Advertisement

Salary!;ಅಂಗನವಾಡಿ ನೌಕರರಿಗಿಲ್ಲ ಭಾಗ್ಯ!; ಸಿಗುವುದೇ ಅತ್ಯಲ್ಪ,ಅದೂ 3 ತಿಂಗಳುಗಳಿಂದ ಬಂದಿಲ್ಲ

12:20 AM Aug 25, 2024 | Team Udayavani |

ಕುಂದಾಪುರ/ ಬೆಂಗಳೂರು: ಸಣ್ಣ ಮಕ್ಕಳ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಅಂಗನವಾಡಿ ನೌಕರರಿಗೆ ಮೂರು ತಿಂಗಳುಗಳಿಂದ ವೇತನ ಸಿಕ್ಕಿಲ್ಲ. ಈ ಆರ್ಥಿಕ ಸಾಲಿನಲ್ಲಿ ಅನುದಾನವೇ ಬಿಡುಗಡೆಯಾಗಿಲ್ಲ. ಎಲ್ಲ ಜಿಲ್ಲೆಗಳಿಂದ 3 ತಿಂಗಳ ವೇತನಕ್ಕಾಗಿ ಹಣ ಮಂಜೂರಾತಿಗೆ ಬೇಡಿಕೆ ಹೋದರೂ ಇಂದು, ನಾಳೆ ಎಂಬ ಉತ್ತರವಷ್ಟೇ ದೊರೆಯುತ್ತಿದೆ. ಜತೆಗೆ ತಾಂತ್ರಿಕ ಕಾರಣದ ನೆಪ ಹೇಳಲಾಗುತ್ತಿದೆ.

Advertisement

ರಾಜ್ಯದಲ್ಲಿ 63,030 ಅಂಗನವಾಡಿ ಕೇಂದ್ರಗಳು
ರಾಜ್ಯದಲ್ಲಿ 63,030 ಅಂಗನವಾಡಿ ಕೇಂದ್ರಗಳಿವೆ. ಉಡುಪಿ ಜಿಲ್ಲೆಯಲ್ಲಿ 1,222, ಕುಂದಾಪುರದಲ್ಲಿ 432 ಅಂಗನ ವಾಡಿಗಳಿವೆ. ಬಹುತೇಕ ಅಂಗನವಾಡಿಗಳಲ್ಲಿ ಕಾರ್ಯಕರ್ತೆ ಯರು ಹಾಗೂ ಸಹಾಯಕಿಯರಿದ್ದಾರೆ.

ಬೀದರ್‌, ದೇವದುರ್ಗ, ಶಿವಮೊಗ್ಗ ಸಹಿತ ಕೆಲವು ಜಿಲ್ಲೆಗಳಲ್ಲಿ ಐದು ತಿಂಗಳುಗಳಿಂದ ಹಾಗೂ ಉಳಿದ ಜಿಲ್ಲೆಗಳಲ್ಲಿ ಜೂನ್‌, ಜುಲೈ, ಆಗಸ್ಟ್‌ ಸೇರಿ 3 ತಿಂಗಳು ಗಳಿಂದ ಅಂಗನವಾಡಿ ಕಾರ್ಯಕರ್ತೆ ಯರಿಗೆ ಸಂಬಳವಾಗಿಲ್ಲ. ಈ ಕುರಿತು ಇಲಾಖೆಗೆ ಮನವಿ ಪತ್ರ
ಕೊಡಲಾಗಿದೆ. –ಸುನಂದಾ,ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ

ಕಾರ್ಯಕರ್ತೆಯರು, ಸಹಾಯಕಿಯರು ಸರಕಾರ ದಿಂದ ಬರುವ ಗೌರವಧನವನ್ನೇ ನಂಬಿ ಕೊಂಡಿದ್ದಾರೆ. ಮನೆ ನಡೆಸಲು, ಬೇರೆ ಬೇರೆ ಕಾರಣಗಳಿಗೆ ಸಾಲಸೋಲ ಮಾಡಿದವರಿಗೆ ಪಾವತಿ ಕಷ್ಟವಾಗುತ್ತಿದೆ. ಪ್ರತೀ ತಿಂಗಳು ಸಕಾಲದಲ್ಲಿ ಗೌರವಧನ ಪಾವತಿಗೆ ಕ್ರಮ ಕೈಗೊಳ್ಳಬೇಕು.
-ಉಷಾ ಕೆ. ಕುಂದಾಪುರ ರಾಜ್ಯ ಕಾರ್ಯದರ್ಶಿ,ಅಂಗನವಾಡಿ ಕಾರ್ಯಕರ್ತೆಯರ ಸಂಘ

ಅತ್ಯಲ್ಪ ಗೌರವಧನ

Advertisement

ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 11 ಸಾವಿರ ರೂ. ಹಾಗೂ ಸಹಾಯಕಿಯರಿಗೆ 6 ಸಾವಿರ ರೂ. ಗೌರವಧನ ಇದೆ. ಈ ವೇತನದ ಆಧಾರದಲ್ಲಿ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಂತು ಪಾವತಿಸುವ ಸಾಲ ಪಡೆದವರಿದ್ದಾರೆ. ಹೆಚ್ಚಿನವರಿಗೆ ಕುಟುಂಬ ನಿರ್ವಹಣೆಗಿರುವ ಆದಾಯ ಇದೇ ಆಗಿದೆ.

ಖಾಲಿ ಹುದ್ದೆ ತುಂಬಲು ಕ್ರಮ
ಖಾಲಿ ಇರುವ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ 57 ಕಾರ್ಯಕರ್ತೆಯರು, 136 ಸಹಾಯಕಿಯರು, ಕುಂದಾಪುರದಲ್ಲಿ 31 ಕಾರ್ಯಕರ್ತೆಯರು, 52 ಸಹಾಯಕಿಯರ ಹುದ್ದೆ ಖಾಲಿ ಇದ್ದು, ಇದನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಗೌರವಧನ ಪಾವತಿಗೆ ಅನುದಾನ ಮಂಜೂರು ಮಾಡುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಮಂಜೂರಾಗುವ ಭರವಸೆ ದೊರೆತಿದೆ.
-ಶ್ಯಾಮಲಾ, ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next