆದ್ದು ನಾರುತ್ತಿದೆ.
ಬಡಾವಣೆಯಲ್ಲಿರುವ ಅಂಗನವಾಡಿಯಲ್ಲಿ 70 ಮಕ್ಕಳು ಇದ್ದಾರೆ. ಅದರಲ್ಲಿ 40 ವಿದ್ಯಾರ್ಥಿಗಳು 6 ತಿಂಗಳಿಂದ 3 ವರ್ಷ ವಿದ್ಯಾಥಿಗಳ ಮನೆಗೆ ಊಟ ಕಳುಹಿಸಲಾಗುತ್ತದೆ. ಇನ್ನುಳಿದ 3 ವರ್ಷಯಿಂದ 6 ವರ್ಷದ 30 ವಿದ್ಯಾರ್ಥಿಗಳು ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ. ನಿತ್ಯ 20ರಿಂದ 25 ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಮಾತೃಪೂರ್ಣ ಯೋಜನೆಯಡಿ ಆರು ಗರ್ಭಿಣಿಯರು, ಒಂಬತ್ತು ಬಾಣಂತಿಯರು ನೋಂದಾಯಿಸಿಕೊಂಡಿದ್ದಾರೆ. ಅಂಗನವಾಡಿ ಸುತ್ತ ಕಲುಷಿತ ವಾತಾವರಣವಿದ್ದು, ಸದಾ ದುರ್ವಾಸನೆ ಬೀರುತ್ತಿರುತ್ತದೆ. ಅಂಬೆಡ್ಕರ್ ನಗರದಲ್ಲಿ 1ನೇ ಅಂಗನವಾಡಿ ಕೇಂದ್ರ ಆರಂಭವಾಗಿ 25 ವರ್ಷ ಕಳೆದರೂ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಕಾಂಪೌಂಡ್, ಕುಡಿಯುವ ನೀರಿನ ನಳದ ಸೌಲಭ್ಯವಿಲ್ಲದೆ ಮಕ್ಕಳು ಪರಿತಪಿಸುವಂತಾಗಿದೆ.
ಅಂಬೆಡ್ಕರ್ ನಗರದ ಕೊನೆ ಭಾಗದಲ್ಲಿರುವ ಅಂಗನವಾಡಿ ಮುಂಭಾಗದಲ್ಲೇ ಇಡೀ ಬಡಾವಣೆ ಕೊಳಚೆ ನೀರು ನಿಲ್ಲುತ್ತದೆ. ಪರಿಣಾಮ ಸುತ್ತಲಿನ ಖಾಲಿ ಪ್ರದೇಶದಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ. ಹಂದಿಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ. ಮಕ್ಕಳು ಕೈಯಲ್ಲಿ ಬ್ರೆಡ್, ಉಂಡಿ ಸೇರಿದಂತೆ ಇನ್ನಿತರೆ ತಿನಿಸು ಹಿಡಿದುಕೊಂಡು ಅಂಗನವಾಡಿಗೆ ಬಂದರೆ ಹಂದಿಗಳು ದಾಳಿ ಮಾಡುತ್ತವೆ. ಇದರಿಂದಾಗಿ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂಜರಿಯುತ್ತಾರೆ.
ದಿನವಿಡೀ ಮಕ್ಕಳನ್ನು ಕಾಯುವುದು ಸವಾಲಿನ ಕೆಲಸವಾಗಿದೆ ಎಂಬುದು ಅಂಗನವಾಡಿ ಕಾರ್ಯಕರ್ತೆ ರೇಣುಕಾ ಅವರ ಅಳಲು. ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಅಂಗನವಾಡಿ ಕೇಂದ್ರದ ಪರಿಸ್ಥಿತಿ ಶೋಚನೀಯವಾಗಿದೆ. ಸುತ್ತಲೂ ಬೆಳೆದಿರುವ ಜಾಲಿಗಿಡಗಳನ್ನು ತೆರವುಗೊಳಿಸಲು ಹಾಗೂ ಕಾಂಪೌಂಡ್ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
ಅಂಬೇಡ್ಕರ್ ನಗರದಲ್ಲಿರುವ ಅಂಗನವಾಡಿ ಕೇಂದ್ರದ ಕಾಂಪೌಡ್ ಕಟ್ಟಡ ಬಗ್ಗೆ ನಮ್ಮ ಗಮನಕ್ಕೂ ಬಂದಿಲ್ಲ. ಈಗ ನಮ್ಮ ಗಮನಕ್ಕೆ ಬಂದಿದೆ. ನಾವು ತಕ್ಷಣವೇ ಉದ್ಯೋಗ ಖಾರ್ತಿ ಯೋಜನೆಯಲ್ಲಿ ಇಟ್ಟು ಒಂದು ಎರಡು ತಿಂಗಳಲ್ಲಿ ನಿರ್ಮಾಣ ಮಾಡಿತ್ತೇವೆ
. –ಮಹದೇವಪ್ಪ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಾಜರಕೋಟ
-ಚೆನ್ನಕೇಶವುಲು ಗೌಡ